ಕನ್ನಡಪ್ರಭ ವಾರ್ತೆ ನಾಪೋಕ್ಲು
ಧರ್ಮ ಎಂದರೆ ನಮ್ಮನ್ನು ನಾವು ಪರಿವರ್ತನೆ ಮಾಡಿಕೊಂಡು ನಮ್ಮೊಳಗೆ ಬೆಳಕು ತರುವಂತದ್ದು. ಇದನ್ನು ಪರಿವರ್ತನೆಯ ಸಮಯ ಅಂತ ನಾವು ಭಾವಿಸಬೇಕು ಎಂದು ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಜಿ ಅಭಿಪ್ರಾಯಪಟ್ಟಿದ್ದಾರೆ.ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ವಿರಾಜಪೇಟೆ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಜ್ಞಾನ ಗಂಗಾ ಭವನ ಇವರ ವತಿಯಿಂದ ೮೮ನೇ ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವದ ಪ್ರಯುಕ್ತ ವಿರಾಜಪೇಟೆ ನಗರದ ತಾಲೂಕು ಮೈದಾನದಲ್ಲಿ ಭಾರತದ ಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯದರ್ಶನ ಮತ್ತು ಆದ್ಯಾತ್ಮಿಕ ಚಿತ್ರಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಅಂತರಂಗದಲ್ಲಿರುವ ಅಜ್ಞಾನ ತೊಲಗಿಸಿ ಜ್ಞಾನದ ಚಕ್ಷು ಬೀರಬೇಕು. ಜ್ಞಾನದ ಚಕ್ಷು ಇಲ್ಲದೆ ಸಿರಿಸಂಪತ್ತು, ಸಾಮ್ರಾಜ್ಯ, ತಂದಿಟ್ಟರೂ ಅದನ್ನು ಅನುಭವಿಸಲು ಹೊರಟಾಗ ನಮಗೆ ಶೂನ್ಯವೇ ಲಭಿಸುತ್ತದೆ. ಇಂದು ಎಲ್ಲ ಕಡೆ ಹಿಂಸೆ, ಕ್ರೋಧ, ಆಕ್ರೋಶ, ಅಸೂಯೆಗಳಲ್ಲಿ ತೊಡಗಿಸಿಕೊಂಡು ಜೀವನ ಎನೂ ಎಂಬುವುದನ್ನು ಮರೆತಿದ್ದಾರೆ. ತಾನು ಬದುಕುವುದರ ಜೊತೆಗೆ ಎಲ್ಲರನ್ನೂ ಪ್ರೀತಿಸುವಂತಾಗಬೇಕು. ದ್ವೇಷ ತೊಡೆದು ಹಾಕಬೇಕು.ಜಗತ್ತು ನನ್ನದು ಅಂತ ಪರಿಭಾವಿಸುವವನು ಜಗದ್ಗುರು ಆಗುತ್ತಾನೆ ಎಂದರು. ಸೇವಾದಾರಿ ಮೈಸೂರಿನ ಪ್ರಾಣೇಶ್ ಮಾತನಾಡಿ, ನಮ್ಮೊಳಗಿನ ಪರಿವರ್ತನೆ ಪ್ರಸ್ತುತ ಸಮಾಜದಲ್ಲಿ ಬಹಳ ಅವಶ್ಯಕವಾಗಿದೆ. ಭಗವಂತನ ಧ್ಯಾನದಿಂದ ಜ್ಞಾನ ಲಭಿಸುತ್ತದೆ. ನಮ್ಮೊಳಗಿನ ಅಂತಃಚಕ್ಷು ಜಾಗೃತವಾಗುತ್ತದೆ ಎಂದರು.ಹಾಕಿ ಕೋಚ್, ನಿವೃತ್ತ ಸೈನಿಕ ಪ್ರಿನ್ಸ್ ಗಣಪತಿ ಮಾತನಾಡಿ ನಮ್ಮ ಜೀವನದಲ್ಲಿ ಕಲಿಯುವಂತದ್ದು ಬಹಳಷ್ಟಿದೆ ಎಂದರು.
ಮಡಿಕೇರಿ ಶಾಖೆಯ ಧನಲಕ್ಷ್ಮೀ ಮಾತನಾಡಿ, ಜ್ಯೋರ್ತಿಲಿಂಗದ ಪುಣ್ಯದರ್ಶನ ಮಾಡುವುದರ ಮೂಲಕ ಅಂತರಂಗದ ಆವಿಷ್ಕಾರ ಮಾಡಿ ಅಜ್ಞಾನದ ಕತ್ತಲು ತೊಲಗಿಸಿ ಜ್ಞಾನದ ಬೆಳಕು ಹೆಚ್ಚಾಗಬೇಕು ಎಂದರು.ಜ್ಞಾನ ಗಂಗಾ ಭವನದ ಮುಖ್ಯಸ್ಥೆ ಕೋಮಲ ಮಾತನಾಡಿ, ಆರು ದಿನಗಳ ಕಾಲ ಪ್ರವಚನ, ಜೀವನದಲ್ಲಿ ಸುಖ ಶಾಂತಿ, ನೆಮ್ಮದಿ ಮತ್ತು ಉತ್ತಮ ಆರೋಗ್ಯ ದೊರಕಲೆಂದು ಜ್ಯೋತಿರ್ಲಿಂಗಗಳ ಪುಣ್ಯ ದರ್ಶನಕ್ಕಾಗಿ ಬೆಳಗ್ಗೆ 7ರಿಂದ ರಾತ್ರಿ 8ರ ವರೆಗೆ ಮಹಿಳೆಯರಿಗೆ, ಮಕ್ಕಳಿಗೆ, ಸಾರ್ವಜನಿಕರಿಗೆ ಪ್ರತ್ಯೆಕ ವ್ಯವಸ್ಥೆ ಮಾಡಲಾಗಿದೆ ಎಂದರು.
ಮೈಸೂರು ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ಮುಖ್ಯ ಸಂಚಾಲಕರಾದ ರಾಜಯೋಗಿನಿ ಬಿ.ಕೆ.ಲಕ್ಷ್ಮೀ ಜಿ. ಮಾತನಾಡಿ, ಮನಸ್ಸನ್ನು ಬಲಶಾಲಿ ಮಾಡಿಕೊಳ್ಳಲು ರಾಜಯೋಗ (ಮೆಡಿಟೇಶನ್) ಅಭ್ಯಾಸ ಮಾಡಬೇಕು. ಇದರಲ್ಲಿ ಸ್ವಯಂ ನಾನು ಯಾರು ಎಂಬುದು ಹಾಗೂ ಪರಮಾತ್ಮನ ಸತ್ಯ ಪರಿಚಯದ ಅವಶ್ಯಕತೆ ಇದೆ ಎಂದರು.ವಿದ್ಯಾರಣ್ಯಪುರಂ ಶಾಖೆಯ ಸಂಚಾಲಕಿ ಯತ್ನ ಮತ್ತಿತರರು ಇದ್ದರು. ಭರತನಾಟ್ಯ ಪ್ರದರ್ಶನ ನಡೆಯಿತು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಇಲ್ಲಿ ಮಾ.1ರ ವರೆಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಜ್ಯೋತಿರ್ಲಿಂಗಗಳ ದರ್ಶನ ಕಾರ್ಯಕ್ರಮ ನಡೆಯಲಿದೆ.