ಚನ್ನಗಿರಿಯಲ್ಲಿ ವಿರಾಟ್ ಹಿಂದೂ ಮಹಾಗಣಪತಿ ಶೋಭಾಯಾತ್ರೆ

KannadaprabhaNewsNetwork |  
Published : Sep 25, 2025, 01:00 AM IST
ಮೆರವಣಿಗೆಯಲ್ಲಿ ಎಲ್ಲರ ಗಮನೆ ಸೆಳೆಯುತ್ತಿದ್ದ ಬೃಹತ್ ಗಾತ್ರದ ಆಂಜನೇಯ ಸ್ವಾಮಿ | Kannada Prabha

ಸಾರಾಂಶ

ಚನ್ನಗಿರಿ ಪಟ್ಟಣದ ಊರಬಾಗಿಲ ಶ್ರೀ ಹನುಮಂತ ದೇವರ ದೇವಾಲಯ ಸಭಾ ಮಂಟಪದಲ್ಲಿ ವಿ.ಎಚ್.ಪಿ- ಬಜರಂಗದಳ ವತಿಯಿಂದ ಪ್ರತಿಷ್ಠಾಪಿಸಿದ್ದ ವಿರಾಟ್ ಹಿಂದೂ ಮಹಾಗಣಪತಿಯ ವಿಸರ್ಜನಾ ಪೂರ್ವ ಬೃಹತ್ ಶೋಭಾಯಾತ್ರೆ ಬುಧವಾರ ಸಾವಿರಾರು ಭಕ್ತರ ಸಮ್ಮುಖ ನಡೆಯಿತು.

- ಶ್ರೀ ಬಸವ ಜಯಚಂದ್ರ ಸ್ವಾಮೀಜಿ ಚಾಲನೆ । ಪ್ರತಾಪ ಸಿಂಹ, ವಿರೂಪಾಕ್ಷಪ್ಪ ಇನ್ನಿತರ ಗಣ್ಯರು ಭಾಗಿ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ಊರಬಾಗಿಲ ಶ್ರೀ ಹನುಮಂತ ದೇವರ ದೇವಾಲಯ ಸಭಾ ಮಂಟಪದಲ್ಲಿ ವಿ.ಎಚ್.ಪಿ- ಬಜರಂಗದಳ ವತಿಯಿಂದ ಪ್ರತಿಷ್ಠಾಪಿಸಿದ್ದ ವಿರಾಟ್ ಹಿಂದೂ ಮಹಾಗಣಪತಿಯ ವಿಸರ್ಜನಾ ಪೂರ್ವ ಬೃಹತ್ ಶೋಭಾಯಾತ್ರೆ ಬುಧವಾರ ಸಾವಿರಾರು ಭಕ್ತರ ಸಮ್ಮುಖ ನಡೆಯಿತು. ಬೆಳಗ್ಗೆ 11.30ರ ಸಮಯಕ್ಕೆ ಅಲಂಕೃತ ವಾಹನದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಗಣಪತಿ ಹೊತ್ತ ವಾಹನವನ್ನು ಹಾಲಸ್ವಾಮಿ ವಿರಕ್ತ ಮಠದ ಶ್ರೀ ಬಸವ ಜಯಚಂದ್ರ ಮಹಾಸ್ವಾಮಿಗಳು ಚಲಾಯಿಸುವ ಮೂಲಕ ಬೃಹತ್ ಶೋಭಾಯಾತ್ರೆಗೆ ಚಾಲನೆ ನೀಡಿದರು. ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ದಾವಣಗೆರೆ ಪಾಲಿಕೆಯ ಮಾಜಿ ಅಧ್ಯಕ್ಷ ಬಿ.ಜಿ.ಅಜೇಯ್ ಕುಮಾರ್, ಲೋಕಿಕೆರೆ ನಾಗರಾಜ್, ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್, ತುಮ್ ಕೋಸ್ ಸಂಸ್ಥೆ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಇತರರು ಪಾಲ್ಗೊಂಡು ಪೂಜೆ ಸಲ್ಲಿಸಿದರು.

ಅದ್ಧೂರಿ ಮೆರವಣಿಗೆ ವೇಳೆ ಶ್ರೀ ಬೀರಲಿಂಗೇಶ್ವರ ದೇವಾಲಯ ಬಳಿ ಮತ್ತು ಗಣಪತಿ ವೃತ್ತದಲ್ಲಿ ಮತ್ತು ಗಣಪತಿ ಹೊಂಡದ ಬಳಿ ವಿವಿಧ ಸಮಿತಿಗಳ ವತಿಯಿಂದ ಅನ್ನ ಸಂತರ್ಪಣೆ, ತಂಪು ಪಾನೀಯಗಳನ್ನು ವಿತರಿಸಲಾಯಿತು. ಪೇಟೆ ಬೀದಿಯ ದರ್ಗಾದ ಬಳಿ ಮುಸ್ಲಿಮರು ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದವರಿಗೆ ಕುಡಿಯುವ ನೀರು ವಿತರಿಸಿ, ಸೌಹಾರ್ದ ಮೆರೆದರು.

ಗಣಪತಿ ಶೋಭಾಯಾತ್ರೆಗೆ ಸರ್ಕಾರ ಡಿ.ಜೆ. ಸೌಂಡ್‌ ಸಿಸ್ಟಂ ಬಳಕೆ ರದ್ದುಗೊಳಿಸಿದೆ. ಈ ಹಿನ್ನೆಲೆ ಮಹಾರಾಷ್ಟ್ರದ ನಾಸಿಕ್ ಡೋಲ್, ತಮಟೆ, ವೀರಗಾಸೆ, ಗೊಂಬೆ ಕುಣಿತ, ಚಂಡೆ ಸೇರಿದಂತೆ ಮುಂತಾದ ಕಲಾತಂಡಗಳು ಶೋಭಾಯಾತ್ರೆಗೆ ಮೆರಗು ನೀಡಿದವು. ತಮಟೆ, ನಾಸಿಕ್ ಡೋಲ್ ಸದ್ದಿಗೆ ಯುವಕರು, ಮಹಿಳೆಯರು ಹೆಜ್ಜೆ ಹಾಕಿದರು.

ಗಣಪತಿ ವೃತ್ತದ ಬಳಿ ಗಣಪತಿ ಹೊತ್ತ ವಾಹನ ಬರುತ್ತಿದ್ದಂತೆಯೇ ಭಕ್ತರು ಗಣಪತಿ ಮೂರ್ತಿಗೆ ನೋಟಿನ ಹಾರವನ್ನು ಹಾಕಿ ಭಕ್ತಿ ಮೆರೆದರು. ಶೋಭಾಯಾತ್ರೆ ನಿಮಿತ್ತ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ವರಹಾಸ್ವಾಮಿ, ಛತ್ರಪತಿ ಶಿವಾಜಿ ಮಹಾರಾಜ, ಭಗೀರಥ ಮಹರ್ಷಿ, ಸಂಗೊಳ್ಳಿ ರಾಯಣ್ಣ, ಶ್ರೀರಾಮ, ಆಂಜನೇಯ, ಒನಕೆ ಒಬ್ಬವ್ವ ಸೇರಿದಂತೆ ಅನೇಕ ದೇವತೆಗಳು, ಸ್ವಾತಂತ್ರ್ಯ ಹೋರಾಟಗಾರರು, ದಾರ್ಶನಿಕರ ಪ್ರತಿಮೆಗಳನ್ನು ಅಲ್ಲಲ್ಲಿ ಪ್ರತಿಷ್ಠಾಪಿಸಿ ಅಲಂಕರಿಸಲಾಗಿತ್ತು.

ಶೋಭಾಯಾತ್ರೆಯಲ್ಲಿ ಬೃಹತ್ ಗಾತ್ರದ ಆಂಜನೇಯ ಸ್ವಾಮಿ ಎಲ್ಲರ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

- - -

-24ಕೆಸಿಎನ್ಜಿ2: ಮೆರವಣಿಗೆಯಲ್ಲಿ ಬೃಹತ್ ಆಂಜನೇಯ ಸ್ವಾಮಿ ಮೂರ್ತಿ ಎಲ್ಲರ ಗಮನ ಸೆಳೆಯಿತು.

-24ಕೆಸಿಎನ್ಜಿ3: ನಾಸಿಕ್ ಡೋಲ್, ತಮಟೆ ಸದ್ದಿಗೆ ಯುವಜನರು, ಮಹಿಳೆಯರು ಹೆಜ್ಜೆ ಹಾಕಿ ಕುಣಿದರು.

- 24ಕೆಸಿಎನ್‌ಜಿ4: ಗಣಪತಿ ವೃತ್ತದಲ್ಲಿ ವಿವಿಧ ಸಮಿತಿಗಳ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು.

- 24ಕೆಸಿಎನ್‌ಜಿ5: ಶೋಭಾಯಾತ್ರೆ ವೇಳೆ ಭಕ್ತರಿಗೆ ಮುಸ್ಲಿಮರು ನೀರು ವಿತರಿಸಿ ಸೌಹಾರ್ದ ಮೆರೆದರು.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ