ವಿಷ್ಣು ಸಮಾಧಿ ನೆಲಸಮ, ಅಭಿಮಾನಿಗಳ ಕಣ್ಣೀರು

KannadaprabhaNewsNetwork |  
Published : Aug 09, 2025, 02:05 AM ISTUpdated : Aug 09, 2025, 06:57 AM IST
Dr Vishnuvardhan Memorial

ಸಾರಾಂಶ

ಡಾ। ವಿಷ್ಣುವರ್ಧನ್‌ ಅಭಿಮಾನಿಗಳು ಮತ್ತು ನಟ ಬಾಲಣ್ಣ ಕುಟುಂಬ ನಡುವಿನ ಕಲಹ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಉತ್ತರಹಳ್ಳಿ ರಸ್ತೆಯಲ್ಲಿರುವ ಅಭಿಮಾನಿ ಸ್ಟುಡಿಯೋದಲ್ಲಿದ್ದ ಡಾ। ವಿಷ್ಣುವರ್ಧನ್ ಸಮಾಧಿಯನ್ನು ರಾತ್ರೋರಾತ್ರಿ ಪೊಲೀಸ್ ಭದ್ರತೆಯಲ್ಲಿ ನೆಲಸಮ ಮಾಡಲಾಗಿದೆ.

  ಬೆಂಗಳೂರು :  ಡಾ। ವಿಷ್ಣುವರ್ಧನ್‌ ಅಭಿಮಾನಿಗಳು ಮತ್ತು ನಟ ಬಾಲಣ್ಣ ಕುಟುಂಬ ನಡುವಿನ ಕಲಹ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಉತ್ತರಹಳ್ಳಿ ರಸ್ತೆಯಲ್ಲಿರುವ ಅಭಿಮಾನಿ ಸ್ಟುಡಿಯೋದಲ್ಲಿದ್ದ ಡಾ। ವಿಷ್ಣುವರ್ಧನ್ ಸಮಾಧಿಯನ್ನು ರಾತ್ರೋರಾತ್ರಿ ಪೊಲೀಸ್ ಭದ್ರತೆಯಲ್ಲಿ ನೆಲಸಮ ಮಾಡಲಾಗಿದೆ.

ಡಾ। ವಿಷ್ಣುವರ್ಧನ್ ಅವರ ಸಮಾಧಿಯನ್ನು ತೆರವುಗೊಳಿಸಲಾಗಿರುವುದು ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಅಭಿಮಾನಿ ಸ್ಟುಡಿಯೋ ಮುಂಭಾಗದಲ್ಲಿ ನೆರೆದ ಅಭಿಮಾನಿಗಳು ಕಣ್ಣೀರುಗರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಣ್ಣ ಕುಟುಂಬದ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ.

ಏಕಾಏಕಿ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರಿಂದ ಉತ್ತರಹಳ್ಳಿ ರಸ್ತೆಯಲ್ಲಿ ಕೆಲಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ ಅಭಿಮಾನಿಗಳನ್ನು ತೆರವುಗೊಳಿಸಿದರು ಪ್ರತಿಭಟನೆಯನ್ನು ನಿಲ್ಲಿಸಿದರು.

ಡಾ.ವಿಷ್ಣುವರ್ಧನ್‌ ಸಮಾಧಿ ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕೆಂಗೇರಿ ಠಾಣೆ ಪೊಲೀಸರಿಂದ ಸ್ಟುಡಿಯೋ ಸುತ್ತಮುತ್ತ ಬಿಗಿ ಭದ್ರತೆ ನೀಡಲಾಗಿದೆ.

ಬಹಳ ವರ್ಷಗಳಿಂದ ನಡೆಯುತ್ತಿದ್ದು, ಡಾ.ವಿಷ್ಣುವರ್ಧನ್‌ ಅವರನ್ನು ಅಂತ್ಯಕ್ರಿಯೆ ಮಾಡಿದ ಅಭಿಮಾನ್‌ ಸ್ಟುಡಿಯೋದ ಜಾಗದಲ್ಲಿಯೇ ವಿಷ್ಣು ಪುಣ್ಯಭೂಮಿ ಮಾಡಬೇಕು ಎಂಬುದು ಅಭಿಮಾನಿಗಳ ಒತ್ತಾಯವಾಗಿತ್ತು. ಈ ವಿಚಾರವಾಗಿ ಕಳೆದ 11 ವರ್ಷಗಳಿಂದ ವಿಷ್ಣು ಅಭಿಮಾನಿಗಳು ಹಾಗೂ ಅಭಿಮಾನ್‌ ಸ್ಟುಡಿಯೋ ಮಾಲೀಕರಾದ ಹಿರಿಯ ನಟ ಬಾಲಕೃಷ್ಣ ಕುಟುಂಬದ ನಡುವೆ ಕಾನೂನು ಹೋರಾಟ ನಡೆಯುತ್ತಿತ್ತು.

ಈ ಮಧ್ಯೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್‌ ಸೇರಿ ವಿಷ್ಣು ಕುಟುಂಬದವರು ಸಮಾಧಿ ಸ್ಥಳಕ್ಕಾಗಿ ನಡೆದ ಜಗಳದಿಂದ ನೊಂದು ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನೇ ನಿಲ್ಲಿಸಿದ್ದರು ಮತ್ತು ರಾಜ್ಯ ಸರ್ಕಾರ ಮೈಸೂರಿನಲ್ಲಿ ಮಂಜೂರು ಮಾಡಿದ ಸ್ಥಳದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಮಾಡಿದ್ದರು. ಅಭಿಮಾನಿಗಳು ಮಾತ್ರ ಅಂತ್ಯಕ್ರಿಯೆ ನಡೆದ ಜಾಗವೇ ತಮಗೆ ಮುಖ್ಯ ಎಂದು ಪಟ್ಟು ಹಿಡಿದಿದ್ದು, ಈ ವಿಚಾರ ಕೋರ್ಟ್‌ ಅಂಗಳಕ್ಕೆ ತಲುಪಿತ್ತು.

‘ಸ್ಮಾರಕ ನಿರ್ಮಾಣಕ್ಕೆ ಎಲ್ಲಿ ಜಾಗ ಬೇಕು ಎಂಬುದು ಡಾ.ವಿಷ್ಣುವರ್ಧನ್‌ ಕುಟುಂಬದ ಆಯ್ಕೆ ಮತ್ತು ಸರ್ಕಾರದ ನಿರ್ಧಾರ. ಇದರಲ್ಲಿ ಅಭಿಮಾನಿಗಳಿಗೆ ಯಾವುದೇ ರೀತಿಯ ಹಕ್ಕು ಇಲ್ಲ’ ಎಂದು ಆರು ತಿಂಗಳ ಹಿಂದೆ ಕೋರ್ಟ್ ಆದೇಶ ನೀಡಿತ್ತು. ಅದೇ ಪ್ರಕಾರ ಇದೀಗ ಪೊಲೀಸರ ಸಮ್ಮುಖದಲ್ಲಿ ಶುಕ್ರವಾರ ಬೆಳಗ್ಗಿನ ಜಾವ ವಿಷ್ಣುವರ್ಧನ್‌ ಅಂತ್ಯಕ್ರಿಯೆ ಮಾಡಿ ನಿರ್ಮಿಸಲಾಗಿದ್ದ ಸಮಾಧಿಯನ್ನು ತೆರವು ಮಾಡಲಾಗಿದೆ.

ಮೇರು ನಟಗೆ 10 ಗುಂಟೆ

ಜಾಗ ನೀಡದಕ್ಕೆ ಧಿಕ್ಕಾರ

ಕೊನೆಗೂ ಡಾ.ವಿಷ್ಣುವರ್ಧನ್ ಪುಣ್ಯಭೂಮಿಯನ್ನು ನೆಲಸಮ ಮಾಡಿಬಿಟ್ಟರು. 11 ವರ್ಷಗಳ ಹೋರಾಟ ನೀರಲ್ಲಿ ಹೋಮ ಮಾಡಿದಂತಾಯಿತು. ಡಾ.ವಿಷ್ಣುವರ್ಧನ್ ಅವರಿಗೆ ಹತ್ತು ಗುಂಟೆ ಜಾಗ ಕೊಡಲಾಗದ ಅಸಹಾಯಕ ಸರ್ಕಾರ ಇದು. ಅದರ ಮೇಲೆ ನಂಬಿಕೆ ಕಳೆದುಕೊಂಡು ನಾವು ಕೋರ್ಟ್ ಮೆಟ್ಟಿಲೇರಿದ್ದೆವು. ಕೋರ್ಟ್ ಅತ್ಯಂತ ಸ್ಪಷ್ಟವಾಗಿ ‘ಈ ವಿಷಯದಲ್ಲಿ ಅಭಿಮಾನಿಗಳಾದ ನಿಮಗೆ ಯಾವುದೇ ಹಕ್ಕಿಲ್ಲ. ಅವರ ಕುಟುಂಬ ಅಥವಾ ಸರ್ಕಾರವಷ್ಟೇ ಕೇಳಬೇಕು’ ಎಂದುಬಿಟ್ಟಿತು. ಆಗ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್‌, ಶಿವರಾಜ್‌ ತಂಗಡಗಿ ಅವರು ಪುಣ್ಯಭೂಮಿ ಉಳಿಸುವ ಭರವಸೆ ಕೊಟ್ಟರು. ಆದರೆ, ರಾತ್ರೋರಾತ್ರಿ ನೂರಾರು ಪೋಲೀಸರ ನೇತೃತ್ವದಲ್ಲಿ ಡಾ.ವಿಷ್ಣುವರ್ಧನ್‌ ಅವರ ಸಮಾಧಿ ನೆಲಸಮ ಮಾಡಿದ್ದಾರೆ. ಇದಕ್ಕೆ ಏನು ಹೇಳಬೇಕು? ಒಬ್ಬ ಮೇರು ಕಲಾವಿದನಿಗೆ ಹತ್ತು ಗುಂಟೆ ಜಾಗ ಕೊಡಲಾಗದಂತಹ ವ್ಯವಸ್ಥೆಗೆ ಧಿಕ್ಕಾರವಿರಲಿ.

- ವೀರಕಪುತ್ರ ಶ್ರೀನಿವಾಸ್‌, ⁠ಡಾ. ವಿಷ್ಣು‌ ಸೇನಾ ಸಮಿತಿ ಅಧ್ಯಕ್ಷ.

ಆಗಿನ ಸರ್ಕಾರದ್ದೇ ತಪ್ಪು

ಡಾ. ವಿಷ್ಣುವರ್ಧನ್‌ ಅವರನ್ನು ಅಂತ್ಯಕ್ರಿಯೆ ಮಾಡಿದ ಜಾಗಕ್ಕೆ ಸರ್ಕಾರಿ ಬೆಲೆಯಲ್ಲಿ ನಾನೇ ಹಣ ಕೊಡುತ್ತೇನೆ. ಡಾ.ವಿಷ್ಣುವರ್ಧನ್‌ ಅವರ ಸಮಾಧಿ ಉಳಿಸಿಕೊಳ್ಳಿ ಎಂದಿದ್ದೆ. ಆದರೆ, ಕೋರ್ಟ್‌ನಲ್ಲಿರುವಾಗ ಹಾಗೆ ಮಾಡಲು ಬರುವುದಿಲ್ಲ ಎಂದಿದ್ದರು. ಈಗ ಸಮಾಧಿಯನ್ನೇ ತೆರವುಗೊಳಿಸಿದ್ದಾರೆ. ಇದರಲ್ಲಿ ಬಾಲಣ್ಣ ಕುಟುಂಬದ್ದು ತಪ್ಪಿಲ್ಲ. ಮುಂದಾಲೋಚನೆ ಇಲ್ಲದೆ ಇಲ್ಲಿ ಅಂತ್ಯಕ್ರಿಯೆ ಮಾಡಿದ ಸರ್ಕಾರದ ತಪ್ಪು.

-ಕೆ.ಮಂಜು, ನಿರ್ಮಾಪಕ.

ವಿಷ್ಣು ಎರಡನೇ ಸಲ ಸತ್ತರು

ಡಾ। ವಿಷ್ಣುವರ್ಧನ್ ಅವರ ಸಮಾಧಿ ತೆಗೆಯುತ್ತಿದ್ದಾರೆ ಅಂದಾಗ ಓಡಿ ಬಂದೆ. ಬರುವಷ್ಟರಲ್ಲಿ ಸಮಾಧಿ ನೆಲಸಮ ಮಾಡಿದ್ದರು. ಆ ಜಾಗದಲ್ಲಿ ನಾಯಿ ಮಲಗಿತ್ತು. ನೋಡಿ ದುಃಖ ಆಯಿತು. ಇವತ್ತು ಎರಡನೇ ಸಲ ನಮ್ಮ ವಿಷ್ಣುವರ್ಧನ್ ಸತ್ತು ಹೋದರು. ಪಾಪ ಕಾದು ಕಾದು ಸಾಕು ಅಂತ ಅವರೇ ಹಬ್ಬದ ದಿವಸ ಹೊರಟು ಬಿಟ್ಟರು. ಬ್ರಾಹ್ಮಣನ ಶಾಪ ತಟ್ಟದೆ ಇರಲ್ಲ. ಸಮಾಧಿ ಕಿತ್ತುಕೊಂಡು ಹೋದವರಿಗೆ ಒಳ್ಳೆಯದಾಗಲ್ಲ.

- ರವಿ ಶ್ರೀವತ್ಸ, ನಿರ್ದೇಶಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ನಗರದ 75 ಜಂಕ್ಷನ್‌ ಅಭಿವೃದ್ಧಿಗೆ ಗ್ರಹಣ!
ಎಚ್‌ಎಎಲ್‌ ಮತ್ತೆ ಸಾರ್ವಜನಿಕ ಬಳಕೆ ಪ್ರಸ್ತಾಪ ಪರಿಶೀಲನೆ:ಸಚಿವ