ವಿಶ್ವದರ್ಶನ ಸಂಭ್ರಮ ನಮ್ಮೂರ ಹಬ್ಬ ನ.೨೮, ೨೯ರಂದು ನಡೆಯಲಿದೆ. ೨ ದಿನಗಳ ಕಾಲ ನಡೆಯುವ ನಮ್ಮ ಸಂಭ್ರಮದಲ್ಲಿ ಹಲವು ವಿದಾಯಕ ಕಾರ್ಯಕ್ರಮಗಳಲ್ಲಿ ಮಕ್ಕಳ ಸಾಂಸ್ಕೃತಿಕದ ಜೊತೆ ನಾಡಿನ ಶ್ರೇಷ್ಠ ಕಲಾವಿದರಿಂದ ತಾಳಮದ್ದಲೆ, ನಾಟಕ, ಭಕ್ತಿಸಂಗೀತ ನಡೆಯಲಿದೆ. ನಮ್ಮ ಈ ಸಂಭ್ರಮದ ಹಬ್ಬಕ್ಕೆ ನ.೨೮ರಂದು ಶಾಸಕ ಶಿವರಾಮ ಹೆಬ್ಬಾರ ಚಾಲನೆ ನೀಡಲಿದ್ದಾರೆ ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.ಬುಧವಾರ ವಿಶ್ವದರ್ಶನದ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಸಂಭ್ರಮದ ಕುರಿತಾಗಿ ಮಾಹಿತಿ ನೀಡಿದರು.ನಮ್ಮ ಸಂಸ್ಥೆಯು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಪ್ರಧಾನವಾಗಿ ನಮ್ಮ ಮೌಲ್ಯ, ಸಂಸ್ಕೃತಿ, ಸಂಸ್ಕಾರ ನೀಡುತ್ತಾ ಬಂದಿದ್ದೇವೆ. ಕೇವಲ ಭೌತಿಕ ವ್ಯವಸ್ಥೆಗಳಿಂದ ಉತ್ತಮ ವ್ಯಕ್ತಿಗಳ ನಿರ್ಮಾಣ ಅಸಾಧ್ಯ. ನಮ್ಮ ಮಕ್ಕಳಿಗೆ ಸಂಸ್ಕಾರ ಅತ್ಯಂತ ಮಹತ್ವದ್ದಾಗಿದೆ. ಆ ನೆಲೆಯಲ್ಲಿ ಪ್ರತಿ ವಿದ್ಯಾರ್ಥಿಗಳನ್ನು ನಮ್ಮ ಶಿಕ್ಷಕರು ಗಮನಿಸುತ್ತಾರೆ ಎಂದ ಅವರು, ಈ ವರ್ಷ ಅಂತರಾಷ್ಟ್ರೀಯ ಪತಂಜಲಿ ಯೋಗ ಪೀಠದ ಕರ್ನಾಟಕ ದಕ್ಷಿಣ ಭಾರತ ಪ್ರಭಾರಿ ಭವರ್‌ಲಾಲ್ ಆರ್ಯ ಅವರಿಗೆ ವಿಶ್ವದರ್ಶನ ಪುರಸ್ಕಾರ ನೀಡಲಾಗುವುದು. ಶಿಕ್ಷಣ ಮತ್ತು ಸಂಸ್ಕಾರದ ಬಗ್ಗೆ ನಾಡಿನ ಶ್ರೇಷ್ಠವಾಗ್ಮಿ ಆದರ್ಶ ಗೋಖಲೆ ಪ್ರಧಾನ ಭಾಷಣ ಮಾಡಲಿದ್ದಾರೆ. ಅಲ್ಲದೇ, ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಆಶಯ ಹೊಂದಿದ್ದೇವೆ. ಈ ವರ್ಷ ವಸ್ತುಪ್ರದರ್ಶನಕ್ಕಾಗಿ ಸುಮಾರು ೪೦ ಮಳಿಗೆ ಸ್ಥಾಪಿಸುತ್ತಿದ್ದೇವೆ. ಅವುಗಳಲ್ಲಿ ಕೃಷಿ, ಸಂಸ್ಕೃತಿ ಚಿಂತನೆ, ಆಹಾರ, ವಿಜ್ಞಾನ, ಆರೋಗ್ಯ, ಔಷಧಿ, ಪುಸ್ತಕ ಸೇರಿದಂತೆ ಹಲವು ರೀತಿಯ ಮೇಳಗಳನ್ನು ಆಯೋಜಿಸುತ್ತಿದ್ದೇವೆ. ಇಲ್ಲಿ ದೊರೆಯುವ ಪ್ರತಿವಸ್ತುವೂ ಆರೋಗ್ಯಪೂರ್ಣವಾದುದು ಎಂದ ಅವರು, ನಮ್ಮ ಸಂಸ್ಥೆಯಲ್ಲಿ ೮ನೇ ತರಗತಿಯಿಂದಲೇ ಸಿಇಟಿ ಮತ್ತು ಜೆಇ ಸೇರಿ ಹಲವು ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಾದ ತರಬೇತಿ ನೀಡುತ್ತೇವೆ. ಇದರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲೂ ಸಾಧನೆಗೆ ಸಹಕಾರಿಯಾಗುವುದಲ್ಲದೇ ಪಿಯುಸಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಪಡೆಯಲು ಪೂರಕವಾಗುತ್ತದೆ ಎಂದರು.ಕಳೆದ ಸಾಲಿನ ಸಿಬಿಎಸ್ಸಿಯಲ್ಲಿ ದೇಶಮಟ್ಟದ ೩ನೇ ಸ್ಥಾನ, ರಾಜ್ಯದಲ್ಲಿ ಮೊದಲನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಇದಕ್ಕೆ ನಮ್ಮ ಶಿಕ್ಷಕರ ನಿರಂತರ ಪ್ರಯತ್ನದ ಫಲ, ಪಾಲಕರ ಸಹಕಾರವೂ ಅಷ್ಟೇ ದೊರೆತಿದೆ. ನಮ್ಮ ಬಿಸಿಎ ಕಾಲೇಜಿಗೆ ಆಲ್ ಇಂಡಿಯಾ ಟೆಕ್ನಿಕಲ್ ಸಂಸ್ಥೆಯಿಂದ ಮಾನ್ಯತೆ ಲಭಿಸಿದೆ. ಇಲ್ಲಿ ಉತ್ತೀರ್ಣರಾದವರು ಇಂದು ಮುಂಬೈ, ಪುಣೆ, ಬೆಂಗಳೂರು ಸೇರಿದಂತೆ ಹಲವೆಡೆ ಉದ್ಯೋಗಸ್ಥರಾಗಿದ್ದಾರೆ. ೧೦, ೧೫, ೨೦ ಲಕ್ಷದವರೆಗೆ ಸಂಬಳ ಪಡೆಯುತ್ತಿದ್ದಾರೆ. ಬೃಹತ್ ಉದ್ಯೋಗ ಮೇಳ ಮಾಡುವುದಕ್ಕೆ ಮುಂದಾಗಿದ್ದೇವೆ. ಅದರಲ್ಲೂ ನಮ್ಮ ಪತ್ರಿಕೋದ್ಯಮ ವಿಭಾಗ ರಾಜ್ಯದಲ್ಲಿ ಉತ್ತಮ ಹೆಸರು ಪಡೆಯುತ್ತಿದೆ. ಇಲ್ಲಿನ ಎಲ್ಲ ವಿದ್ಯಾರ್ಥಿಗಳಿಗೂ ಉದ್ಯೋಗ ಲಭಿಸಿದೆ. ಇದು ಹೆಮ್ಮೆಯ ವಿಚಾರ. ನಮ್ಮ ಸಂಸ್ಥೆಯಲ್ಲಿ ಪ್ರತಿ ವರ್ಷವೂ ಹೊಸ ಹೊಸ ವಿಭಾಗ ತೆರೆಯುತ್ತಿದ್ದೇವೆ ಎಂದರು.ಅಲ್ಲದೇ, ಮುಂದಿನ ಸಾಲಿನಿಂದ ವಸತಿ ಸಹಿತ ಪಿಯುಸಿಗೆ ವ್ಯವಸ್ಥೆ ಕಲ್ಪಿಸುತ್ತಿದ್ದೇವೆ. ನಮ್ಮ ಜಿಲ್ಲೆಯವರು ಹೊರ ಜಿಲ್ಲೆಗಳಿಗೆ ನಾಲ್ಕೈದು ಲಕ್ಷ ಕೊಟ್ಟು ಪಿಯುಸಿಗೆ ಕಳುಹಿಸುವ ಸ್ಥಿತಿ ಇದೆ. ಅಲ್ಲಿ ಕೇವಲ ಸಿಇಟಿಗೆ ಬೇಕಾದ ತರಬೇತಿ ಮಾತ್ರ ಸಿಗುತ್ತಿದೆ. ನಾವು ಸಂಸ್ಕಾರ, ಸಂಸ್ಕೃತಿಯನ್ನು ನಮ್ಮ ವಿದ್ಯಾರ್ಥಿಗಳಿಗೆ ನೀಡಿ, ಕೈಗೆಟಕುವ ವೆಚ್ಚದಲ್ಲಿ ವಸತಿನಿಲಯವನ್ನು ಪ್ರಾರಂಭಿಸುತ್ತಿದ್ದೇವೆ ಎಂದು ವಿವರಿಸಿದರು.ಈ ಸಂದರ್ಭ ಬಿಸಿಎ ಕಾಲೇಜಿನ ಮುಖ್ಯಸ್ಥ ಪ್ರಸನ್ನ ಭಟ್ಟ, ಯೋಗ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ, ಶಿಕ್ಷಕ ವೃಂದದ ಪ್ರೇಮಾ ಗಾಂವ್ಕರ, ಸ್ಪೂರ್ತಿ ಹೆಗಡೆ, ವೆಂಕಟೇಶ ಗೇರಗದ್ದೆ, ಪೂಜಾ ಹುನಕುಪ್ಪಿ, ಧನ್ಯಶ್ರೀ ಭಟ್ಟ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.