ಹುಬ್ಬಳ್ಳಿ: ವಿಕಸಿತ ಭಾರತ ಬರೀ ಭಾರತದ ಸಂಕಲ್ಪ ಆಗಿಲ್ಲ. 2047ಕ್ಕೆ ಭಾರತ ಹೇಗೆಲ್ಲ ವಿಕಸಿತ ಆಗಬೇಕು ಎಂಬುದರ ಸ್ಪಷ್ಟ ಕಲ್ಪನೆಯಾಗಿದೆ. ವಿಕಸಿತ ಭಾರತದಿಂದ ದೇಶ ವಿಶ್ವ ಗುರುವಾಗುವುದು ನಿಶ್ಚಿತ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ವಿಕಸಿತ ಭಾರತದ ಸಂಕಲ್ಪದ ಸಾಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ. ಇದಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದರು.
ಮದ್ಯಪ್ರಾಚ್ಯ ದೇಶಗಳಲ್ಲಿ ಯುದ್ಧದಿಂದ ಉಂಟಾದ ಎನರ್ಜಿ ಎಮರ್ಜೆನ್ಸಿಯಿಂದ ಜಗತ್ತಿನ ಬಹಳಷ್ಟು ದೇಶಗಳು ವರ್ಕ್ ಫ್ರಾಮ್ ಹೋಮ್ ಘೋಷಣೆ ಮಾಡಿದ್ದವು. ಆದರೆ, ದೇಶದಲ್ಲಿ ಒಂದೇ ಒಂದು ದಿನವೂ ಇಂಧನದ ಕೊರತೆ ಉಂಟಾಗಲಿಲ್ಲ ಸಮರ್ಪಕ ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನೀಲ ಹಾಗೂ ಅಡುಗೆ ಎಣ್ಣೆಯನ್ನು ಸಂಗ್ರಹಿಸಿಟ್ಟುಕೊಳ್ಳುವ ಮೂಲಕ ಯಾವುದೇ ತೊಂದರೆ ಆಗದಂತೆ ಮೋದಿ ಸರ್ಕಾರ ನೋಡಿಕೊಂಡಿದೆ. ಇಂದು ಎಪ್ಪತ್ತು ದಿನಗಳಿಗೆ ಆಗುವಷ್ಟು ಅಡುಗೆ ಎಣ್ಣೆ ಸ್ಟಾಕ್ ಇದೆ. ಅದನ್ನು 200 ದಿನಕ್ಕೆ ಹೆಚ್ಚಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದರು.ಅತಿ ಹೆಚ್ಚು ವರ್ಷದ ವರೆಗೆ ಆಡಳಿತ ನಡೆಸುತ್ತಿರುವ ಪ್ರಧಾನಿ ಎಂಬ ಹೆಗ್ಗಳಿಕೆ ಮೋದಿ ಅವರಿಗೆ ಸಲ್ಲುತ್ತದೆ.
ಭಾರತದಲ್ಲಿ ಇರುವ ಕಲ್ಲಿದ್ದಲು ಸುಮಾರು 350 ವರ್ಷಕ್ಕೂ ಅಧಿಕ ಕಾಲ ಬಳಕೆ ಮಾಡುವಷ್ಟಿದೆ. ಆದರೂ ಅದನ್ನು ತೆಗೆದು ಬಳಸುವ ಸಾಮಾನ್ಯ ಪ್ರಯತ್ನವನ್ನು ಕಾಂಗ್ರೆಸ್ ಸರಕಾರದಲ್ಲಿ ಆಗಿರಲಿಲ್ಲ. ಆದ್ದರಿಂದ ಕಾಂಗ್ರೆಸ್ ಆಡಳಿತದಲ್ಲಿ ವರ್ಷಕ್ಕೆ 2 ಲಕ್ಷ 50 ಸಾವಿರ ಕೋಟಿ ಮೊತ್ತದ ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತಿತ್ತು. ಇಂದು ಕಲ್ಲಿದ್ದಲನ್ನು ರಫ್ತು ಮಾಡಲಾಗುತ್ತಿದೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ, ಇಡೀ ಜಗತ್ತಿಗೆ ದೊಡ್ಡಣ್ಣ ಎಂದೇ ಕರೆಯುವ ಅಮೆರಿಕಾದ ಅಧ್ಯಕ್ಷ ಟ್ರಂಪ್ ಸಹ ಪ್ರಧಾನಿ ಮೋದಿ ಅವರ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ದೇಶದ ಹೆಮ್ಮೆಯ ಸಂಗತಿ ಎಂದರು.