ಕನ್ನಡಪ್ರಭ ವಾರ್ತೆ ಗುಬ್ಬಿ
ಪಟ್ಟಣದ ಕಂದಾಯ ಭವನದಲ್ಲಿ ತಾಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮಾಜದ ವತಿಯಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವಕರ್ಮ ಸಮುದಾಯದವರು ದೇವಾಲಯ ಸೇರಿದಂತೆ ವಿವಿಧ ನಿರ್ಮಾಣ ಕಾರ್ಯಗಳಲ್ಲಿ ಅಪಾರ ನೈಪುಣ್ಯತೆ ಹೊಂದಿದ್ದಾರೆ. ಇಂತಹ ಕಲೆ ಮತ್ತು ಕೌಶಲ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಸಮುದಾಯವು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹೆಚ್ಚಿನ ಪ್ರಾತಿನಿಧ್ಯ ಪಡೆಯಲು ಸಂಘಟಿತ ಪ್ರಯತ್ನ ಮಾಡಬೇಕು ಎಂದರು.
ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಿ.ಎನ್. ಕಮಲನಾಭಾಚಾರಿ ಮಾತನಾಡಿ, ಸಮಾಜದ ಕುಲಬಾಂಧವರು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ನಿರ್ಮಾಣ ಹಂತದಲ್ಲಿರುವ ಸಮುದಾಯ ಭವನದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಮುಖ್ಯ ಭಾಷಣಕಾರ ವಿವೇಕಾನಂದಸ್ವಾಮಿ ಅವರು ವಿಶ್ವಕರ್ಮರ ಇತಿಹಾಸ ಹಾಗೂ ಪರಂಪರೆಯ ಕುರಿತು ವಿವರಿಸಿದರು. ಉಪನ್ಯಾಸಕ ಸೋ.ಬ. ಜಗದೀಶ್ ಮಾತನಾಡಿ, ವಿಶ್ವಕರ್ಮ ಸಮುದಾಯದವರು ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುವ ಮೂಲಕ ಸಮಾಜದಲ್ಲಿ ತಮ್ಮದೇ ಛಾಪು ಮೂಡಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಗ್ರೇಡ್ 2 ತಹಸೀಲ್ದಾರ್ ಶಶಿಕಲಾ , ಉಪಾಧ್ಯಕ್ಷ ಎಸ್. ರಾಜಶೇಖರ್, ಕಾರ್ಯದರ್ಶಿ ನವೀನ್ ಕುಮಾರ್, ನಿರ್ದೇಶಕರಾದ ಮಹೇಶ್ ಕುಮಾರ್, ಯೋಗಮೂರ್ತಾಚಾರ್, ದಯಾನಂದ್, ಉಮಾ ಗಿರೀಶ್ ಆಚಾರ್, ನಾಗರಾಜಾಚಾರ್, ನಟರಾಜು ಸೇರಿದಂತೆ ಸಮಾಜದ ಮುಖಂಡರು, ಸಿಬ್ಬಂದಿ ಹಾಗೂ ನಾಗರಿಕರ ಹಿತರಕ್ಷಣ ಸಮಿತಿಯ ಅಧ್ಯಕ್ಷ ಹೆಚ್.ಡಿ.ಎಲ್ಲಪ್ಪ ಮತ್ತಿತರರು ಉಪಸ್ಥಿತರಿದ್ದರು.