ಮಂದಿರ, ಮನೆಗಳನ್ನ ನಮಗೆ ಬೇಕಾದ ರೀತಿಯಲ್ಲಿ ಅಂಧಗೊಳಿಸಿ ಕೊಡುವ ವಿಶ್ವಕರ್ಮ ಸಮಾಜದವರ ಜೀವನವು ಚಂದವಾಗಿರಬೇಕು.
ಕಮಟೇಶ್ವರ, ಕಾಳಿಕಾಂಬಾ ದೇವಸ್ಥಾನದ ಗರ್ಭಗುಡಿ ಶಿಲಾನ್ಯಾಸ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಗೋಕರ್ಣ
ಮಂದಿರ, ಮನೆಗಳನ್ನ ನಮಗೆ ಬೇಕಾದ ರೀತಿಯಲ್ಲಿ ಅಂಧಗೊಳಿಸಿ ಕೊಡುವ ವಿಶ್ವಕರ್ಮ ಸಮಾಜದವರ ಜೀವನವು ಚಂದವಾಗಿರಬೇಕು. ಈ ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.
ಕೋಟಿತೀರ್ಥ ಕಟ್ಟೆಯಲ್ಲಿರುವ ವಿಶ್ವಕರ್ಮ ಸಮಾಜದವರ ಕಮಟೇಶ್ವರ, ಕಾಳಿಕಾಂಬಾ ದೇವಸ್ಥಾನದ ಗರ್ಭಗುಡಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ನಡೆದ ಧರ್ಮಸಭೆಯಲ್ಲಿ ಮಾತನಾಡಿದರು.
ಭವ್ಯ ಇತಿಹಾಸವಿರುವ ದೇವಾಲಯದ ನೂತನ ಕಟ್ಟಡ ನಿರ್ಮಾಣದ ಅವಧಿ ನಮೂದಿಸಿದ್ದು, ಆದರೆ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿ ಆಶಿಸಿ, ವೈಯಕ್ತಿಕವಾಗಿ ಹಾಗೂ ಸರ್ಕಾರದಿಂದ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಈ ಸಮಾಜದವರು ಶೈಕ್ಷಣಿಕವಾಗಿ ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಮನೆಯ ಮಾತೆಯರು ವಿಶೇಷ ಪ್ರಯತ್ನ ಮಾಡಿ ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ಕೊಡಿಸಿ ಉನ್ನತ ಸ್ಥಾನ ಮಾನದ ಮೂಲಕ ಸಮಾಜ ಗುರುತಿಸುವಂತೆ ಆಗಬೇಕು ಎಂದರು. ದೇವಾಲಯದ ನಿರ್ಮಾಣಕ್ಕೆ ವೈಯಕ್ತಿಕವಾಗಿ ಧನಸಹಾಯ ಮಾಡುವುದಾಗಿ ಘೋಷಿಸಿದರು.
ಶಿಲಾನ್ಯಾಸ ನೆರವೇರಿಸಿದ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಾಧೀಶ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಎಲ್ಲಾ ಸಮುದಾಯದವರು ನಮ್ಮ ಸಮಾಜಕ್ಕೆ ಬೆಂಬಲವಾಗಿದ್ದು, ಶ್ರೀಕ್ಷೇತ್ರದಲ್ಲಿನ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡುತ್ತಿದ್ದಾರೆ. ಇದಕ್ಕೆ ಸಚಿವರು, ಶಾಸಕರು ಸಹ ಕೈ ಜೋಡಿಸಿದ್ದಾರೆ. ಸಮಾಜದ ಬಂಧುಗಳು ಎಲ್ಲಾ ಒಂದಾಗಿ ಒಂದುವರೆ ವರ್ಷದೊಳಗೆ ದೇವಾಲಯದ ಕಟ್ಟಡ ಪೂರ್ಣಗೊಳಿಸೋಣ ಎಂದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ, ಸದಸ್ಯೆ ಭಾರತೀ ದೇವತೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ ಭಾಗ್ವತ್, ಜಿಪಂ ಮಾಜಿ ಸದಸ್ಯ ಪ್ರದೀಪ ನಾಯಕ ದೇವರಭಾವಿ, ದೇವಾಲಯದ ತಂತ್ರಿ ಅಕ್ಷಯ ಶರ್ಮಾ ಕಟಪಾಡಿ, ಆನೆಗುಂದಿ ಮಹಾಸಂಸ್ಥಾನ ಪಂಚಸಿಂಹಾಸನ ಸರಸ್ವತೀ ಪೀಠದ ವಿಕಾಸ ಸಮಿತಿ ಅಧ್ಯಕ್ಷ ಉಮೇಶ ಆಚಾರ್ಯ, ಜ್ಯೋತಿಷಿ ಉಮೇಶ ಆಚಾರ್ಯ ಪಡೀಲು, ಗರ್ಭಗಡಿಯ ಶಿಲ್ಪಿ ನೆಕ್ಲಾಜೆಯ ರಾಮಚಂದ್ರ ಆಚಾರ್ಯ, ತಾಪಂ ಮಾಜಿ ಸದಸ್ಯ ಮಹೇಶ ಶೆಟ್ಟಿ, ಬಿಜೆಪಿ ಗೋಕರ್ಣ ಮಂಡಲಾಧ್ಯಕ್ಷ ಗಣೇಶ ಪಂಡಿತ್, ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ ಹಿತ್ತಲಮಕ್ಕಿ, ನಾಗೇಶ ನಾಯ್ಕ, ವಿಶ್ವಕರ್ಮ ಸಮಾಜದ ವಿವಿಧೆಡೆಯ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತಿತರರು ಪಾಲ್ಗೊಂಡಿದ್ದರು.
ಜಗದೀಶ ಆಚಾರ್ಯ ಸ್ವಾಗತಿಸಿದರು. ಮಾರುತಿ ಆಚಾರ್ಯ ಗುಂಡಬಾಳ ಪ್ರಾಸ್ತಾವಿಕ ಮಾತನಾಡಿದರು. ಉಪ ಸಮಿತಿ ಸದಸ್ಯ ವಿಷ್ಣು ಆಚಾರಿ ಪ್ರಾರ್ಥಿಸಿದರು. ಕಡಮೆ ಮತ್ತು ಬಂಕಿಕೊಡ್ಲದ ಕಾಳಿಕಾಂಬಾ ಮಹಿಳಾ ಮಂಡಳಿಯ ಸದಸ್ಯರಿಂದ ಸ್ವಾಗತ ಗೀತೆ ಹಾಡಿದರು.
ಇದೇ ವೇಳೆ ಸಚಿವ ಮಂಕಾಳು ವೈದ್ಯ, ಶಾಸಕ ದಿನಕರ ಶೆಟ್ಟಿ ಹಾಗೂ ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಜಯಶ್ರೀ ಆಚಾರ್ಯ, ಸುರೇಶ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.