ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ನಡೆದ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿ, ವಿಶ್ವಕರ್ಮ ಸಮಾಜವು ಶತಮಾನಗಳಿಂದ ದೇಶದ ಆರ್ಥಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿಕೊಂಡಿದೆ ದೇವಾಲಯಗಳ ಶಿಲ್ಪಕಲೆ, ವಾಸ್ತುಶಿಲ್ಪ, ಲೋಹ, ಮರ, ಕಲ್ಲು ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ವಿಶ್ವಕರ್ಮರ ಕೊಡುಗೆ ಅಪ್ರತಿಮವಾಗಿದೆ. ಇಂತಹ ಶ್ರೀಮಂತ ಪರಂಪರೆಯನ್ನು ಇಂದಿನ ಪೀಳಿಗೆಯ ಯುವಕರು ಅರಿತುಕೊಂಡು ಮುಂದುವರಿಸಬೇಕಾಗಿದೆ. ಸರ್ಕಾರದಿಂದ ವಿಶ್ವಕರ್ಮ ಸಮಾಜಕ್ಕೆ ದೊರೆಯುತ್ತಿರುವ ವಿವಿಧ ಸೌಲಭ್ಯಗಳು, ಯೋಜನೆಗಳು ಹಾಗೂ ಶೈಕ್ಷಣಿಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಯುವಕರು ಶಿಕ್ಷಣ, ಸ್ವಉದ್ಯೋಗ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಮುಂದೆ ಬರಬೇಕು. ಸಮಾಜದ ಒಗ್ಗಟ್ಟಿನಿಂದ ಮಾತ್ರ ಪ್ರಗತಿ ಸಾಧ್ಯವಾಗುತ್ತದೆ. ಕಳೆದ ಆರು ವರ್ಷಗಳಿಂದ ಸರ್ಕಾರದ ವತಿಯಿಂದ ವಿಶ್ವಕರ್ಮ ಜಯಂತಿಯನ್ನು ಅಧಿಕೃತವಾಗಿ ಆಚರಿಸಲಾಗುತ್ತಿದೆ ಎಂದರು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ವಿಶ್ವಕರ್ಮರು ಶ್ರಮ, ಸೃಜನಶೀಲತೆ ಹಾಗೂ ನೈಪುಣ್ಯದ ಜೀವಂತ ಪ್ರತೀಕವಾಗಿದ್ದಾರೆ. ಸಮಾಜದ ಅಭಿವೃದ್ಧಿಯಲ್ಲಿ ಕಾರ್ಮಿಕರು, ಶಿಲ್ಪಿಗಳು ಹಾಗೂ ಕೈಗಾರಿಕಾರರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ವಿಶ್ವಕರ್ಮರ ಕೊಡುಗೆ ಎಂದಿಗೂ ಮರೆತಿರಲು ಸಾಧ್ಯವಿಲ್ಲ ಎ. ಇಂದಿನ ಯುವಜನತೆ ವಿಶ್ವಕರ್ಮರ ಆದರ್ಶಗಳು, ಶ್ರಮ ಸಂಸ್ಕೃತಿ ಹಾಗೂ ಆತ್ಮಗೌರವವನ್ನು ಅಳವಡಿಸಿಕೊಂಡು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು ಎಂದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಬಿಆರ್ ಸಿ ಶಿವಮರಿಯಪ್ಪ, ಹರೀಶ್, ಸಮಾಜದ ಉಮೇಶ್ ಆಚಾರ್ ನಾಗೇಶ್ ಆಚಾರ್, ಹಿತೇಶ್, ಅರುಣಾಚಲಂ, ವಿಶ್ವನಾಥ್, ಇಲಾಖೆಗಳ ಅಧಿಕಾರಿಗಳು, ವಿಶ್ವಕರ್ಮ ಸಮಾಜದ ಮುಖಂಡರು, ಸಮಾಜದ ಹಿರಿಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಿಶ್ವಕರ್ಮರ ಸಾಧನೆಗಳು, ಶಿಲ್ಪಕಲೆ ಹಾಗೂ ಅವರ ಸಮಾಜಮುಖಿ ಕೊಡುಗೆಗಳನ್ನು ಸ್ಮರಿಸುವ ಮೂಲಕ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.