ಧಾರವಾಡ: ವಿಶ್ವಕರ್ಮ ಸಮುದಾಯವು ಭಾರತೀಯ ಸಂಸ್ಕೃತಿ ಮತ್ತು ಕರಕುಶಲತೆಗೆ ಆಧಾರ ಸ್ತಂಭವಾಗಿದೆ. ಶಿಲ್ಪಕಲೆ, ವಾಸ್ತುಶಿಲ್ಪ ಮತ್ತು ಮರಗೆಲಸ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವರ ಕೌಶಲ್ಯ ಮತ್ತು ಪರಿಣಿತಿಯು ಅನನ್ಯ ಎಂದು ಹು-ಧಾ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಹೇಳಿದರು.
ಸಮಾಜದಲ್ಲಿ ವಿಶ್ವಕರ್ಮರ ಪಾತ್ರ ಮಹತ್ವದ್ದಾಗಿದ್ದು, ಅವರ ಕೌಶಲ್ಯ ಮತ್ತು ಜ್ಞಾನವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದ ಅವರು, ವೇದಗಳಲ್ಲಿ ಮತ್ತು ಪುರಾಣಗಳಲ್ಲಿ ವಿಶ್ವಕರ್ಮರು ಸೃಷ್ಟಿಯ ರೂವಾರಿಗಳೆಂದು ಉಲ್ಲೇಖವಾಗಿದೆ. ದೇವತೆಗಳ ಅರಮನೆಗಳು, ಆಯುಧಗಳು ಮತ್ತು ವಿವಿಧ ನಿರ್ಮಾಣಗಳ ಶಿಲ್ಪಿ ಎಂದು ಉಲ್ಲೇಖಿಸಿರುವುದನ್ನು ಮೇಯರ್ ವಿವರಿಸಿದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಮಾತನಾಡಿ, ಪೂರ್ವಜರು ಕೈಯಿಂದ ಮಾಡಿದ ಕಲೆಗಳು, ಅಂದರೆ ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಚಿತ್ರಕಲೆಗಳು, ಶಿಲ್ಪಕಲೆಗಳು ಇತ್ಯಾದಿಗಳು ಶತಮಾನಗಳ ಕಾಲ ಉಳಿದು ತಮ್ಮದೇ ಆದ ಮಹತ್ವವನ್ನು ಉಳಿಸಿಕೊಂಡಿವೆ. ಕುಲಕಸುಬುಗಳು ಕೇವಲ ಆರ್ಥಿಕ ಮೂಲವಲ್ಲ, ಅವು ನಮ್ಮ ಗುರುತು ಮತ್ತು ಹೆಮ್ಮೆ. ಈ ಕಲೆಗಳನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಗುರುನಾಥ ಬಡಿಗೇರ ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಮಾಜಿ ಶಾಸಕಿ ಸೀಮಾ ಮಸೂತಿ ಮಾತನಾಡಿದರು. ಮೌನೇಶ್ವರ ಧರ್ಮನಿಧಿ ಸಂಸ್ಥೆ ಟ್ರಸ್ಟ್ ಅಧ್ಯಕ್ಷ ಮಹಾರುದ್ರ ಬಡಿಗೇರ, ಸಮುದಾಯದ ಮುಖಂಡರಾದ ನಿರಂಜನ ಬಡಿಗೇರ, ಸಂತೋಷ ಬಡಿಗೇರ, ಕಾಳಪ್ಪ ಬಡಿಗೇರ, ವಿಠ್ಠಲ ಕಮ್ಮಾರ, ವಸಂತ ಅರ್ಕಾಚಾರ್, ಭಾಸ್ಕರ್ ಬಡಿಗೇರ, ಸುಮಿತ್ರಾ ಬಡಿಗೇರ ಇದ್ದರು.
ಅಶ್ವಿನಿ ಪತ್ತಾರ ಸಂಗೀತ ನಡೆಸಿಕೊಟ್ಟರು. ರವಿ ಕುಲಕರ್ಣಿ ನಿರೂಪಿಸಿದರು. ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು.