- ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದಿಂದ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ
ವಿಶ್ವಕರ್ಮರ ಪಂಚ ಕಲೆಗಳು ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿದ್ದು ನಮ್ಮ ಸಮಾಜಕ್ಕೆ ಹೆಮ್ಮೆ ಇದೆ ಎಂದು ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಕೃಷ್ಣಯ್ಯ ಆಚಾರ್ ತಿಳಿಸಿದರು.
ಗುರುವಾರ ಸಿಂಸೆಯ ವಿಶ್ವಕರ್ಮ ಸಮುದಾಯ ಭವನದಲ್ಲಿ ತಾಲೂಕು ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ನಡೆದ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಪಂಚ ಕಲೆಗಳಾದ ಕಾಷ್ಟ ಶಿಲ್ಪ, ಲೋಹ ಶಿಲ್ಪ, ಶಿಲ್ಪ ಕಲೆ, ಬಂಗಾರ, ಕಬ್ಬಿಣದ ಕಲೆಗಳಲ್ಲಿ ವಿಶ್ವ ಕರ್ಮರು ನಿಸ್ಸೀಮ ರಾಗಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಪ್ರತಿಷ್ಟಾಪಿಸಲಾದ ಬಾಲ ರಾಮನ ವಿಗ್ರಹವನ್ನು ನಮ್ಮ ರಾಜ್ಯದ ಮೈಸೂರಿನ ಅರುಣ ಯೋಗಿರಾಜ್ ನಿರ್ಮಿಸಿಕೊಟ್ಟಿದ್ದರು. ರಾಮ ಮಂದಿರ ಪ್ರತಿಷ್ಟಾಪನೆ ಆಗಿ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ಜನವರಿ 17 ರಂದು ಅಯೋದ್ಯೆಯಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಕ್ಕೆ ಕುಂದಾಪುರದ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ ಮತ್ತು ಸಂಘಡಿಗರು ಮರದಿಂದ ಕೆತ್ತನೆ ಮಾಡಿ ಬ್ರಹ್ಮರಥ ಸಿದ್ದಪಡಿಸುತ್ತಿದ್ದಾರೆ.
ಗುಜರಾತ್ ರಾಜ್ಯದ ಅಹಮದಾಬಾದ್ ನಲ್ಲಿ ವಲ್ಲಬಾಯಿ ಪಟೇಲ್ ವಿಗ್ರಹವನ್ನು ರಾಮ್ ಸುತಾರ್ ಎಂಬ ವಿಶ್ವಕರ್ಮ ಸಮಾಜದ ಕಲಾವಿದ ಕೆತ್ತನೆ ಮಾಡಿದ್ದರು. ಇದೇ ರೀತಿ ದೇಶದಾದ್ಯಂತ ಶಿಲ್ಪ ಕಲೆಯಲ್ಲಿ ನೈಪುಣ್ಯತೆ ಪಡೆದ ಸಾವಿರಾರು ಕಲಾವಿದರು ವಿಶ್ವ ಕರ್ಮ ಸಮಾಜದವರಾಗಿದ್ದಾರೆ. 2019 ರಿಂದಲೂ ಜಕಣಾಚಾರಿ ಸಂಸ್ಮರಣಾ ದಿನ ಆಚರಿಸಿಕೊಂಡು ಬರಲಾಗುತ್ತಿದೆ. ವಿಶ್ವ ಕರ್ಮ ಸಮಾಜದವರು ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದರು.ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ವಿಶ್ವ ಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಜೇಶ್ ಆಚಾರ್ ಮಾತನಾಡಿ, ಪ್ರತಿ ವರ್ಷ ಜ.1 ರಂದು ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಆಚರಿಸಲಾಗುತ್ತಿದ್ದು ಪ್ರಧಾನ ಮಂತ್ರಿ ಗಳು ವಿಶ್ವ ಕರ್ಮ ಸಮಾಜಕ್ಕೆ ನೀಡಿದ ಕೊಡುಗೆಯಾಗಿದೆ. ಜಕಣಾಚಾರಿ ಅವರ ಕಲೆ, ನೈಪುಣ್ಯತೆ ದೇಶದ ಪ್ರತಿಯೊಬ್ಬರೂ ನೆನಪಿಸಿಕೊಳ್ಳಬೇಕಾದ ದಿನವಾಗಿದೆ ಎಂದರು.
ತಾಲೂಕು ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದ ಖಜಾಂಚಿ ಅರುಣ ಆಚಾರ್ ಉಪನ್ಯಾಸ ನೀಡಿ, ಜಕಣಾಚಾರಿ ಅವರು 14 ವರ್ಷಗಳ ಕಾಲ ಬೇಲೂರಿನಲ್ಲಿ ಸೋಮನಾಥ ದೇವಸ್ಥಾನ ನಿರ್ಮಿಸಿದ್ದಾರೆ. ಹಳೇಬೀಡು ದೇವಸ್ಥಾನ ನಿರ್ಮಿ ಸಲು 18 ವರ್ಷ ಕಾಲ ಬೇಕಾಯಿತು. ಅಮರ ಶಿಲ್ಪಿ ಜಕಣಾಚಾರಿ ನಿರ್ಮಿಸಿದ ದೇವಸ್ಥಾನಗಳು ಸಾವಿರಾರು ವರ್ಷಗಳಾ ದರೂ ಹಾಳಾಗಿಲ್ಲ ಎಂಬುದಕ್ಕೆ ಬೇಲೂರು, ಹಳೇಬೀಡು ದೇವಸ್ಥಾನಗಳೇ ಸಾಕ್ಷಿಯಾಗಿದೆ. ಬೇಲೂರಿನ ದೇವಸ್ಥಾನದ ಒಳಗಿನ ಕೆತ್ತನೆ ಸುಂದರವಾಗಿದೆ. ಹಳೇಬೀಡಿನಲ್ಲಿ ಹೊರ ಭಾಗದ ಕಲ್ಲಿನ ಕೆತ್ತನೆಯ ಸೌಂದರ್ಯ ವಿಶೇಷವಾಗಿದೆ. ಶಿಲೆಗಳಲ್ಲಿ ಗಂಡು ಶಿಲೆ, ಹೆಣ್ಣು ಶಿಲೆ ಹಾಗೂ ನಪುಂಸಕ ಶಿಲೆ ಎಂಬ 3 ಜಾತಿ ಶಿಲೆಗಳಿವೆ ಎಂದರು.ಗಾಯಿತ್ರಿ ವಿಶ್ವಕರ್ಮ ಮಹಿಳಾ ಸಂಘದ ಅಧ್ಯಕ್ಷೆ ಜಯಶ್ರೀ ಕೃಷ್ಣಯ್ಯ ಆಚಾರ್ ಮಾತನಾಡಿ, ವಿಶ್ವ ಕರ್ಮ ಸಮಾಜದವರು ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು. ಕಾರ್ಯದರ್ಶಿ ಸುದರ್ಶನ ಆಚಾರ್ ಉಪಸ್ಥಿತರಿದ್ದರು. ಅಮರಶಿಲ್ಪಿ ಜಕಣಾಚಾರಿ ಭಾವಚಿತ್ರಕ್ಕೆ ಮುಖಂಡರು ಪುಷ್ಪಾರ್ಚನೆ ಮಾಡಿದರು. ಮಂಜುನಾಥ್ ಆಚಾರ್ ವಂದಿಸಿದರು.