ಕನ್ನಡಪ್ರಭ ವಾರ್ತೆ ಶಿವಮೊಗ್ಗ ಕುಶಲಕರ್ಮಿಗಳ ಜೀವನಮಟ್ಟ ಸುಧಾರಣೆ ಹಾಗೂ ಆರ್ಥಿಕ ಸಬಲೀಕರಣ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿಗಳ ವಿಶ್ವಕರ್ಮ ಯೋಜನೆ ಜಾರಿಗೊಳಿಸಿದೆ. ಅರ್ಹ ಕುಶಲಕರ್ಮಿಗಳು ಸದುಪಯೋಗ ಪಡೆಯಬೇಕೆಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್.ಗಣೇಶ್ ಹೇಳಿದರು.
ಕುಶಲಕರ್ಮಿಗಳನ್ನು ಉತ್ತೇಜಿಸಲು ಪಿ.ಎಂ. ವಿಶ್ವಕರ್ಮ ಯೋಜನೆ ಜಾರಿಗೊಳಿಸಲಾಗಿದೆ. ಯೋಜನೆಯಡಿ 18 ಸಾಂಪ್ರದಾಯಿಕ ಕುಶಲಕರ್ಮಿಗಳು ಬರುತ್ತಾರೆ. ಕಾಮನ್ ಸರ್ವಿಸ್ ಸೆಂಟರ್‌ಗಳಲ್ಲಿ ನೋಂದಣಿಯಾದ ಕುಶಲಕರ್ಮಿಗಳಿಗೆ ಈ ಯೋಜನೆಯಡಿ ಗುರುತಿನ ಚೀಟಿ ನೀಡಲಾಗುವುದು. ಯೋಜನೆಯಡಿ ಕುಶಲಕರ್ಮಿಗಳಿಗೆ ತಮ್ಮ ಕೌಶಲ್ಯದ ಕುರಿತು ಸ್ಟೈಫಂಡ್‌ನೊಂದಿಗೆ 5 ದಿನಗಳ ತರಬೇತಿ ನೀಡಿ, ಪ್ರಮಾಣ ಪತ್ರ ವಿತರಿಸಲಾಗುವುದು ಎಂದರು.
ಶೇ.5 ರಿಯಾಯಿತಿ ಬಡ್ಡಿದರದಲ್ಲಿ ಮೊದಲ ಹಂತದಲ್ಲಿ ₹1 ಲಕ್ಷ ಸಾಲ, ಅದನ್ನು ಸಮರ್ಪಕವಾಗಿ ಬಳಸಿ, ಮರುಪಾವತಿಸಿದಲ್ಲಿ ಎರಡನೇ ಹಂತದಲ್ಲಿ ₹2 ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುವುದು. ಕೌಶಲ್ಯತೆಗೆ ಅನುಗುಣವಾಗಿ ₹15 ಸಾವಿರ ಮೌಲ್ಯದ ಟೂಲ್ ಕಿಟ್ ನೀಡಲಾಗುವುದು. ಪ್ರಧಾನಿ ಅವರ ಈ ಮಹಾತ್ವಾಕಾಂಕ್ಷಿ ಯೋಜನೆ ಕುಶಲಕರ್ಮಿಗಳು ಸದುಪಯೋಗ ಮಾಡಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಬೇಕೆಂದು ತಿಳಿಸಿದರು.ಗೋಪಿನಾಥ್ ರಾವ್ ಮಾತನಾಡಿ, ನಗರ ಪ್ರದೇಶದ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಶಲ ಜನರನ್ನು ಬೆಂಬಲಿಸಲು ಪ್ರಧಾನಮಂತ್ರಿ ವಿಶ್ವಕರ್ಮ ಕೇಂದ್ರ ವಲಯ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಬಡಗಿ, ಟೈಲರ್ ಸೇರಿದಂತೆ 18 ಸಾಂಪ್ರದಾಯಿಕ ಕುಶಲಕರ್ಮಿಗಳು ಒಳಗೊಳ್ಳುತ್ತಾರೆ. ಕುಶಲಕರ್ಮಿಗಳನ್ನು ಗುರುತಿಸುವ, ಅವರನ್ನು ಆರ್ಥಿಕವಾಗಿ ಸದೃಢಗೊಳಿಸುವುದು ಯೋಜನೆ ಉದ್ದೇಶವಾಗಿದೆ ಎಂದು ಹೇಳಿದರು.
ಕೌಶಲ್ಯ ಉನ್ನತೀಕರಣ, ಟೂಲ್ ಕಿಟ್, ಡಿಜಿಟಲ್ ವಹಿವಾಟು ಮತ್ತು ಮಾರ್ಕೆಟಿಂಗ್ ಬೆಂಬಲ ನೀಡಲಾಗುವುದು. ಜೊತೆಗೆ ಗವರ್ನಮೆಂಟ್ ಇ-ಮಾರ್ಕೆಟಿಂಗ್ ಪೋರ್ಟಲ್ ಮೂಲಕ ಸರ್ಕಾರವೇ ಫಲಾನುಭವಿಗಳಿಂದ ಉತ್ಪನ್ನಗಳನ್ನು ಖರೀದಿ ಮಾಡುವುದು. ಶೇ.25 ಎಂಎಸ್ಎಂಇ ವತಿಯಿಂದ ಸಂಪಾದಿಸಬೇಕೆಂದು ಇದೆ. ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸಲು ಹಲವೆಡೆ ವ್ಯಾಪಾರ ಮೇಳಗಳನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಅಮರನಾಥ್, ಅಧ್ಯಕ್ಷತೆ ವಹಿಸಿದ್ದ ಎಂಎಸ್ಎಂಇ ಜಂಟಿ ನಿರ್ದೇಶಕ ಡಾ. ಕೆ. ಸಾಕ್ರೆಟಸ್, ಗವರ್ನಮೆಂಟ್ ಇ-ಮಾರ್ಕೆಟಿಂಗ್ ಪ್ರತಿನಿಧಿ ವಿನೋದ್ ಮಾತನಾಡಿದರು. ಶಶಿಕುಮಾರ್ ನಿರೂಪಿಸಿದರು.
ಪಿಎಂ ವಿಶ್ವಕರ್ಮ ಯೋಜನೆ ಅರಿವು ಕಾರ್ಯಾಗಾರವನ್ನು ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಆರ್.ಗಣೇಶ್ ಉದ್ಘಾಟಿಸಿದರು.