ಮುಂಡರಗಿ: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸದಸ್ಯರು ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಕೆ. ವಂಟಿಗೋಡಿ ಗದಗ ಜಿಲ್ಲೆ ಪ್ರವಾಸದ ನಿಮಿತ್ತ ಆಗಮಿಸಿದ ಸಂದರ್ಭದಲ್ಲಿ ಮುಂಡರಗಿ ತಾಲೂಕಿಗೆ ಭೇಟಿ ನೀಡಿ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕೀಯರ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೌಲಭ್ಯಗಳ ಕುರಿತು ವಿಚಾರಿಸಿದರು.
ವಿದ್ಯಾರ್ಥಿಗಳಿಗೆ ಶುಚಿರುಚಿ ಆಹಾರ ಒದಗಿಸಲು ಸೂಚಿಸಿದರು. ನಂತರ ಗದಗ ರಸ್ತೆಯಲ್ಲಿ ಇರುವ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಭೇಟಿ ನೀಡಿ ವಸತಿ ಶಾಲೆಯ 10ನೇ ತರಗತಿ ಪಾಠ ನಡೆಯುತ್ತಿದ್ದ ಕ್ಲಾಸಿನ ಮಕ್ಕಳೊಡನೆ ಸೌಲಭ್ಯಗಳ ಮತ್ತು ಸಮಸ್ಯೆಗಳ ಕುರಿತು ಚರ್ಚಿಸಿದರು.ಈ ಸಂದರ್ಭದಲ್ಲಿ 10ನೇ ತರಗತಿಯ ಮಕ್ಕಳು ವಸತಿ ಶಾಲೆ ಮತ್ತು ವಸತಿ ನಿಲಯದ ಕಟ್ಟಡವಿಲ್ಲದೆ ನಮಗೆ ಸಮಸ್ಯೆಯಾಗಿದೆ. ಶಾಲೆ ಪ್ರಾರಂಭವಾಗಿ ಅನೇಕ ವರ್ಷಗಳಾದರು ನಮಗೆ ಸರಿಯಾದ ಕಟ್ಟಡದ ವ್ಯವಸ್ಥೆಯಾಗಿಲ್ಲ ಎಂದು ದೂರು ನೀಡಿದರು. ಊಟ, ಉಪಹಾರದ ಬಗ್ಗೆ ಮಕ್ಕಳಿಂದ ದೂರು ಬಂದ ಹಿನ್ನೆಲೆಯಲ್ಲಿ ಇಲಾಖೆಯ ನಿಯಮದ ಪ್ರಕಾರ ಊಟ, ಉಪಹಾರದ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ತಾಲೂಕಿನ ಎಲ್ಲ ವಸತಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿ ಮಕ್ಕಳಿಗೆ ದೊರೆಯಬೇಕಾದ ಎಲ್ಲ ಸೌಲಭ್ಯ ಸರಿಯಾಗಿ ಸಿಗುವಂತೆ ನೋಡಿಕೊಳ್ಳಬೇಕು. ತಾವು ಮತ್ತೆ ಬಂದು ಪರಿಶೀಲಿಸುವುದಾಗಿ ತಿಳಿಸಿದರು.