ಸಂಡೂರು: ಪಟ್ಟಣದ ಮಸ್ಜಿದ್-ಎ-ಹಜ್ರತ್ ಬಿಲಾಲ್ ಮಸೀದಿಯ ಆಡಳಿತ ಮಂಡಳಿಯವರು ಭಾನುವಾರ ನಮ್ಮೂರ ಮಸೀದಿ ನೋಡ ಬನ್ನಿ ಎಂಬ ಸಾರ್ವಜನಿಕ ಮಸೀದಿ ಸಂದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಮಸೀದಿಗೆ ಭೇಟಿ ನೀಡಿದವರಿಗೆ ಮುಸ್ಲಿಂ ಧರ್ಮಗುರುಗಳು ಹಾಗೂ ಮುಖಂಡರು ಮಸೀದಿಯೊಳಗೆ ನಡೆಯುವ ಕಾರ್ಯಕ್ರಮಗಳು, ಇಸ್ಲಾಂ ಧರ್ಮದ ತತ್ವಗಳು, ಕುರಾನ್‌ನಲ್ಲಿನ ಅಂಶಗಳು, ನಮಾಜ್ ಮಾಡುವ ಪದ್ಧತಿ ಹಾಗೂ ಅದರ ಮಹತ್ವ ಕುರಿತು ಮಾಹಿತಿ ನೀಡಿದರು. ಮಸೀದಿಗೆ ಭೇಟಿ ನೀಡಿದವರಿಗೆ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.ಶಾಸಕಿ ಈ.ಅನ್ನಪೂರ್ಣ ತುಕಾರಾಂ, ಚಿತ್ರಕಲಾವಿದರಾದ ಡಾ.ವಿ.ಟಿ. ಕಾಳೆ ಸೇರಿದಂತೆ ಹಲವರು ಮಸೀದಿಗೆ ಭೇಟಿ ನೀಡಿ, ಅಲ್ಲಿನ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಶಾಸಕಿ ಈ.ಅನ್ನಪೂರ್ಣ ತುಕಾರಾಂ ಮಾತನಾಡಿ, ವಿವಿಧತೆಯಲ್ಲಿ ಏಕತೆ ಕಾಣುವ ದೇಶ ನಮ್ಮದು. ನಾವೆಲ್ಲರು ಮಾನವರು. ನಮ್ಮೆಲ್ಲರದು ಮಾವನ ಜಾತಿ ಎಂದು ತಿಳಿದು, ಎಲ್ಲರೂ ಪ್ರೀತಿ ವಿಶ್ವಾಸದಿಂದ ಬದುಕಬೇಕು. ಸಂಡೂರು ಧಾರ್ಮಿಕ ಸಾಮರಸ್ಯಕ್ಕೆ ಹೆಸರಾಗಿದೆ. ಇಲ್ಲಿ ಹಿಂದೂ-ಮುಸ್ಲಿಂ ಸೇರಿದಂತೆ ವಿವಿಧ ಸಮುದಾಯಗಳವರು ಸಮಾಜದಲ್ಲಿ ಧಾರ್ಮಿಕ ಸಾಮರಸ್ಯವನ್ನು ಜವಾಬ್ದಾರಿಯುತವಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ. ಕೋಮು ದ್ವೇಷ ಹರಡುವ ಶಕ್ತಿಗಳನ್ನು ನಿರ್ನಾಮ ಮಾಡಿ, ಉತ್ತಮ ಬಾಂಧವ್ಯ ಇರುವ ಸಮಾಜವನ್ನು ನಿರ್ಮಿಸುವ ಮೂಲಕ ತಾಲೂಕನ್ನು ರಾಜ್ಯ ಹಾಗೂ ದೇಶಕ್ಕೆ ಮಾದರಿಯಾಗಿಸಲು ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.ಮುಸ್ಲಿಂ ಧರ್ಮ ಗುರುಗಳಾದ ಅತಾವುಲ್ಲಾ ರೆಹಮಾನ್, ಮಸ್ಜಿದ್-ಎ-ಹಜ್ರತ್ ಬಿಲಾಲ್ ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷ ಇರ್ಫಾನುಲ್ಲಾ, ಉಪಾಧ್ಯಕ್ಷ ಸೈಯದ್ ರೆಹಮತುಲ್ಲಾ, ಪುರಸಭೆ ಅಧ್ಯಕ್ಷ ಎಸ್.ಸಿರಾಜ್ ಹುಸೇನ್, ಮುಖಂಡರಾದ ಅಶಾಲತಾ ಸೋಮಪ್ಪ, ನಜೀರ್ ಅಹ್ಮದ್, ಖಲಂದರ್ ಬಾಷ, ಇಲಿಯಾಜ್ ಖಾನ್, ದಾದಾ ಖಲಂದರ್ ಉಪಸ್ಥಿತರಿದ್ದರು.
ಸಂಡೂರಿನ ಮಸ್ಜಿದ್-ಎ-ಹಜ್ರತ್ ಬಿಲಾಲ್ ಮಸೀದಿಗೆ ಭಾನುವಾರ ಶಾಸಕಿ ಈ.ಅನ್ನಪೂರ್ಣ ತುಕಾರಾಂ ಭೇಟಿ ನೀಡಿ, ಮಸೀದಿಯಲ್ಲಿ ನಡೆಯುವ ಕಾರ್ಯಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು.