ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಪೂರ್ವ ನಿಗದಿತ ಕಾರ್ಯಕ್ರಮದ ಹಿನ್ನೆಲೆ ಬುಧವಾರ ಪಟ್ಟಣದ ಮಹರ್ಷಿ ವಾಲ್ಮೀಕಿ ಶಾಲೆಗೆ ಭೇಟಿ ನೀಡಿ ಅಪೂರ್ಣಗೊಂಡಿರುವ ವಾಲ್ಮೀಕಿ ಭವನ ಕಟ್ಟಡವನ್ನು ವೀಕ್ಷಿಸಿ ಅನುದಾನ ಬಿಡುಗಡೆಯ ಭರವಸೆ ನೀಡಿದರು.
ಮೊದಲಿಗೆ ಶಾಲಾವರಣದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ನಂತರ ತಾವೇ ಅನುದಾನ ನೀಡಿದ್ದ ಗಣಕಯಂತ್ರ ಕೊಠಡಿಯನ್ನು ಉದ್ಘಾಟಿಸಿ, ನಾಯಕ ಸಮಾಜ ಹಾಗೂ ಶಾಲಾಡಳಿತದಿಂದ ನೀಡಲಾದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಮೈಸೂರು ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ವಾಲ್ಮೀಕಿ ಭವನಗಳು ಅನುದಾನದ ಕೊರತೆಯಿಂದ ಅಪೂರ್ಣಗೊಂಡಿವೆ. ಶೇ. 70ರಷ್ಟು ಕಾಮಗಾರಿ ಪೂರೈಸಿ ಸ್ಥಗಿತಗೊಂಡಿದ್ದು, ಅಪೂರ್ಣಗೊಂಡಿರುವ ಭವನಗಳ ಕಾಮಗಾರಿ ಪೂರ್ಣಗೊಳಿಸಬೇಕಾದ್ದು ನಮ್ಮದೇ ಜವಾಬ್ದಾರಿಯಾಗಿದೆ, ಹಾಗಾಗಿ ಸರ್ಕಾರದಿಂದ ಅನುದಾನಬಿಡುಗಡೆ ಮಾಡಿ ಭವನ ಪೂರ್ಣಗೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಜಾತಿಗಣತಿ ವರದಿಯಿಂದ ಯಾವ ತೊಂದರೆಯಾಗಬಾರದು ಎಂದು ಎಲ್ಲ ಕಡೆಯೂ ಹೇಳುತ್ತಾ ಬಂದಿದ್ದೇನೆ. ನಮ್ಮ ಸರ್ಕಾರ ಎಲ್ಲ ಸಮುದಾಯದವರ ಪರವಾಗಿಕೆಲಸ ಮಾಡುತ್ತಿದೆ. ಜಾತಿ ಗಣತಿ ವರದಿಯಿಂದ ಯಾರಿಗೂ ಅನ್ಯಾಯವಾಗುವುದು ಬೇಡ. ಹಾಗಾಗಿ ಸರ್ಕಾರ ಎಲ್ಲವನ್ನು ಸರಿಪಡಿಸಿ ಜಾತಿ ಗಣತಿ ವರದಿ ಅನುಷ್ಠಾನ ಮಾಡಲಿದೆ ಎಂದರು.
ಸಚಿವರು ವಾಲ್ಮೀಕಿ ಶಾಲೆಯಲ್ಲಿ ಕಂಪ್ಯೂಟರ್ ಕೊಠಡಿಯನ್ನು ಉದ್ಘಾಟಿಸಿದ ವೇಳೆ ನೆರೆದಿದ್ದ ನಾಯಕ ಸಮುದಾಯದ ಯುವಕರು ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿ ಹೊಳಿಯವರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು. ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಸಚಿವರು, ವಾಲ್ಮೀಕಿಭವನದ ಕಡೆಗೆ ತೆರಳುತ್ತಿದ್ದಾಗ ಮತ್ತೆ ಘೋಷಣೆಗಳು ಮೊಳಗಿದವು, ಆಗ ಮಾತ್ರ ಘೋಷಣೆ ಕೂಗದಂತೆ ಯುವಕರಿಗೆ ಸೂಚಿಸಿದರು.
----------------