ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ರೈಲು ನಿಲ್ದಾಣದಲ್ಲಿ ಸ್ಟೇಷನ್ ಮಹೋತ್ಸವ ವಿಶೇಷ ಕಾರ್ಯಕ್ರಮವನ್ನು ಮೈಸೂರು ವಿಭಾಗದ ವಿಭಾಗೀಯ ರೈಲ್ವೇ ವ್ಯವಸ್ಥಾಪಕ ಮುದಿತ್ ಮಿತ್ತಲ್ ಉದ್ಘಾಟಿಸಿದರು.ನಂತರ ಪರಂಪರೆ ಗ್ಯಾಲರಿ ಮತ್ತು ಮೈಸೂರು ರೈಲು ಸಂಗ್ರಹಾಲಯಕ್ಕೆ ಭೇಟಿ ನೀಡಿದ ಅವರು, ಲಲಿತಾ ಶಾಲೆಯ ವಿದ್ಯಾರ್ಥಿಗಳು ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.
ಬಳಿಕ ಮಾತನಾಡಿದ ಅವರು, ಮೈಸೂರು ರೈಲು ನಿಲ್ದಾಣವು ಎನ್ಎಸ್ ಜಿ-2 ವರ್ಗಕ್ಕೆ ಸೇರಿದ ನಿಲ್ದಾಣವಾಗಿದ್ದು, ಒಟ್ಟು 6 ಪ್ಲಾಟ್ ಫಾರ್ಮ್ ಹೊಂದಿದೆ. ದ್ವಿ ಸಾಪ್ತಾಹಿಕ, ತ್ರೈ ಸಾಪ್ತಾಹಿಕ ಮತ್ತು ಸಾಪ್ತಾಹಿಕ ಸೇವೆಗಳನ್ನು ಒಳಗೊಂಡಂತೆ 106 ರೈಲುಗಳು ಸಂಚರಿಸುತ್ತವೆ. ಇವು ಮೈಸೂರು ನಗರಕ್ಕೆ ನವದೆಹಲಿ, ಹಾವ್ಡಾ, ಪಾಟ್ನಾ, ಮುಂಬೈ, ಕಚ್ಚೇಗುಡ, ಚೆನ್ನೈ, ತಿರುವನಂತಪುರಂ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳು ದೇಶದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತವೆ ಎಂದು ಹೇಳಿದರು.ನಿಲ್ದಾಣದಲ್ಲಿ ದಿನಕ್ಕೆ ಸರಾಸರಿ 60000 ಪ್ರಯಾಣಿಕರ ಸಂಚಾರವಿದ್ದು, ದಿನನಿತ್ಯ ಸುಮಾರು 21 ರಿಂದ 25 ಲಕ್ಷ ರೂ. ಆದಾಯ ಗಳಿಸುತ್ತದೆ. ಎಸ್ಕಲೆಟರ್ ಗಳು, ಲಿಫ್ಟ್ ಗಳು, ಅಂಡರ್ ಪಾಸ್, ಪಾದಚಾರಿ ಮೇಲ್ಸೇತುವೆ, ವೈ-ಫೈ, ಕೋಚ್ ಸೂಚನಾ ಫಲಕಗಳು, ಸಾರ್ವಜನಿಕ ಘೋಷಣೆ ವ್ಯವಸ್ಥೆ, ಆಹಾರ ಮಳಿಗೆಗಳು, ನಿರೀಕ್ಷಣಾ ಮಂದಿರಗಳು, ಬ್ಯಾಟರಿ ಚಾಲಿತ ವಾಹನಗಳು, ಎಟಿಎಂ ಗಳಂತಹ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ನಿಲ್ದಾಣವು ದಿವ್ಯಾಂಗರ ಸ್ನೇಹಿಯಾಗಿದೆ ಎಂದು ಅವರು ತಿಳಿಸಿದರು.
ಮೈಸೂರು ಜಂಕ್ಷನ್ ಅನ್ನು ಪ್ರಸ್ತುತ 395.73 ಕೋಟಿ ರೂ. ಅಂದಾಜು ವೆಚ್ಚದಲ್ಲಿ ವಿಶ್ವಮಟ್ಟದ ನಿಲ್ದಾಣವಾಗಿ ಮರು ಅಭಿವೃದ್ಧಿಪಡಿಸಲಾಗುವುದು. ಈ ಅಭಿವೃದ್ಧಿಯು ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆ ಪೂರೈಸುವಂತೆ ಹೊಸ ರೈಲುಗಳ ಚಾಲನೆ, ಹಾಲಿ ರೈಲುಗಳ ಸೇವೆಗಳ ಆವೃತ್ತಿ ಹೆಚ್ಚಿಸುವುದು ಹಾಗೂ ಹೊಸ ತಾಣಗಳಿಗೆ ಸಂಪರ್ಕ ಕಲ್ಪಿಸುವಂತೆ ರೂಪಿಸಲಾಗಿದೆ. ಈ ಯೋಜನೆಯಲ್ಲಿ ಮೂರು ಹೊಸ ಪ್ಲಾಟ್ ಫಾರಂಗಳು, 4 ಪಿಟ್ ಲೈನ್ ಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಸ್ಟೇಬ್ಲಿಂಗ್ ಲೈನ್ ಗಳನ್ನು ನಿರ್ಮಿಸುವ ಕಾರ್ಯ ಮಂಜೂರಾಗಿದೆ ಎಂದರು.ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರ ವೈ.ಸಿ. ರೇವಣ್ಣ ಮತ್ತು ನಿವೃತ್ತ ರೈಲ್ವೆ ನೌಕರ ಎಚ್.ಎಸ್. ರಾಮಣ್ಣ ಅವರನ್ನು ಸನ್ಮಾನಿಸಲಾಯಿತು.
ಹೆಚ್ಚುವರಿ ವಿಭಾಗೀಯ ರೈಲ್ವೇ ವ್ಯವಸ್ಥಾಪಕ ಶಮ್ಮಾಸ್ ಹಮೀದ್, ಜಡ್ಆರ್ ಯುಸಿಸಿ ಮತ್ತು ಡಿಆರ್ ಯುಸಿಸಿ ಸದಸ್ಯರು, ಶಾಖಾ ಅಧಿಕಾರಿಗಳು, ಲಲಿತಾ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ರೈಲ್ವೆ ಸಿಬ್ಬಂದಿ ಮತ್ತು ಸಾರ್ವಜನಿಕರು ಇದ್ದರು.