ಕನ್ನಡಪ್ರಭ ವಾರ್ತೆ ಮೈಸೂರುನಗರದ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಕೌಂಟರ್ ತೆರೆದು ನೋಂದಣಿ ಮಾಡಿಕೊಳ್ಳಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಬಿ. ದಿನೇಶ್ ತಿಳಿಸಿದರು.ನಗರದ ಜಯದೇವ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಅವರು, ಜಯದೇವ ಆಸ್ಪತ್ರೆಗೆ ಬರುವ ಹೃದ್ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರತಿದಿನ ಸುಮಾರು 800 ಜನ ಹೊರರೋಗಿಗಳು ದೂರದ ಊರುಗಳಿಂದ ಬೆಳಗ್ಗೆ 6 ರಿಂದ ಬಂದು ಕಾಯುತ್ತಿರುತ್ತಾರೆ. ಅವರಲ್ಲಿ ವೃದ್ಧರು, ಅಂಗವಿಕಲರು, ಹಿರಿಯ ನಾಗರೀಕರು ಇರುತ್ತಾರೆ. ಅವರಿಗೆ ಅನುಕೂಲವಾಗಲೆಂದು ಪ್ರತ್ಯೇಕ ಕೌಂಟರ್. ಹೊರಗೆ ಸಾಲಿನಲ್ಲಿ ನಿಲ್ಲುವವರಿಗೆ, ಮಳೆ, ಬಿಸಿಲಿಗೆ ಆಸರೆಯಾಗಿ ಮೇಲ್ಚಾವಣಿ ಹಾಗೂ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಿಕೊಡಬೇಕು ಎಂದು ಎಂಜಿನಿಯರ್ ಗಳಿಗೆ ಸೂಚಿಸಿದರು.180 ಕೋಟಿ ರು. ವೆಚ್ಚದಲ್ಲಿ 200 ಹಾಸಿಗೆ ಸಾಮರ್ಥ್ಯದ ಹೆಚ್ಚುವರಿ ಕಟ್ಟಡ ನಿರ್ಮಿಸುವ ಜಾಗವನ್ನು ಪರಿಶೀಲಿಸಿದ ಅವರು, ಆಗಸ್ಟ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಗುದ್ದಲಿಪೂಜೆ ಮಾಡಿಸಿ ಕಾಮಗಾರಿ ಪ್ರಾರಂಭಿಸಲಾಗುವುದು. ಕಟ್ಟಡದ ಕಾಮಗಾರಿ ಪ್ರಾರಂಭವಾದ 24 ತಿಂಗಳಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದ ಅವರು, ಕ್ಯಾಂಟೀನ್‌ಗೆ ಭೇಟಿ ನೀಡಿ ಪರಿಶೀಲಿಸಿ ಇಲ್ಲಿಗೆ ನೂರಾರು ಜನರು ಬರುತ್ತಾರೆ, ಗುಣಮಟ್ಟದ ಆಹಾರ ನೀಡುವುದರ ಜೊತೆಗೆ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಆಸ್ಪತ್ರೆಯನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು, ರೋಗಿಗಳೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂದು ಆಸ್ಪತ್ರೆ ಸಿಬ್ಬಂದಿಗಳಿಗೆ ಸೂಚಿಸಿದರು.ಡಾ. ಹರ್ಷಬಸಪ್ಪ, ಡಾ. ರಜಿತ್, ಡಾ. ಜಯಶೀಲನ್, ಡಾ. ಮಂಜುನಾಥ್, ಡಾ. ಶಶಿಕಾಂತ್, ಎಂಜಿನಿಯರ್ ಗಳಾದ ಸ್ವರೂಪ್, ಧರ್ಮೇಂದ್ರ, ಪಿಆರ್‌ಓ ಗಳಾದ ವಾಣಿಮೋಹನ್, ಚಂಪಕಮಾಲ, ಹಿರಿಯ ಶುಶ್ರೂಷಕ ಗುರುಮೂರ್ತಿ, ಲ್ಯಾಬ್ ಶಂಕರ್, ಸಿಬ್ಬಂದಿ ಇದ್ದರು.