ಕನ್ನಡಪ್ರಭ ವಾರ್ತೆ ಜಮಖಂಡಿ

ತಾಲೂಕಿನ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಿಲ್‌ ಪಾವತಿಸದೇ ಕಬ್ಬು ಪೂರೈಸಿದ ರೈತರನ್ನು ಸತಾಯಿಸುತ್ತಿರುವುದನ್ನು ಖಂಡಿಸಿ ರೈತ ಸಂಘಟನೆಗಳು ಸೋಮವಾರ ತಾಲೂಕು ಕಚೇರಿ ಎದುರು ಧರಣಿ ನಡೆಸಿದವು.ಕಬ್ಬಿನ ಬಿಲ್‌ ಪಾವತಿಗೆ ಸರ್ಕಾರ ಏಪ್ರಿಲ್‌ ತಿಂಗಳ ಗಡುವು ನೀಡಿತ್ತು. ಆದರೆ ಮೇ ತಿಂಗಳು ಮುಗಿಯಲು ಬಂದರೂ ಸಹ ಸಕ್ಕರೆ ಕಾರ್ಖಾನೆಗಳು ಬಿಲ್‌ ಪಾವತಿಸದೆ ರೈತರಿಗೆ ಅನ್ಯಾಯ ಮಾಡುತ್ತಿದ್ದು, ಸರ್ಕಾರದ ಆದೇಶದಂತೆ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ರೈತ ಮುಖಂಡರು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ ಅನೀಲ ಬಡಗೇರ ಅವರು, ರೈತರ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಕಬ್ಬಿನ ಕಾರ್ಖಾನೆಗಳ ವಿರುದ್ಧ ಕ್ರಮ ಜರುಗಿಸಿದ್ದರ ಬಗ್ಗೆ ಮಾಹಿತಿ ನೀಡಲಿಲ್ಲ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಶ್ರೀಶೈಲ ಭೂಮಾರ, ರಾಜು ನದಾಫ್‌, ಕಲ್ಲಪ್ಪ ಬಿರಾದಾರ, ಸಿದ್ದಪ್ಪ ಬಣಜಗಾರ, ಸುರೇಶ ಹಂಚಿನಾಳ, ಧರೆಪ್ಪ ದಾನಗೌಡ, ಬಾಹುಬಲಿ ನ್ಯಾಮಗೌಡ, ಸದಾಶಿವ ಕಲೂತಿ, ಶವಪ್ಪ ಕುರಣಿ, ಸದಪ್ಪ ಮಂಟೂರ ಮತ್ತಿತರರು ಇದ್ದರು.

ಧರಣಿ ಸತ್ಯಾಗ್ರಹ: ಪ್ರಸಕ್ತ ಸಾಲಿನಲ್ಲಿ ಕಬ್ಬು ಪೂರೈಸಿದ ಪ್ರತಿಯೊಬ್ಬ ರೈತರ ಕಬ್ಬಿನ ಬಿಲ್‌ ಕೂಡಲೇ ಬಿಡುಗಡೆ ಮಾಡಬೇಕು. ಕೃಷ್ಣಾ ನದಿ ಬತ್ತಿ ಹೋಗಿದ್ದು, ಮಹಾರಾಷ್ಟ್ರದಿಂದ ನೀರು ಬಿಡಿಸಬೇಕು ಎಂದು ಆಗ್ರಹಿಸಿ ಮಂಗಳವಾರದಿಂದ ವಿಜಯಪುರ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದೆಂದು ರೈತ ಮುಖಂಡರು ತಿಳಿಸಿದರು.

ತಾಲೂಕಿನ ಆಲಗೂರು ಗ್ರಾಮದ ಗೌಡರಗಡ್ಡೆ ಪ್ರದೇಶದಲ್ಲಿ ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಲಾಗುವುದೆಂದು ರೈತ ಮುಖಂಡರು ತಿಳಿಸಿದ್ದಾರೆ.