ವಿಐಎಸ್‌ಎಲ್ ಸಂಸ್ಥಾಪಕರ ದಿನ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

KannadaprabhaNewsNetwork | Published : Jan 21, 2025 12:32 AM

ಸಾರಾಂಶ

ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ಸರ್.ಎಂ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಸಂಸ್ಥಾಪಕರ ದಿನ ಆಚರಣೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್.ಚಂದ್ವಾನಿ ಚಾಲನೆ ನೀಡಿದರು.

ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಉದ್ಘಾಟನೆ । ಕಾರ್ಮಿಕರಿಗೆ ವಿವಿಧ ಬಗೆಯ 250 ಸಸಿ ವಿತರಣೆ

ಕನ್ನಡಪ್ರಭ ವಾರ್ತೆ ಭದ್ರಾವತಿ

ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ಸರ್.ಎಂ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಸಂಸ್ಥಾಪಕರ ದಿನ ಆಚರಣೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್.ಚಂದ್ವಾನಿ ಚಾಲನೆ ನೀಡಿದರು.

ಶ್ರೇಷ್ಠ ತಂತ್ರಜ್ಞ (ಎಂಜಿನಿಯರ್), ರಾಜನೀತಿಜ್ಞ, ನಗರದ ಅನ್ನದಾತ, ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯರವರ ಮಾರ್ಗದರ್ಶನದಲ್ಲಿ ಅಂದಿನ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ನೇತೃತ್ವದಲ್ಲಿ ೧೯೧೮ರ ಜ.೧೮ ರಲ್ಲಿ ಮೈಸೂರು ವುಡ್ ಡಿಸ್ಟಿಲೇಷನ್ ಮತ್ತು ಐರನ್ ವರ್ಕ್ಸ್ ಹೆಸರಿನಲ್ಲಿ ಶಂಕುಸ್ಥಾಪನೆಗೊಂಡಿದ್ದು, ಕಾರ್ಖಾನೆ ವತಿಯಿಂದ ಈ ದಿನವನ್ನು ಪ್ರತಿವರ್ಷ ಸಂಸ್ಥಾಪಕರ ದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಬಿ.ಎಲ್.ಚಂದ್ವಾನಿ ಹೇಳಿದರು.

ಬೆಳಿಗ್ಗೆ ಕಾರ್ಖಾನೆ ಆಡಳಿತ ಕಚೇರಿ ಆವರಣದಲ್ಲಿರುವ ಸರ್.ವಿ ವಿಶ್ವೇಶ್ವರಯ್ಯರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸೂಚಿಸಲಾಯಿತು. ನಂತರ ನುಗ್ಗೆ, ಅಡಕೆ, ಪಪ್ಪಾಯಿ, ಹೊಂಗೆ, ಹಲಸು ಮತ್ತು ಮಾವು ಸೇರಿದಂತೆ ಸುಮಾರು ೨೫೦ ಸಸಿಗಳನ್ನು ಕಾರ್ಖಾನೆಯ ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು.

ಸಂಜೆ ನ್ಯೂಟೌನ್ ವಿಐಎಸ್‌ಎಲ್ ರಜತ ಮಹೋತ್ಸವ ಕ್ರೀಡಾಂಗಣದ ಅಮೃತ ಮಹೋತ್ಸವ ವೇದಿಕೆಯಲ್ಲಿ ಸಂಸ್ಥಾಪಕ ದಿನಾಚರಣೆ ಅಂಗವಾಗಿ ಸುಮಾರು ೪೦ ದಿನಗಳ ಕಾಲ ಆಯೋಜಿಸಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.

ಕಾರ್ಖಾನೆಯ ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಕೆ.ಎಸ್ ಸುರೇಶ್, ಮಹಾಪ್ರಬಂಧಕರು (ಹೆಚ್.ಆರ್ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್, ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ, ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಮಿಶ್ರ, ಮಹಾಪ್ರಬಂಧಕರು (ನಗರಾಡಳಿತ) ಮೋಹನ್ ರಾಜ್ ಶೆಟ್ಟಿ, ಮಹಾಪ್ರಬಂಧಕರು (ಹಣಕಾಸು ಮತ್ತು ಲೆಕ್ಕ) ಶೋಭ ಶಿವಶಂಕರನ್, ಅನಿಲ್ ಕುಮಾರ್ ರೆಡ್ಡಿ ಸೇರಿದಂತೆ ಇತರರು ಹಾಜರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೋಲಾಟ ಮತ್ತು ಸಮೂಹ ಗಾಯನ ಕಾರ್ಖಾನೆಯ ಮಹಿಳಾ ಮತ್ತು ಪುರುಷ ಕಾರ್ಮಿಕರು ನಡೆಸಿಕೊಟ್ಟರು, ಕಾರ್ಖಾನೆಯ ಇಳಯರಾಜ ಮತ್ತು ಕೃಷ್ಣರವರ ಪುತ್ರಿಯರಾದ ಮೋನಿಕಾ ಮತ್ತು ಲೇಖನ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.

Share this article