ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಪಟ್ಟಣದ ವಿವಿಧ ಶಿಕ್ಷಣ ಸಂಸ್ಥೆಗಳು ಮತ್ತು ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕ ಮತದಾರರ ಬೆಂಬಲ ಕೋರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕ್ಷೇತ್ರದ ವ್ಯಾಪ್ತಿಯ 20 ಸಾವಿರ ಶಿಕ್ಷಕ ಬಾಂಧವರನ್ನು ಖುದ್ದಾಗಿ ಮಾತನಾಡಿಸಿ, ಸಹಕಾರ ಕೋರಿದ್ದೇನೆ ಎಂದರು.
ಮಂಡ್ಯ, ಹಾಸನ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಮತದಾರ ಶಿಕ್ಷಕರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರು ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದ್ದು, ಇದು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನನಗೆ ಹೆಚ್ಚಿನ ಬಲ ತಂದಿದೆ ಎಂದು ತಿಳಿಸಿದರು.ಇದರ ಜೊತೆಗೆ ನಾನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಪಕ್ಷದ ವತಿಯಿಂದ ಸ್ಪರ್ಧೆ ಮಾಡಲು ಅವಕಾಶ ಕೇಳಿದಾಗ ಅವರು ಹಸಿರು ನಿಶಾನೆ ತೋರಿಸಿದ್ದು, ಅವರ ಆದೇಶದಂತೆ ಕಾರ್ಯೋನ್ಮುಖನಾಗಿದ್ದೇನೆಂದು ಮಾಹಿತಿ ನೀಡಿದರು.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅವ್ವೇರಹಳ್ಳಿಯವನಾದ ನನಗೆ ಗ್ರಾಮಾಂತರ ಪ್ರದೇಶದಲ್ಲಿ ಸಾಕಷ್ಟು ಜನ ಸಂಪರ್ಕ ಇರುವುದರೊಂದಿಗೆ ನನ್ನ ತಾತನ ಸ್ವಗ್ರಾಮ ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಬೆಣಗನಹಳ್ಳಿ ಆಗಿದ್ದು, ಇದು ನನಗೆ ವರದಾನವಾಗಿದೆ ಎಂದರು.
ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯನಾಗಿ ಸ್ಪರ್ಧೆ ಮಾಡಲು ಪಕ್ಷ ಅವಕಾಶ ಕಲ್ಪಿಸಿ ನಾನು ಚುನಾಯಿತನಾದರೆ ಸರ್ಕಾರದಿಂದ ಬರುವ ಸಂಬಳ ಮತ್ತು ಇತರ ವೆಚ್ಚಗಳ ಹಣದ ಜೊತೆಗೆ ಪ್ರತಿ ತಿಂಗಳು ವೈಯಕ್ತಿಕವಾಗಿ ಒಂದು ಲಕ್ಷ ರು. ಗಳನ್ನು ಶಿಕ್ಷಕರ ಕಲ್ಯಾಣ ನಿಧಿಗೆ ನೀಡುವುದಾಗಿ ಹೇಳಿದರು.