ಯಾದಗಿರಿ: ಬದುಕಿನಲ್ಲಿ ನಿಷ್ಕಳಂಕವಾಗಿ ಬದುಕಬೇಕೆಂದರೆ ವಚನ ಪ್ರಜ್ಞೆ ಇರಬೇಕು. ಕತ್ತಲೆಯನ್ನು ಹೊಡೆದೋಡಿಸುವ ಅಗಾಧವಾದ ಶಕ್ತಿ ಶರಣರ ವಚನಗಳಿಗಿದೆ ಎಂದು ಬಸವ ತತ್ವದ ಚಿಂತಕ ವಿಶ್ವರಾಧ್ಯ ಸತ್ಯಂಪೇಟೆ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ನಡೆದ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ಲಿ. ಸಿದ್ದಲಿಂಗಯ್ಯ ಮಣ್ಣೂ ಮತ್ತು ಲಿ. ಗೌರಮ್ಮ ಹೊಟ್ಟಿ ಅವರ ಸ್ಮರಣಾರ್ಥ ನಡೆದ ದತ್ತಿ ಉಪನ್ಯಾಸದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣ ಕುರಿತು ವಿಷಯ ಮಂಡಿಸಿ ಅವರು ಮಾತನಾಡಿದರು.ವೈದಿಕ ಪದ್ದತಿಯು 12ನೇ ಶತಮಾನದಿಂದ 21ನೇ ಶತಮಾನದ ಇಂದಿನವರೆಗೂ ಕಾಲಾನುಕ್ರಮವಾಗಿ ನಮ್ಮ ಅಂತರಂಗ ಹೊಕ್ಕು ರೂಢಿಯಾಗಿದೆ. ಈ ವೈದಿಕ ಕ್ಲಿಷ್ಟೆಯನ್ನು, ಆಚಾರದ ಕರ್ಮಟವನ್ನು ತೊರೆಯಬೇಕಾದರೆ ವಚನ ದೀಪ್ತಿ ಹಚ್ಚಬೇಕು, ನಮ್ಮೊಳಗಿನ ಅಂತರಂಗವನ್ನು ಇಣುಕಿ ನೊಡಬೇಕೆಂದು ಹೇಳಿದರು.
ಪರರನ್ನು ನೋಡುವಾಗ ನಮ್ಮ ಮನೆ ಮಗನೆಂದು ಕಾಣಿರಿ. ಇಲ್ಲಿ ಸಲ್ಲುವವರು ಎಲ್ಲಿಯೂ ಸಲ್ಲಿತ್ತಾರೆ ಎಂದು ಶರಣರು ನಮ್ಮ ನಿಮ್ಮ ಜೀವನದ ಮಾರ್ಗ ಸರಳಿಕೃತವಾಗಲೆಂದು ಹೇಳಿದ್ದಾರೆ. ಬದುಕಿನ ಒತ್ತಡ, ಅಯೋಮಯ ಕ್ಷಣಗಳನ್ನು ಬಂಧಿಸಿಡುವ ಶಕ್ತಿ ವಚನಕ್ಕಿದೆ. ಶರಣರು ನುಡಿದಂತೆ ನಡೆದವರು, ಸಕಲರಲ್ಲೂ ಲೇಸನ್ನು ಬಯಸಿದ ಶರಣರ ವಚನಗಳಲ್ಲಿ ಮರಣವನ್ನು ಮಹಾನವಮಿ ಎಂದು ಬಣ್ಣಿಸಿದ್ದಾರೆ.ಜೀವನದಲ್ಲಿ ಕರಗಬೇಕು, ಸಮಾಜದಲ್ಲಿ ಬೆರೆಯಬೇಕು. ಅಂದಾಗ ಮಾತ್ರ ಲೌಕಿಕ ಬದುಕು ಸಾರ್ಥಕವಾಗುತ್ತದೆ. ಬರವಣಿಗೆ ಕೇವಲ ಅಕ್ಷರ ರೂಪ ತಾಳಬಾರದು. ಅದು ಬದುಕಿನ ಉದ್ದಗಲಕ್ಕೂ ರೂಢಿಯಲ್ಲಿರಬೇಕು ಎಂದರು.
ಇನ್ನೊರ್ವ ಚಿಂತಕ ಶಿವಣ್ಣ ಇಜೇರಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಶರಣರ ಜೀವನದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ಹಂಚಿಕೊಂಡರು.150ಕ್ಕೂ ಹೆಚ್ಚು ಶರಣರಿದ್ದ ಕಲ್ಯಾಣ ನಾಡಿನಲ್ಲಿ ಬದುದೊಡ್ಡ ಅನುಭವ ಮಂಟಪವಿತ್ತು. ಅಲ್ಲಮಪ್ರಭುಗಳು, ಬಸವಣ್ಣ ಹಾಗೂ ಅಕ್ಕ ಮಹಾದೇವಿ ಒಳಗೊಂಡಂತೆ ಇನ್ನು ಅನೇಕ ಶರಣರು ವಚನಗಳ ಮೂಲಕ ಜೀವಂತವಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾನಿಧ್ಯವನ್ನು ಗುರುಮಠಕಲ್ ಖಾಸಾಮಠದ ಶಾಂತವೀರ ಗುರು ಮುರುಘ ರಾಜೇಂದ್ರ ಸ್ವಾಮಿಗಳು ವಹಿಸಿದ್ದರು. ಪ್ರಾಚಾರ್ಯರಾದ ಸುಭಾಶ್ಚಂದ್ರ ಕೌಲಗಿ ಉದ್ಘಾಟಿಸಿ ಮಾತನಾಡಿದರು. ಸಿದ್ದಪ್ಪ ಹೊಟ್ಟಿ ಅಧ್ಯಕ್ಷತೆವಹಿಸಿದ್ದರು.