ಟ್ರಾನ್ಸಫಾರ್ಮಿಂಗ್ ಧಾರವಾಡ ಹೆಸರಿನಲ್ಲಿ ಅಭಿಯಾನ
ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರಿಂದ ಸ್ವಚ್ಛತೆ
ಕನ್ನಡಪ್ರಭ ವಾರ್ತೆ ಧಾರವಾಡಯಾವುದೇ ಒಂದು ನಗರಕ್ಕೆ ಸ್ವಚ್ಛತೆಯೇ ದೊಡ್ಡ ಸವಾಲು. ಧಾರವಾಡ ಸಹ ಇದಕ್ಕೆ ಹೊರತಾಗಿಲ್ಲ. ಸಾಮಾಜಿಕ ಜವಾಬ್ದಾರಿ ಇಲ್ಲದ ಕೆಲವು ನಾಗರಿಕರಿಂದ ಮೊದಲಿದ್ದ ಧಾರವಾಡ ಈಗಿಲ್ಲ. ಎಲ್ಲೆಂದರಲ್ಲಿ ಕಸ ಎಸೆಯುವುದು, ಪ್ರಮುಖ ರಸ್ತೆ, ವೃತ್ತಗಳಲ್ಲಿ ಅಡ್ಡಾದಿಡ್ಡಿ ಬ್ಯಾನರ್ ಅಳವಡಿಕೆಯಿಂದಾಗಿ ಧಾರವಾಡ ಸೌಂದರ್ಯೀಕರಣ ಕಳೆದುಕೊಂಡಿದೆ. ಹಾಗಂತ, ಧಾರವಾಡ ಜನ ಸುಮ್ಮನಾಗಲಿಲ್ಲ. ಫೇಸಬುಕ್‌ನಲ್ಲಿ ಶುರುವಾದ ಸ್ವಚ್ಛತಾ ಆಂದೋಲನವು ಇದೀಗ ಅಭಿಯಾನವಾಗಿ ರೂಪುಗೊಂಡಿದೆ.
ಬಿಆರ್‌ಟಿಎಸ್ ಕಾರಿಡಾರ್ ಸೇರಿದಂತೆ ಎಂಟು ಪಥಗಳಲ್ಲಿ ಎಸೆದ ಪ್ಲಾಸ್ಟಿಕ್ ಬಾಟಲ್, ಕಾಗದದ ಚೂರು, ಗುಟಕಾ ಚೀಟುಗಳು, ಧೂಳು ಸೇರಿದಂತೆ ಕಸವನ್ನು ಸ್ವಚ್ಛಗೊಳಿಸಿ ಮೊದಲ ಹಂತದ ಅಭಿಯಾನವನ್ನು ಯಶಸ್ವಿಗೊಳಿಸಲಾಯಿತು. ಜತೆಗೆ ಎರಡು ಬದಿಯ ಗೋಡೆಗಳಿಗೆ ಅರ್ಕಾಲಿಕ್ ಚಿತ್ರಗಳನ್ನು ಬಿಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅನಿರುದ್ಧ, ಒಂದು ಸಣ್ಣ ಆಲೋಚನೆ ಮತ್ತು ಸಾಮಾಜಿಕ ಮಾಧ್ಯಮದ ಪೋಸ್ಟ್ ಇಂದು ಎರಡು ಸಾವಿರಕ್ಕೂ ಹೆಚ್ಚು ಜನರನ್ನು ಹಾಗೂ 15ಕ್ಕೂ ಹೆಚ್ಚು ಸಂಸ್ಥೆಗಳನ್ನು ಒಗ್ಗೂಡಿಸಿ, ನಗರದ ಪರಿವರ್ತನೆಗಾಗಿ ಸಾಮೂಹಿಕವಾಗಿ ಶ್ರಮಿಸುವ ದೊಡ್ಡ ಅಭಿಯಾನವಾಗಿ ಬೆಳೆದಿರುವುದು ಸಂತೋಷದ ಸಂಗತಿ ಎಂದರು.
ಇದೇ ಸಂದರ್ಭದಲ್ಲಿ ಬರುವ ದಿನಗಳಲ್ಲಿ ತ್ಯಾಜ್ಯ ವಿಂಗಡಣೆಯ ಮಹತ್ವ ತಿಳಿಸುವ ವಿಡಿಯೋಗಳನ್ನು ಸಿದ್ಧಪಡಿಸಿ ಜನರಿಗೆ ತಲುಪಿಸುವುದು, ನಗರದಲ್ಲಿ ದಿನಕ್ಕೆ ಎರಡು ಬಾರಿ ತ್ಯಾಜ್ಯ ಸಂಗ್ರಹಿಸುವ ವ್ಯವಸ್ಥೆ ಜಾರಿಗೆ ತರುವುದು, ಧಾರವಾಡದ ಸ್ವಚ್ಛತೆ ಮತ್ತು ಸಮಗ್ರ ಪರಿವರ್ತನೆಗೆ ಮೂರು ವರ್ಷಗಳ ಗಡುವು ನಿಗದಿಪಡಿಸುವುದು, ಕೆಸಿ ಪಾರ್ಕ್, ಆಜಾದ್ ಪಾರ್ಕ್ ಸೇರಿದಂತೆ ಪ್ರಮುಖ ಉದ್ಯಾನವನಗಳ ಅಭಿವೃದ್ಧಿಗೆ ಶ್ರಮಿಸುವುದು, ನಗರದ ಪ್ರಮುಖ ಹಾಗೂ ಐತಿಹಾಸಿಕ ಬಾವಿಗಳು ಮತ್ತು ಕೆರೆಗಳನ್ನು ಸ್ವಚ್ಛಗೊಳಿಸಿ ನಿರ್ವಹಿಸುವುದು, ಇಲ್ಲಿಯ ಐತಿಹಾಸಿಕ ಕಟ್ಟಡಗಳು ಮತ್ತು ಪಾರಂಪರಿಕ ಸ್ಥಳಗಳನ್ನು ಉಳಿಸಿ, ಪರಿಚಯಿಸುವ ಪ್ರವಾಸಿ ಬಸ್ ವ್ಯವಸ್ಥೆ ಆರಂಭಿಸುವುದು ಸೇರಿದಂತೆ ಧಾರವಾಡ ಬಗ್ಗೆ ಜನರಿಗೆ ಹೆಮ್ಮೆ ಬರುವ ರೀತಿಯಲ್ಲಿ ಕಾರ್ಯಗಳನ್ನು ಮಾಡುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದರು.
ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕಿ ಸಾವಿತ್ರಿ ಕಡಿ, ಪ್ರಮುಖರಾದ ಜೆಎಸ್ಸೆಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ, ಜಗದೀಶ ನಾಯಕ, ವೀರೇಶ ಕೆಲಗೇರಿ, ವಿನಾಯಕ ಜೋಶಿ, ಪ್ರಕಾಶ್ ಭಟ್, ವರ್ಷಾ ಹಂಚಿನಮನಿ, ಅಪರ್ಣಾ ಪೂಜಾರಿ, ಬಸವರಾಜ್ ತಲ್ಲೂರ, ಪ್ರೊ. ವಾಸುದೇವ ಪರ್ವತಿ, ಸುನಿಲ್ ಬಾಗೇವಾಡಿ, ಶಿವು ಅಮ್ಮಿನಗಡ, ಪಿ.ವಿ. ಹಿರೇಮಠ, ಈರಣ್ಣ ಪತ್ತಾರ್, ಮಹಾವೀರ ಉಪಾಧ್ಯ, ಮಾರ್ತಾಂಡಪ್ಪ ಕತ್ತಿ, ಮಂಜುನಾಥ ಬಟ್ಟೆಣ್ಣವರ ಸೇರಿದಂತೆ ಹಲವರು ಇದ್ದರು. ಸ್ವಯಂಪ್ರೇರಣೆಯಿಂದ ಗರಗ ಮಡಿವಾಳೇಶ್ವರ ಮಠದ ಆತ್ಮಾರಾಮ ಸ್ವಾಮೀಜಿ ಸಹ ಶ್ರಮದಾನದಲ್ಲಿದ್ದರು.