ಗಂಗಾವತಿಯಲ್ಲಿ ದೇಶಪ್ರೇಮಿ ವಿದ್ಯಾರ್ಥಿ ಯುವಜನರ ಸಮಾವೇಶ
ಪಕೋಡ ಪ್ರದರ್ಶನ ಮಾಡಿ ಕಾರ್ಯಕ್ರಮ ಉದ್ಘಾಟನೆಕನ್ನಡಪ್ರಭ ವಾರ್ತೆ ಗಂಗಾವತಿಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ನೇತೃತ್ವದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎರಡು ನಾಲಿಗೆಗಳಿವೆ ಎಂದು ನಟ ಹಾಗೂ ಚಿಂತಕ ಪ್ರಕಾಶ ರೈ ವಾಗ್ದಾಳಿ ನಡೆಸಿದರು.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ದೇಶ ಪ್ರೇಮಿ ವಿದ್ಯಾರ್ಥಿ ಯುವಜನರ ಸಮಾವೇಶವನ್ನು ಪಕೋಡ ಪ್ರದರ್ಶಿಸಿ ಉದ್ಘಾಟಿಸಿ ಮಾತನಾಡಿದರು.ಮೋದಿ ಅವರಿಗೆ ಎರಡು ನಾಲಿಗೆಗಳಿವೆ. ಒಳಗೆ ಒಂದು, ಹೊರಗೆ ಒಂದು. ಆದ್ದರಿಂದ ಯುವಕರು ಅವರ ಮಾತು ನಂಬಬೇಡಿ. ಕರ್ನಾಟಕವನ್ನು ಕಾಯಕ ಕರ್ನಾಟಕ ಮಾಡುತ್ತೇನೆ ಎಂದು ಜನರನ್ನು ಮೋಡಿ ಮಾಡುತ್ತಾ ಅವರು ಖಾಲಿ ಕರ್ನಾಟಕ ಮಾಡುತ್ತಾರೆ. ಹಾಗಾಗಿ ಜನರು ಎಚ್ಚೆತ್ತುಕೊಳ್ಳಬೇಕೆಂದರು. 2015ರಲ್ಲಿ ಸ್ಮಾರ್ಟ್‌ಸಿಟಿ ಮಾಡುತ್ತೇನೆ. ಇದರಿಂದ ಸಾಕಷ್ಟು ಹುದ್ದೆಗಳಿಗೆ ಅವಕಾಶ ಸಿಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಕೊಡುತ್ತೇನೆ ಎಂದು ಹೇಳಿದ್ದ ಪ್ರಧಾನಿ ಈಗ ಒಬ್ಬರಿಗಾದರೂ ಉದ್ಯೋಗ ಸೃಷ್ಟಿಸಿದ್ದಾರೆಯೇ ಎಂದು ಪ್ರಶ್ನಿಸಬೇಕಾಗಿದೆ ಎಂದರು.
ಪುಲ್ವಾಮಾ ದಾಳಿಯಲ್ಲಿ ಭಾರತದ 40 ಯೋಧರು ಸಾವನ್ನಪ್ಪಿದರು. ಇವರ ಶವವನ್ನು ದೇಶಕ್ಕೆ ತರಲು ಫ್ಲೈಟ್ ಕಳಿಸಲಿಲ್ಲ. ಆದರೆ ಪ್ರಧಾನಿ ಮೋದಿ ಅವರು ಸಂಸತ್ ಉದ್ಘಾಟನೆಗೆ ಪಂಡಿತರನ್ನು ಕರೆಸಲು ಫ್ಲೈಟ್ ಕಳಿಸಿದರು. ಇದು ದೊಡ್ಡ ದುರಂತವಾಗಿದೆ ಎಂದರು.ಪ್ರಧಾನಿಗೆ ರೈತರು ಬೇಕಾಗಿಲ್ಲ, ಯೋಧರು ಬೇಕಾಗಿಲ್ಲ ಆದರೆ ಅಂಬಾನಿಯಂತ ಮಹಾನ್ ವ್ಯಕ್ತಿಗಳು ಅವರಿಗೆ ಬೇಕಾಗಿದೆ ಎಂದು ಆರೋಪಿಸಿದರು.
ದೆಹಲಿಯ ರೈತ ಹೋರಾಟಗಾರ ಅವತಾರ್ ಸಿಂಗ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನಿರುದ್ಯೋಗವಂತರಿಗೆ ಉದ್ಯೋಗ ನೀಡಿಲ್ಲ. ಕಾರ್ಪೊರೇಟ್ ಶಾಹಿಗಳ ಪರವಾಗಿದ್ದಾರೆ. ಕೃಷಿ ಕಾನೂನಿನ ವಿಷಯದಲ್ಲಿ ಮೋದಿ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ಎಸ್ಐಓ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮೊಹ್ಮದ್ ಪೀರ್, ಮುಖಂಡರಾದ ದುರ್ಗೇಶ್, ಶ್ರೀನಾಥ ಪೂಜಾರಿ, ಸರೋವರ್ ಬೆಂಕಿಕೆರೆ, ಬಾಲಾಜಿ ಕಾಂಬ್ಳೆ, ನ್ಯಾಯವಾದಿ ಅಶ್ನಿನಿ ಸೇರಿದಂತೆ ಪ್ರಮುಖರು ಇದ್ದರು.