ಮೊಳಕಾಲ್ಮುರು: ಸುಭದ್ರ ಭಾರತ ನಿರ್ಮಾಣಕ್ಕಾಗಿ ಪ್ರತಿಯೊಬ್ಬರು ಮತದಾನ ಕಾರ್ಯದಲ್ಲಿ ಭಾಗವಹಿಸಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ತಹಸೀಲ್ದಾರ್ ಎಂ.ವಿ.ರೂಪ ಹೇಳಿದರು.
ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿಯಬೇಕಾದರೆ ಪ್ರತಿಯೊಬ್ಬ ಯುವಕರು ಮತದಾನ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಇದರಿಂದ ದೇಶದ ಸಾರ್ವಭೌಮತ್ವ ಸಾರುವ ಜತೆಗೆ ಬಲಿಷ್ಟ ರಾಷ್ಟ್ರ ಕಟ್ಟುವಲ್ಲಿ ಸಹಕಾರಿಯಾಗಬೇಕು. ಮತದಾನ ಪ್ರತಿಯೊಬ್ಬರ ಸಂವಿಧಾನ ಬದ್ಧ ಹಕ್ಕಾಗಿದ್ದು, ಮತದಾನದ ಕುರಿತು ಅರಿವನ್ನು ಪಡೆದುಕೊಳ್ಳಬೇಕು. 18 ತುಂಬಿದ ಪ್ರತಿಯೊಬ್ಬರು ಮತ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸುವ ಮೂಲಕ ಮತದಾನ ಕಾರ್ಯದಲ್ಲಿ ಭಾಗಿಯಾಗಿ ಮತದಾನ ಮಾಡಬೇಕೆಂದು ತಿಳಿಸಿದರು.
ಹಿರಿಯ ವಕೀಲ ರಾಜಶೇಖರ್ ನಾಯಕ ಮಾತನಾಡಿ, ಭಾರತ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗುವಂತೆ ಪ್ರತಿಯೊಬ್ಬರಿಗೂ ಮತದಾನ ಮಾಡುವಂತ ಹಕ್ಕು ನೀಡಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದು, ಪ್ರಜೆ ಮತ ನೀಡಿ ದೇಶವನ್ನು ಬಲಿಷ್ಟವಾಗಿ ಕಟ್ಟುವಂತ ಶಕ್ತಿ ಇದೆ. ಮತದಾನದಲ್ಲಿ ಭಾಗಿಯಾಗುವ ಮೂಲಕ ಉತ್ತಮ ಚಿಂತನೆಗಳು ಇರುವಂತ ರಾಜಕಾರಣಿಗಳನ್ನು ಆಯ್ಕೆ ಮಾಡಬೇಕು ಎಂದರು.ಸಹಾಯಕ ಪ್ರಾಧ್ಯಾಪಕ ಡಾ.ಯೋಗಾನಂದ ಮಾತನಾಡಿ, ದೇಶ ಅಭಿವೃದ್ಧಿಯಾಗಬೇಕಾದರೆ ಉತ್ತಮ ಜನಪ್ರತಿನಿಧಿಗಳ ಅಗತ್ಯವಾಗಿದೆ. 18 ತುಂಬಿದ ವರ್ಷ ಮೀರಿದ ಪ್ರತಿಯೊಬ್ಬ ಯುವಕರು ಮತ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಿ ಮತದಾನದಲ್ಲಿ ಭಾಗಿಯಾಗಬೇಕು. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಿ ಪ್ರಜಾ ಪ್ರಭುತ್ವದ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದಿದ್ದಾರೆ.