ಬಳ್ಳಾರಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಭಾವನಾತ್ಮಕ ಆವೇಶಗಳಿಗೆ ಬಲಿಯಾಗದೇ ವಿವೇಕಶಾಲಿಗಳಾಗಿ ಹಕ್ಕು ಚಲಾಯಿಸಬೇಕು ಎಂದು ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಹೇಳಿದರು.ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಜಾಗೃತಿ ನಾಗರಿಕರು ಕರ್ನಾಟಕದಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ಸಮಾಜವನ್ನು ಧರ್ಮ, ಭಾಷೆ, ಜಾತಿಗಳ ಹೆಸರಿನಲ್ಲಿ ಒಡೆಯುವುದನ್ನು ತಡೆಗಟ್ಟುವ ಅನಿವಾರ್ಯತೆಯಿದೆ ಎಂದರು.
ಪ್ರಧಾನಿ ಬರೀ ಬಾಯಿ ಮಾತಿನಲ್ಲಿ ಮಹಿಳಾ ರಕ್ಷಣೆಯ ಮಾತುಗಳನ್ನಾಡುತ್ತಾರೆಯೇ ವಿನಃ ಮಹಿಳಾ ರಕ್ಷಣೆ ಸಮಯದಲ್ಲಿ ಕಾಳಜಿ ತೋರಿಸಲಿಲ್ಲ. ಕಳೆದ ಒಂದು ದಶಕದಲ್ಲಿ ದೇಶದಲ್ಲಿ ನಡೆದಿರುವ ನಾನಾ ಪ್ರಕರಣಗಳು ಸಾಕ್ಷಿಯಾಗಿವೆ. ಮಣಿಪುರದಲ್ಲಿ ಹಾಡು ಹಗಲು ಸಾವಿರಾರು ಜನ ಮಹಿಳೆಯರನ್ನು ಬೆತ್ತಲೆಗೊಳಿಸಿ, ಲೈಂಗಿಕ ದೌರ್ಜನ್ಯ ಅತ್ಯಾಚಾರ ನಡೆಸಿ ಕೊಲೆಗೈದರೂ ಯಾವುದೇ ಕ್ರಮಗಳಾಗಲಿಲ್ಲ. ಕುಸ್ತಿಪಟುಗಳ ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿರುದ್ಧ ನ್ಯಾಯ ಕೇಳಿದರೆ ಇವರು ನಿಂತಿದ್ದು ಯಾರ ಪರ ಎಂದು ಪ್ರಶ್ನಿಸಿದರು.
ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ವಿಮಲಾ ಕೆ.ಎಸ್., ಪ್ರಗತಿಪರ ಚಿಂತಕಿ ಡಾ.ವಸುಂಧರಾ ಭೂಪಲ್, ಸಾಹಿತಿ ಜಾಣಗೆರೆ ವೆಂಕಟರಾಮ, ಕಾಂಗ್ರೆಸ್ ಮುಖಂಡ ವಿಜಯ್ ಕುಮಾರ್ ಸಂಗನಕಲ್ಲು ಇದ್ದರು.