ಬೆಂಗಳೂರು : ನಗರದಲ್ಲಿ ಜೂ.20ರಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಆರಂಭವಾಗಲಿದ್ದು, ಜೂ.30ರಿಂದ ಜು.29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ಸಂಗ್ರಹ ಸಮೀಕ್ಷೆ ನಡೆಸಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಎಲ್‌ಒಗಳು ಹಾಲಿ ಇರುವ ಮತದಾರರ ಪಟ್ಟಿ ಆಧರಿಸಿ ನಿಗದಿತ ಅರ್ಜಿಯನ್ನು ಮತದಾರರಿಗೆ ನೀಡಿ ವಿವರಗಳನ್ನು ಭರ್ತಿ ಮಾಡಿ ವಾಪಸ್ ನೀಡಲು ಸೂಚಿಸುತ್ತಾರೆ. ಬಳಿಕ ದತ್ತಾಂಶವನ್ನು ಪರಿಶೀಲಿಸಿ, ತಾಳೆ ಮಾಡಿ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಈ ಕಾರ್ಯಕ್ಕಾಗಿ ಎಂಟು ಸಾವಿರಕ್ಕಿಂತ ಹೆಚ್ಚು ಸರ್ಕಾರಿ ನೌಕರರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಮತದಾರರ ಸಂಖ್ಯೆ ಆಧರಿಸಿ ಮತಗಟ್ಟೆಗಳನ್ನು ಬದಲಿಸುವ, ಹೆಚ್ಚಿಸುವ, ಕಡಿಮೆ ಮಾಡುವ ಪ್ರಕ್ರಿಯೆ ಜು.29ರಿಂದ ಆರಂಭವಾಗುತ್ತದೆ. ಆ.5ಕ್ಕೆ ಕರಡು ಮತದಾರರ ಪಟ್ಟಿ ಹಾಗೂ ಅ7ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಆ.5ರಿಂದ ಸೆ.4ರ ವರೆಗೆ ಆಕ್ಷೇಪಣೆ ಸ್ವೀಕರಿಸಲಾಗುತ್ತದೆ. ಹೆಸರು ಸೇರ್ಪಡೆ, ತೆಗೆಯುವುದರ ಕುರಿತಾಗಿ ಮತದಾರರು ಆಕ್ಷೇಪಣೆ ಸಲ್ಲಿಸಬಹುದು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು 12 ಸರ್ಕಾರಿ ಗುರುತಿನ ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ಒದಗಿಸಬಹುದಾಗಿದೆ ಎಂದು ಆಯುಕ್ತ ಮಹೇಶ್ವರ ರಾವ್ ತಿಳಿಸಿದರು.
ಪ್ರತಿ ಮತಗಟ್ಟೆಗೆ ಒಬ್ಬರಂತೆ ಬೂತ್ ಲೆವೆಲ್ ಏಜೆಂಟ್‌ಗಳನ್ನು ನೇಮಕ ಮಾಡುವ ಮೂಲಕ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ನೋಂದಾಯಿತ ಮತ್ತು ಮಾನ್ಯತೆ ಪಡೆದಿರುವ ರಾಜಕೀಯ ಪಕ್ಷಗಳು ನೆರವು ಮತ್ತು ಸಹಕಾರ ನೀಡಬೇಕು. ಮತದಾರರ ಪಟ್ಟಿ ಮ್ಯಾಪಿಂಗ್ ಮಾಡುವ ಕಾರ್ಯ ಶೇ.72ರಷ್ಟು ಪೂರ್ಣಗೊಂಡಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆಗೆ ಶಿಕ್ಷಕರನ್ನು ನಿಯೋಜಿಸಲಾಗುತ್ತದೆ. ಗರಿಷ್ಠ 200 ಮನೆ ನೀಡಲಾಗುತ್ತದೆ. ಅವರ ಶೈಕ್ಷಣಿಕ ಕಾರ್ಯಕ್ಕೆ ಅಡ್ಡಿಯಾಗದಂತೆ ಶಾಲೆ ಆರಂಭವಾಗುವ ಮೊದಲು ಬೆಳಗ್ಗೆ ಮತ್ತು ಸಂಜೆ ವೇಳೆ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತೆ ಸುಷಮಾ ಗೋಡಬೋಲೆ ಉಪಸ್ಥಿತರಿದ್ದರು.
ಜಿಬಿಎ ಚುನಾವಣೆಗೆ ಸುಪ್ರೀಂಕೋರ್ಟ್ ಆ.31ರ ಗಡುವು ನೀಡಿದೆ. ಹೀಗಾಗಿ, ಚುನಾವಣೆಗೆ ಎಸ್‌ಐಆರ್ ಪ್ರಕ್ರಿಯೆ ಆಧಾರಿತ ಮತದಾರರ ಪಟ್ಟಿ ಬಳಸಲಾಗುವುದೇ ಅಥವಾ ಹಾಲಿ ಇರುವ ಮತದಾರರ ಪಟ್ಟಿಯನ್ನು ಬಳಸಲಾಗುತ್ತದೆಯೇ ಪ್ರಶ್ನೆಗೆ ಉತ್ತರಿಸಿದ ಮುಖ್ಯ ಆಯುಕ್ತರು ಜಿಬಿಎ ಚುನಾವಣೆ ಹಾಗೂ ಎಸ್‌ಐಆರ್ ಪ್ರಕ್ರಿಯೆ ಪ್ರತ್ಯೇಕವಾಗಿ ನಡೆಯುತ್ತವೆ ಎಂದು ರಾವ್ ತಿಳಿಸಿದರು.
ನಗರದಲ್ಲಿ ಎಸ್‌ಐಆರ್ ವೇಳಾಪಟ್ಟಿ
-ಬಿಎಲ್‌ಒಗಳಿಂದ ಮನೆಗಳ ಭೇಟಿ : ಜೂ.30ರಿಂದ ಜು.29
-ಮತಗಟ್ಟೆಗಳ ಮರುಹೊಂದಾಣಿಕೆ : ಜು.29ರಿಂದ
-ಕರಡು ಮತದಾರರ ಪಟ್ಟಿಯ ಪ್ರಕಟಣೆ : ಆ.5
-ಆಕ್ಷೇಪಣೆ ಸಲ್ಲಿಸುವ ಅವಧಿ : ಆ.5ರಿಂದ ಸೆ.4
-ಅಂತಿಮ ಮತದಾರರ ಪಟ್ಟಿಯ ಪ್ರಕಟಣೆ : ಅ.7