ಚಿಕ್ಕಮಗಳೂರುಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಎಸ್‌ಐಆರ್ (ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ) ಪ್ರಕ್ರಿಯೆ ಕೈಗೊಳ್ಳಲಾಗುತ್ತಿದ್ದು, ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಎಲ್ಲ ರಾಜಕೀಯ ಪಕ್ಷಗಳು ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮನವಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಎಸ್‌ಐಆರ್ (ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ) ಪ್ರಕ್ರಿಯೆ ಕೈಗೊಳ್ಳಲಾಗುತ್ತಿದ್ದು, ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಎಲ್ಲ ರಾಜಕೀಯ ಪಕ್ಷಗಳು ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಕೇಶ್ವಾನ್‌ನಲ್ಲಿ ಬುಧವಾರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು
ಎಸ್‌ಐಆರ್ ಪ್ರಕ್ರಿಯೆ ಪಾರದರ್ಶಕತೆಯಿಂದ ಕೂಡಿದ್ದು, ಇದರ ಉದ್ದೇಶ ಅರ್ಹ ಮತದಾರರನ್ನು ಮತಪಟ್ಟಿಗೆ ಸೇರಿಸುವುದು ಮತ್ತು ಅನರ್ಹರನ್ನು ನಿಯಮಾನುಸಾರ ಕೈಬಿಡುವುದಾಗಿದೆ. ಯಾವುದೇ ತರಹದ ಸುಳ್ಳು ಮಾಹಿತಿ ಹಾಗೂ ಅಪಪ್ರಚಾರ ಗಳಿಗೆ ಕಿವಿಗೊಡಬಾರದು ಎಂದರು.
ಎಸ್‌ಐಆರ್ ಕಾರ್ಯ ಅತ್ಯಂತ ಎಚ್ಚರಿಕೆಯಿಂದ ನಡೆಯುತ್ತಿದೆ. 2002 ರಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನಡೆದಿದ್ದು, ಈ ಮತದಾರರ ಪಟ್ಟಿ ಆಧರಿಸಿ ಫ್ಯಾಮಿಲಿ ಲಿಂಕೇಜ್ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ ಎಂದರು.ಕುಟುಂಬದ ಮುಖ್ಯಸ್ಥರ ಹೆಸರು 2002ರ ಪಟ್ಟಿಯಲ್ಲಿದ್ದರೆ ಹೊಸದಾಗಿ ಅರ್ಹತೆ ಪಡೆಯುವ ಕುಟುಂಬದ ಇತರ ಸದಸ್ಯರ ಹೆಸರುಗಳನ್ನು ಸೇರ್ಪಡೆ ಮಾಡುವುದು ಸುಲಭವಾಗುತ್ತದೆ. ಮದುವೆಯಾಗಿ ಅಥವಾ ವಲಸೆ ಬಂದು ಇಲ್ಲಿ ನೆಲೆಸಿರುವವರ ಹೆಸರು ಹಳೆ ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ ಅವರಿಗೆ ಫ್ಯಾಮಿಲಿ ಲಿಂಕೇಜ್ ಸಿಗುವುದಿಲ್ಲ. ಈ ಹಿಂದೆ ಅವರು ವಾಸವಾಗಿದ್ದ ಸ್ಥಳದಲ್ಲಿನ ಮತದಾರರ ಪಟ್ಟಿಯಲ್ಲಿ ಆ ಮಾಹಿತಿ ಲಭ್ಯವಿದ್ದಲ್ಲಿ ಹೆಸರು ಸೇರ್ಪಡೆ ಮಾಡಬಹುದು ಎಂದರು. ಜಿಲ್ಲೆಯಲ್ಲಿ ಶೇ.74.79ರಷ್ಟು ಮತದಾರರ ಮ್ಯಾಪಿಂಗ್ ಪೂರ್ಣಗೊಳಿಸಿದ್ದು, ಮ್ಯಾಪಿಂಗ್ ಆಗದೇ ಇರುವವರು ಚುನಾವಣಾ ಆಯೋಗ ನಿಗದಿಪಡಿಸಿದ ಯಾವುದಾದರೊಂದು ದಾಖಲೆ ನೀಡಿದಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗುವುದು ಎಂದು ತಿಳಿಸಿದರು. ಹೊರಗಿನಿಂದ ಬಂದು ವಾಸಿಸುತ್ತಿರುವ ಉದ್ಯೋಗಿಗಳು, ವಲಸಿಗರು ಹಾಗೂ ಮದುವೆಯಾಗಿ ಬಂದಿರುವ ಹೊಸ ಮತ ದಾರರನ್ನು ಗುರುತಿಸಿ ಭಾರತದ ನಾಗರಿಕರೆಂದು ದೃಢೀಕರಿಸುವ ಅಧಿಕೃತ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಪಡೆದು ಪಟ್ಟಿಗೆ ಸೇರಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ರಾಜಕೀಯ ಪಕ್ಷಗಳು ಎಲ್ಲ ಬೂತ್‌ಗಳಲ್ಲೂ ಬೂತ್ ಮಟ್ಟದ ಏಜೆಂಟರನ್ನು ನೇಮಿಸಬೇಕು. ಅವರಿಗೆ ಎಸ್‌ಐಆರ್ ಕುರಿತು ತರಬೇತಿ ನೀಡಲಾಗುವುದು ಎಂದರು.ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ ಮಾತನಾಡಿ, ಜಿಲ್ಲೆಯಲ್ಲಿ 1230ಮತಗಟ್ಟೆಗಳಿದ್ದು, ಎಲ್ಲ ಬೂತ್‌ಗಳಿಗೂ ಬಿಎಲ್‌ಒ ಗಳನ್ನು ನೇಮಿಸಲಾಗಿದೆ. ರಾಜ್ಯದಲ್ಲಿ ಇದೀಗ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಈ ಬಾರಿ ಹೊಸದಾಗಿ ಮತದಾರರ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. 2025ರ ಜನವರಿಯಲ್ಲಿ ಅಂತಿಮಗೊಂಡಿದ್ದ ಮತದಾರರ ಪಟ್ಟಿಯನ್ನೇ ಮೂಲ ಆಧಾರವಾಗಿಟ್ಟುಕೊಂಡು 2002ರ ಕೊನೆಯ ಎಸ್‌ಐಆರ್ ಪಟ್ಟಿಯೊಂದಿಗೆ ಮ್ಯಾಪಿಂಗ್ ಮಾಡಲಾಗುತ್ತಿದೆ ಎಂದರು.ಎಸ್‌ಐಆರ್ ಪ್ರಕ್ರಿಯೆ ಅಂಗವಾಗಿ ತರಬೇತಿ ಹಾಗೂ ಜೂ. 20 ರಿಂದ ಜು. 29ರವರೆಗೆ ಒಂದು ತಿಂಗಳ ಕಾಲ ಜಿಲ್ಲಾದ್ಯಂತ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡುವರು. ಈ ವೇಳೆ ಪ್ರತಿ ಮತದಾರರಿಗೂ ಮುದ್ರಿತವಾದ ಎನ್ಯೂಮರೇಶನ್ ಫಾರಂ ನೀಡುವರು. ಇದು ದ್ವಿಪ್ರತಿಯಲ್ಲಿದ್ದು, ಒಂದು ಪ್ರತಿಯನ್ನು ಮತದಾರರಿಗೆ ನೀಡಿ, ಮತ್ತೊಂದು ಪ್ರತಿಯಲ್ಲಿ ಮತದಾರರ ಸಹಿ ಪಡೆದು ಬಿಎಲ್‌ಒಗಳು ತಮ್ಮಲ್ಲೇ ಇರಿಸಿಕೊಳ್ಳಲಿದ್ದಾರೆ. ತದನಂತರ ಈ ಸಹಿ ಮಾಡಿದ ಫಾರಂ ಅನ್ನು ಸ್ಕ್ಯಾನ್ ಮಾಡಿ ಚುನಾವಣಾ ಆಯೋಗದ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಲಾಗುವುದು ಎಂದು ತಿಳಿಸಿದರು.ಚುನಾವಣಾ ಆಯೋಗದ ನಿಯಮದಂತೆ ಜು. 29ರ ಒಳಗಾಗಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಕ್ರಮಬದ್ಧವಾಗಿ ಪೂರ್ಣ ಗೊಳ್ಳಲಿದೆ. ಆ. 5 ರಂದು ಕರಡು ಮತದಾರರ ಪಟ್ಟಿ ಅಧಿಕೃತವಾಗಿ ಪ್ರಕಟಿಸಲಾಗುವುದು. ಸಾರ್ವಜನಿಕರು ಅಕ್ಟೋಬರ್ 3ರ ಒಳಗಾಗಿ ಆಕ್ಷೇಪಣೆ ಸಲ್ಲಿಸಬಹುದು. ಸಾರ್ವಜನಿಕರಿಂದ ಬರುವ ಆಕ್ಷೇಪಣೆಗಳ ಇತ್ಯರ್ಥದ ನಂತರ ಅಕ್ಟೋಬರ್ 7 ರಂದು ಅಂತಿಮವಾಗಿ ಮತದಾರರ ಪಟ್ಟಿ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದರು.ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.