ಕನ್ನಡಪ್ರಭ ವಾರ್ತೆ ಬೆಂಗಳೂರು
ಜಕ್ಕೂರು ಬಡಾವಣೆಯ ನ್ಯೂ ಕೃಷ್ಣ ಸಾಗರ ಫುಡ್ ಕೋರ್ಟ್ ನಿಂದ ಆರಂಭಗೊಂಡ ಜಾಥಾ ಜಕ್ಕೂರು ಮುಖ್ಯ ರಸ್ತೆ ಮೂಲಕ, ಜಕ್ಕೂರು ವೃತ್ತ, ಕೆ.ವಿ ಭೈರೇಗೌಡ ವೃತ್ತ, ಜಕ್ಕೂರಿನ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯ ಮತಗಟ್ಟೆಯವರೆಗೆ ಸಾಗಿತ್ತು. ಮತಗಟ್ಟೆ ಆವರಣದಲ್ಲಿ ‘ಚುನಾವಣಾ ಪರ್ವ ದೇಶದ ಗರ್ವ’ ಎಂಬ ಧ್ಯೇಯ ಒಳಗೊಂಡಿರುವ ಧ್ವಜಾರೋಹಣ ಮಾಡಲಾಯಿತು.
ಪಾಲಿಕೆಯ ಅಧಿಕಾರಿ, ಸಿಬ್ಬಂದಿ, ನಾಗರಿಕರು, ವಿದ್ಯಾರ್ಥಿಗಳು, ಸೈಕಲ್, ಕಾಲ್ನಡಿಗೆ ಮೂಲಕ ನಡೆದ ಜಾಥ ಕಾರ್ಯಕ್ರಮದಲ್ಲಿ ರಸ್ತೆಯುದ್ದಕ್ಕೂ ಬಿತ್ತಿಪತ್ರಗಳನ್ನು ಪ್ರದರ್ಶಿಸುತ್ತಾ, ಘೋಷಣೆಗಳನ್ನು ಕೂಗುತ್ತಾ ಎ.26 ರಂದು ತಪ್ಪದೆ ಮತದಾನ ಮಾಡುವಂತೆ ಮನವಿ ಮಾಡಲಾಯಿತು.ಮತದಾರರ ಪಟ್ಟಿಯಲ್ಲಿರುವ ತಮ್ಮ ಹೆಸರು ಖಚಿತಪಡಿಸಿಕೊಳ್ಳುವ ಕುರಿತು ಮಾಹಿತಿ ನೀಡುವುದರ ಜತೆಗೆ ನೈತಿಕ ಚುನಾವಣೆ ನಡೆಸುವ ಸಂಬಂಧ ಮತದಾರರಿಗಾಗಿ ಹೊರ ತಂದಿರುವ ಸಿ-ವಿಜಿಲ್, ಕೆವೈಸಿ, ಸಕ್ಷಮ್ ತಂತ್ರಾಂಶಗಳು ಸೇರಿದಂತೆ ಮತದಾರರ ಸಹಾಯವಾಣಿ-1950 ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಲಾಯಿತು. ಜಕ್ಕೂರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮತದಾನದ ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು. ಮತದಾನದ ಕುರಿತು ಜಾಗೃತಿ ಗೀತೆಯನ್ನು ಹಾಡಲಾಯಿತು.- - -
ಜಕ್ಕೂರಿನ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ 7 ಮತಗಟ್ಟೆಗಳಿದ್ದು, ಕನಿಷ್ಟ ಸೌಲಭ್ಯಗಳಿರುವುದನ್ನು ಪರಿಶೀಲಿಸಿ, ಮತದಾನದ ದಿನ ಯಾವುದೇ ರೀತಿಯ ಸಮಸ್ಯೆಯಾಗದಂತೆ ಎಲ್ಲಾ ರೀತಿಯ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಕಾಂತರಾಜು, ವಲಯ ಆಯುಕ್ತ ಕರೀಗೌಡ, ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್, ಉಪ ಆಯುಕ್ತ ಮಮತಾ, ಚುನಾವಣಾ ರಾಯಭಾರಿ ನೀತು ವನಜಾಕ್ಷಿ ಉಪಸ್ಥಿತರಿದ್ದರು.