ಚನ್ನಪಟ್ಟಣ: ನಗರದ ಆರನೇ ವಾರ್ಡ್‌ನ ಆವರ್ತಪುರದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಬಗೆಹರಿಸದಿದ್ದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲಾಗುವುದು ನಿವಾಸಿಗಳು ಎಚ್ಚರಿಕೆ ನೀಡಿದರು.
ನಗರದ ಹೃದಯ ಭಾಗವಾದ ಬಸ್ ನಿಲ್ದಾಣಕ್ಕೆ ಸನಿಹದಲ್ಲೇ ಇರುವ ಆವರ್ತಪುರದಲ್ಲಿ ಒಂದು ತಿಂಗಳಿನಿಂದ ನೀರಿನ ಸಮಸ್ಯೆ ಉಲ್ಭಣಗೊಂಡಿದೆ. ವಾರಕ್ಕೆ ಒಮ್ಮೆಯೂ ಕಾವೇರಿ ನೀರು ಪೂರೈಕೆ ಮಾಡುತ್ತಿಲ್ಲ. ನೀರಿನ ಸಮಸ್ಯೆಗಾಗಿ ಕೆಲ ತಿಂಗಳ ಹಿಂದೆ ಕೊಳವೆ ಬಾವಿ ಕೊರೆದರೂ ನೀರು ಬಿದ್ದಿಲ್ಲ. ಹಾಗಾಗಿ ಇಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. ಜನ ಕುಡಿಯಲು, ದಿನಬಳಕೆಗೆ ನೀರಿಲ್ಲದೆ ಬವಣೆ ಅನುಭವಿಸುತ್ತಿದ್ದಾರೆ ಎಂದು ಅಲವತ್ತುಕೊಂಡರು.
ಎಚ್‌ಬಿ ಕಾಲೋನಿಗೆ ನೀರು:ನಮ್ಮ ಭಾಗದ ನೀರನ್ನು ಕಡಿತಗೊಳಿಸಿ ಪಕ್ಕದ ಎಚ್.ಬಿ. ಕಾಲೋನಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಕೊಳವೆ ಬಾವಿ ನೀರಿನ ಪೈಪ್ ಲೈನ್‌ಗೆ ವಾಲ್ವ್‌ಗಳನ್ನು ಅಳವಡಿಸಿ ಎಚ್.ಬಿ. ಕಾಲೋನಿಗೆ ನೀರು ತಿರುಗಿಸಲಾಗಿದೆ. ಇದರಿಂದ ಆವರ್ತಪುರಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ಸಮಸ್ಯೆ ಪರಿಹರಿಸುವಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಏನೂ ಪ್ರಯೋಜನವಿಲ್ಲ. ಆದ್ದರಿಂದ ನಿವಾಸಿಗಳು ಸೇರಿ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ನಿವಾಸಿಗಳಾದ ಮನೋರಂಜನ್, ಮದನ್, ಪ್ರಭುದಾಸ್, ಆಲ್ವಿನ್, ಸುರೇಶ್‌ಬಾಬು, ಸುಧಾಕರ್, ಜೀವನ್, ಅಪ್ಪು, ದಯಾನಿಧಿ ಇಮಾನ್ಯುವೆಲ್, ಕೋಕಿಲಾ, ಸುಗುಣ, ರಾಣಿ ಇತರರಿದ್ದರು.
ಪೊಟೋ೨೫ಸಿಪಿಟಿ೨: ಚನ್ನಪಟ್ಟಣದ ಆವರ್ತಪುರ ನಿವಾಸಿಗಳು ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.