ಅಲೆಮಾರಿ ಕಾರ್ಮಿಕರಿಂದ ಮತದಾನ ಬಹಿಷ್ಕಾರ

KannadaprabhaNewsNetwork | Published : Apr 25, 2024 1:05 AM

ಸಾರಾಂಶ

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಐ.ಕೆ.ಕಾಲೋನಿಯಲ್ಲಿ ಕಳೆದ ೨೫ ವರ್ಷಗಳಿಂದ ವಾಸವಿರುವ ಅಲೆಮಾರಿ ಕೂಲಿಕಾರ್ಮಿಕ ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳೇ ಮರೀಚಿಕೆಯಾಗಿವೆ, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಮಸ್ಯೆ ಹಾಗೂ ಕಾಡುಪ್ರಾಣಿಗಳಿಂದ ಭಯದ ವಾತಾವರಣ ಸೃಷ್ಟಿಯಾಗಿದೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಜನನಾಯಕರೇ, ಅಧಿಕಾರಿಗಳೇ ನಮ್ಮ ಓಟು ಮಾತ್ರ ನಿಮಗೆ ಸಾಕಾ, ನಮಗೆ ಸೌಲಭ್ಯ ಬೇಡವೇ? ನಮ್ಮ ಕುಟುಂಬಗಳಿಗೆ ಮೂಲಭೂತ ಸೌಲಭ್ಯ ನೀಡದಿದ್ದರೆ ನಮ್ಮ ಓಟು ನಿಮಗೆ ನೀಡೆವು ಎಂದು ಪ್ರತಿ ಗುಡಿಸಲುಗಳ ಬಾಗಿಲು ಮುಂದೆ ನಾಮಫಲಕ ಅಳವಡಿಕೆ. ಇದು ಐ.ಕೆ.ಕಾಲೋನಿಯ ೨೦ಕ್ಕೂ ಅಧಿಕ ಅಲೆಮಾರಿ ಕೂಲಿಕಾರ್ಮಿಕ ಕುಟುಂಬಗಳ ನೋವಿನ ಕಥೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಐ.ಕೆ.ಕಾಲೋನಿಯಲ್ಲಿ ಕಳೆದ ೨೫ ವರ್ಷಗಳಿಂದ ವಾಸವಿರುವ ಅಲೆಮಾರಿ ಕೂಲಿಕಾರ್ಮಿಕ ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳೇ ಮರೀಚಿಕೆಯಾಗಿವೆ, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಮಸ್ಯೆ ಹಾಗೂ ಕಾಡುಪ್ರಾಣಿಗಳಿಂದ ಭಯದ ವಾತಾವರಣ ಸೃಷ್ಟಿಯಾಗಿದೆ.

ಐ.ಕೆ.ಕಾಲೋನಿಯ ಪಿಡಬ್ಲ್ಯೂಡಿ ಕಚೇರಿ ಆವರಣದಲ್ಲೇ ಕಳೆದ ೨೫ ವರ್ಷಗಳಿಂದ ಅಲೆಮಾರಿ ಕಾರ್ಮಿಕರು ವಾಸವಿದ್ದರು. ಆದರೆ ಕಳೆದ ೪ ತಿಂಗಳ ಹಿಂದೆ ಪಿಡಬ್ಲ್ಯೂಡಿ ಅಧಿಕಾರಿ ವರ್ಗ ಮತ್ತು ಸ್ಥಳೀಯ ಗ್ರಾಪಂ ಸದಸ್ಯರ ತಂಡ ಈ ೨೦ ಅಲೆಮಾರಿ ಕುಟುಂಬಗಳನ್ನು ಮನವೊಲಿಸಿ ಬೆಟ್ಟದಲ್ಲಿ ನಿವೇಶನ ಮಂಜೂರಾಗಿದೆ ಎಂದು ನಂಬಿಸಿದ್ದರು. ಅಲ್ಲೇ ಎಲ್ಲ ಸೌಲಭ್ಯಗಳೂ ಬರುತ್ತವೆ ಎಂದು ಹೇಳಿ ರಾತ್ರೋ ರಾತ್ರಿ ಜಾಗ ಖಾಲಿ ಮಾಡಿಸಿದರು. ಈಗ ಇಲ್ಲಿಂದ ಮತ್ತೆ ಜಾಗ ಖಾಲಿ ಮಾಡಿ ಎನ್ನುತ್ತಿದ್ದಾರೆ ಎಂಬುದು ಅಲೆಮಾರಿ ಕಾರ್ಮಿಕರ ನೋವಿನ ಮಾತಾಗಿದೆ.

ಕರ್ನಾಟಕ ಅಲೆಮಾರಿ ಕಾರ್ಮಿಕ ಆಯೋಗ ಮತ್ತು ತುಮಕೂರು ಜಿಲ್ಲಾ ನ್ಯಾಯಾಧೀಶರು ಬಂದು ೩ ವರ್ಷ ಕಳೆದರೂ ಕಾರ್ಮಿಕರ ಕತ್ತಲೆಯ ಬದುಕಿಗೆ ಇನ್ನೂ ಬೆಳಕು ಬಂದಿಲ್ಲ. ಗುಡಿಸಲು ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳೂ ಸೇರಿ ೧೫ ಕ್ಕೂ ಅಧಿಕ ಮಕ್ಕಳು ಶಿಕ್ಷಣದಂತಹ ಸೌಲಭ್ಯಗಳಿಂದ ವಂಚಿತರಾಗುವ ಮುನ್ನಾ ಕೊರಟಗೆರೆ ತಹಸೀಲ್ದಾರ್, ತಾಪಂ ಇಒ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಕ್ಷಣ ಭೇಟಿ ನೀಡಿ ಕಾರ್ಮಿಕರಿಗೆ ಪರಿಹಾರ ನೀಡಬೇಕಾಗಿದೆ.

ಗ್ರಾಪಂ ಮತ್ತು ತಾಪಂ ನಿರ್ಲಕ್ಷ್ಯ :

ಅಲೆಮಾರಿ ಕಾರ್ಮಿಕರ ಬಳಿ ಆಧಾರ್‌ ಕಾರ್ಡು, ರೇಷನ್‌ ಕಾರ್ಡು, ಗುರುತಿನ ಚೀಟಿ, ಪಾನ್‌ ಕಾರ್ಡ್ ಮತ್ತು ಬ್ಯಾಂಕ್‌ ಖಾತೆ ಎಲ್ಲವೂ ಇವೆ. ಆದರೆ ಇವರಿಗೆ ನಿವೇಶನ ನೀಡುವಲ್ಲಿ ಕಂದಾಯ ಇಲಾಖೆ ವಿಫಲವಾದರೆ, ಮೂಲಸೌಲಭ್ಯ ಕಲ್ಪಿಸುವಲ್ಲಿ ಸ್ಥಳೀಯ ಗ್ರಾಪಂ ನಿರ್ಲಕ್ಷ ವಹಿಸಿದೆ. ಗ್ರಾಪಂ ಪಿಡಿಒ ಮತ್ತು ತಾಪಂ ಇಒಗೆ ಇವರ ಸಮಸ್ಯೆಯ ಅರಿವಿದ್ದರೂ ಮುಗ್ದ ಜನರಿಗೆ ಉಡಾಫೆ ಉತ್ತರ ನೀಡೋದು ಸರ್ವೇ ಸಾಮಾನ್ಯವಾಗಿದೆ.

‘ವಿದ್ಯುತ್ ಇಲ್ಲದೇ ನಮ್ಮ ವ್ಯಾಸಂಗಕ್ಕೆ ಸಮಸ್ಯೆಯಾಗಿದೆ. ಶೌಚಾಲಯ ಮತ್ತು ಸ್ನಾನ ಇರಲಿ, ಕುಡಿಯಲು ಸಹ ನೀರಿನ ಸಮಸ್ಯೆಯಿದೆ. ಕಾಲುವೆಯ ನೀರಿನಲ್ಲಿ ೧೫ ದಿನಕ್ಕೊಮ್ಮೆ ಸ್ನಾನ ಮಾಡಬೇಕಿದೆ. ಚುನಾವಣೆ ಬಂದಾಗ ಅಧಿಕಾರಿಗಳು ಬರುತ್ತಾರೆ, ಸಾಂತ್ವಾನ ಹೇಳಿ ಹೋಗುತ್ತಾರೆ, ಪರಿಹಾರ ಮಾತ್ರ ಇದುವರೆಗೂ ಕಲ್ಪಿಸಿಲ್ಲ. ಅಲ್ಲದೇ ರಾತ್ರಿ ವೇಳೆ ಕಾಡುಪ್ರಾಣಿಗಳ ಭಯದ ನಡುವೆಯೇ ನಮ್ಮ ಜೀವನ ಸಾಗಿಸಬೇಕಿದೆ. ನಾವೇನು ತಪ್ಪು ಮಾಡಿದ್ದೇವೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.‘

ಹರ್ಷಿತಾ. ವಿದ್ಯಾರ್ಥಿನಿ. ಐ.ಕೆ.ಕಾಲೊನಿ

‘ನಾವು ಮತದಾನ ಮಾಡಲು ಮಾತ್ರ ಸೀಮಿತ. ನಮ್ಮ ಕುಟುಂಬಗಳಿಗೆ ಕಳೆದ ೨೫ ವರ್ಷಗಳಿಂದ ಸೌಲಭ್ಯವೇ ಮರೀಚಿಕೆಯಾಗಿದೆ. ನಮಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವವರೆಗೂ ಮತದಾನ ಮಾಡುವುದಿಲ್ಲ. ೨೦ ಗುಡಿಸಲುಗಳ ಮುಂದೆಯೇ ಚುನಾವಣೆ ಬಹಿಷ್ಕಾರದ ನಾಮಫಲಕ ಹಾಕಲಾಗಿದೆ. ನಮ್ಮ ಗುಡಿಸಲುಗಳಿಗೆ ಬೆಳಕು, ನೀರು, ನಿವೇಶನ ಮತ್ತು ಶೌಚಾಲಯ ನೀಡದ ಹೊರತು ನಮ್ಮ ಬಳಿಗೆ ದಯವಿಟ್ಟು ಯಾರೂ ಬರಬೇಡಿ.’

ಮಾರಪ್ಪ. ಸ್ಥಳೀಯ. ಐ.ಕೆ.ಕಾಲೋನಿ

Share this article