ಕನ್ನಡಪ್ರಭ ವಾರ್ತೆ ತಿಪಟೂರು
ತಂತ್ರಜ್ಞಾನದ ಅತಿ ಬಳಕೆಯಿಂದಾಗಿ ಮಾನವೀಯ ಮೌಲ್ಯಗಳು ಕಳೆದು ಮನುಷ್ಯ ಸಂಬಂಧಗಳು ಹಾಳಾಗುತ್ತಿರುವ ಸಂದರ್ಭದಲ್ಲಿ ಮಾನಸಿಕ ನೆಮ್ಮದಿ, ಸಾಮಾಜಿಕ ಸ್ವಾಸ್ಥ್ಯಕ್ಕೆ ವಚನಗಳು ಹಿಂದೆಂದಿಗಿಂತಲೂ ಪ್ರಸ್ತುತ ಹೆಚ್ಚು ಅಗತ್ಯವಾಗಿವೆ ಎಂದು ನಿವೃತ್ತ ಪ್ರಾಂಶುಪಾಲ ಡಿ. ಎಸ್. ಮರುಳಪ್ಪ ತಿಳಿಸಿದರು.ತಾಲೂಕಿನ ಹುಣಿಸೇಘಟ್ಟದ ಕೇಂದ್ರ ವಿದ್ಯಾಸಂಸ್ಥೆಯಲ್ಲಿ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಶರಣತತ್ವ ಪ್ರಸಾರ, ದತ್ತಿ ಉಪನ್ಯಾಸ, ವಚನ ಕಂಠಪಾಠ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನುಡಿದಂತೆ ನಡೆದ ನಡೆದಂತೆ ನುಡಿದ ಶರಣರು ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಪೂರ್ಣ ಎಂಬ ದೃಢ ಸಂಕಲ್ಪದಿಂದ ಜನಸಾಮಾನ್ಯರಲ್ಲಿ ಸಾಮಾನ್ಯರಾಗಿ ದುಡಿದು ಬದುಕಿದ ಶರಣರು ಸಾಮಾಜಿಕ ಕ್ರಾಂತಿಗೆ ಹನ್ನೆರಡನೇ ಶತಮಾನದಲ್ಲೇ ಮುನ್ನುಡಿ ಬರೆದಿದ್ದರು. ಯಾವ ಜಾತಿಯೂ ಶ್ರೇಷ್ಟ್ರವೂ ಅಲ್ಲ, ಕನಿಷ್ಠವೂ ಅಲ್ಲ. ಕಾಯಕವೇ ಕೈಲಾಸ, ಮೂಢನಂಬಿಕೆಗಳನ್ನು ವಿರೋಧಿಸಿ, ದೇಹವನ್ನೇ ದೇಗುಲವಾಗಿಸಿ ತಮ್ಮೊಳಗೆ ದೈವ ಸಾಕ್ಷಾತ್ಕಾರ ಕಂಡು ಕೊಂಡರು ಎಂದರು. ಶಸಾಪ ಜಿಲ್ಲಾಧ್ಯಕ್ಷ ಎಂ.ಜಿ. ಸಿದ್ದರಾಮಯ್ಯ ಮಾತನಾಡಿ ಮಕ್ಕಳು ಉತ್ತಮ ಸುಸಂಸ್ಕೃತರಾಗಲು ಕನಿಷ್ಠ ವಚನಗಳನ್ನಾದರೂ ಕಲಿಯಬೇಕು ಎಂದರು. ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂ. ಶಿವಸ್ವಾಮಿ ವಚನ ಸಾಹಿತ್ಯದ ಕುರಿತು ಮಾತನಾಡಿ ಈಗೀಗ ಶರಣ ಸಾಹಿತ್ಯ ಶರಣರು ಎಂದರೆ ಜಾತಿ ಸೂಚಕವಾಗುತ್ತಿರುವುದರ ಬಗ್ಗೆ ವಿಷಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಶರಣ ಸಾಹಿತ್ಯ ಪರಿ?ತ್ತಿನ ಅಧ್ಯಕ್ಷ ಪಿ.ಆರ್. ಗುರುಸ್ವಾಮಿ ಮಾತನಾಡಿ ಮುಂದಿನ ದಿನಗಳಲ್ಲಿ ವಚನಗಳಿಗೆ ಹೆಚ್ಚಿನ ಆದ್ಯತೆ ನೀಡಿ ಗ್ರಾಮಾಂತರ ಪ್ರದೇಶದ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷ ಣ, ಕಂಠಪಾಠ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದರು. ಕದಳಿ ವೇದಿಕೆ ಅಧ್ಯಕ್ಷೆ ಸ್ವರ್ಣಗೌರಮ್ಮ ವಚನ ಗಾಯನ ಮಾಡಿದರು. ಮುಖ್ಯ ಶಿಕ್ಷಕ ಜನಾರ್ದನ, ಶಸಾಪ ಪದಾಧಿಕಾರಿಗಳಾದ ನಂ. ಶಿವಗಂಗಪ್ಪ, ನಂದೀಶಪ್ಪ, ಡಿ.ಎಸ್ ಲೋಕೇಶ್, ಕೆ. ಸುಧಾಕರ್, ಮಡೆನೂರು ಸೋಮಶೇಖರ್ ಮತ್ತಿತರರಿದ್ದರು. ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕೊಬ್ಬರಿ ವರ್ತಕ ಟಿ.ಎನ್. ಪರಮಶಿವಯ್ಯ, ವಿದ್ಯಾಸಂಸ್ಥೆ ಅಧ್ಯಕ್ಷ ಚಕ್ರಪಾಣಿ, ಅಖಿಲ ಆರತ ವೀರಶೈವ ಸಮಾಜದ ಅಧ್ಯಕ್ಷ ಎಂ.ಆರ್. ಸಂಗಮೇಶ್, ತನುಜಾ ಲೇಖನ ಸಾಮಗ್ರಿಗಳನ್ನು ವಿತರಿಸಿದರು.