ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಿ

KannadaprabhaNewsNetwork |  
Published : Sep 20, 2026, 03:45 AM IST
 ಕಂಪ್ಲಿಯ ಮುದ್ದಾಪುರ ಅಗಸಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಜನ ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಎಚ್.ಈರಣ್ಣ ಲೆಕ್ಕಪತ್ರ ಮಂಡಿಸಿದರು. ಸಂಘದ ಅಧ್ಯಕ್ಷ ಬಿ.ಬಸವರಾಜ, ಉಪಾಧ್ಯಕ್ಷ ಗಂಗಣ್ಣ ತಳವಾರ, ನಿರ್ದೇಶಕರಾದ ಕಟ್ಟೆ ಸಣ್ಣ ದುರುಗಪ್ಪ, ಅಳ್ಳಿ ನಾಗರಾಜ ಇತರರು ಇದ್ದರು. | Kannada Prabha

ಸಾರಾಂಶ

ಕೃಷಿ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಮಳೆ ಕೈಕೊಟ್ಟಿರುವುದು ರೈತರ ಆರ್ಥಿಕ ಸ್ಥಿತಿಯ ಮೇಲೆ ಮತ್ತಷ್ಟು ಪರಿಣಾಮ ಬೀರಿದೆ.

ಕಂಪ್ಲಿ: ಮಳೆ ಕೊರತೆಯಿಂದ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ನಿರಂತರ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು. ರೈತರ ಮೇಲಿರುವ ಕೃಷಿ ಸಾಲ ಮನ್ನಾ ಮಾಡುವ ಮೂಲಕ ಆರ್ಥಿಕ ಹೊರೆ ತಗ್ಗಿಸಬೇಕು ಎಂದು ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ. ಬಸವರಾಜ ಒತ್ತಾಯಿಸಿದರು.

ಇಲ್ಲಿನ ಮುದ್ದಾಪುರ ಅಗಸಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಶುಕ್ರವಾರ ನಡೆದ ವಾರ್ಷಿಕ ಮಹಾಜನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ಕಳೆದ ಹಲವು ವರ್ಷಗಳಿಂದ ಒಂದಲ್ಲ ಒಂದು ಕಾರಣಕ್ಕೆ ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಈ ಬಾರಿ ಮಳೆಯ ಕೊರತೆಯಿಂದ ಬೆಳೆಗಳು ಒಣಗುವ ಪರಿಸ್ಥಿತಿ ಎದುರಾಗಿದ್ದು, ಕೃಷಿಗಾಗಿ ಮಾಡಿರುವ ಸಾಲ ತೀರಿಸುವುದು ರೈತರಿಗೆ ಕಷ್ಟಕರವಾಗಿದೆ. ಹೀಗಾಗಿ ಸರ್ಕಾರ ರೈತರ ಸಂಕಷ್ಟ ಗಂಭೀರವಾಗಿ ಪರಿಗಣಿಸಿ ಸಾಲ ಮನ್ನಾ ಸೇರಿದಂತೆ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೃಷಿ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಮಳೆ ಕೈಕೊಟ್ಟಿರುವುದು ರೈತರ ಆರ್ಥಿಕ ಸ್ಥಿತಿಯ ಮೇಲೆ ಮತ್ತಷ್ಟು ಪರಿಣಾಮ ಬೀರಿದೆ. ಬೆಳೆ ಉಳಿಸಿಕೊಳ್ಳಲು ರೈತರು ನೀರಾವರಿ ಹಾಗೂ ಇತರ ವೆಚ್ಚ ಭರಿಸಬೇಕಾಗಿದ್ದು, ಬೆಳೆ ಕೈಕೊಟ್ಟರೆ ಸಾಲದ ಹೊರೆ ಹೆಚ್ಚಾಗುತ್ತದೆ. ಈ ಹಿನ್ನೆಲೆ ರೈತರಿಗೆ ತುರ್ತು ಆರ್ಥಿಕ ನೆರವು ಹಾಗೂ ಸೂಕ್ತ ಪರಿಹಾರ ಕಲ್ಪಿಸುವ ಅಗತ್ಯವಿದೆ ಎಂದು ಹೇಳಿದರು.

ಸಂಘವು ಸದಸ್ಯರ ಹಿತದೃಷ್ಟಿಯಿಂದ ವಿವಿಧ ಸಾಲ ಸೌಲಭ್ಯ ಒದಗಿಸುತ್ತಿದ್ದು, ಸಂಘದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸದಸ್ಯರಿಗೆ ಲಾಭಾಂಶ ವಿತರಿಸಲು ನಿರ್ಧರಿಸಲಾಗಿದೆ. ಸಂಘದ ಬೆಳವಣಿಗೆಯಲ್ಲಿ ಸದಸ್ಯರ ಸಹಕಾರ ಪ್ರಮುಖವಾಗಿದ್ದು, ಮುಂದಿನ ದಿನಗಳಲ್ಲಿಯೂ ಸದಸ್ಯರಿಗೆ ಅಗತ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಘ ಕಾರ್ಯನಿರ್ವಹಿಸಲಿದೆ ಎಂದರು.

₹12.40 ಲಕ್ಷ ನಿವ್ವಳ ಲಾಭ: ಸಂಘದ ಮುಖ್ಯ ಕಾರ್ಯನಿರ್ವಾಹಕ ಎಚ್.ಈರಣ್ಣ ವಾರ್ಷಿಕ ಲೆಕ್ಕಪತ್ರ ಮಂಡಿಸಿ ಮಾತನಾಡಿ, ಸಂಘವು ಒಟ್ಟು 4,068 ಸದಸ್ಯರನ್ನು ಹೊಂದಿದ್ದು, ₹1.35 ಕೋಟಿ ಷೇರು ಬಂಡವಾಳ ಹೊಂದಿದೆ. ಸದಸ್ಯರು ಹಾಗೂ ರೈತರಿಗೆ ವಿವಿಧ ಉದ್ದೇಶಗಳಿಗಾಗಿ ಸಾಲ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಸಂಘದಿಂದ ರೈತರಿಗೆ ₹7.19 ಕೋಟಿ ಕೆಸಿಸಿ ಸಾಲ, ₹1.69 ಕೋಟಿ ಬಿಡಿಪಿ ಸಾಲ ಹಾಗೂ ₹36 ಲಕ್ಷ ಪಂಪ್‌ಸೆಟ್ ಸಾಲ ವಿತರಿಸಲಾಗಿದೆ. ಸ್ವಸಹಾಯ ಸಂಘಕ್ಕೂ ₹5 ಲಕ್ಷ ಸಾಲ ನೀಡಲಾಗಿದೆ. ಸಾಲ ವಸೂಲಾತಿಯಲ್ಲಿ ಶೇ.95ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದರೊಂದಿಗೆ ಸಂಘವು ₹1.47 ಕೋಟಿ ಪತ್ತೇತರ ವ್ಯವಹಾರ ನಡೆಸಿದ್ದು, 2025-26ನೇ ಸಾಲಿನಲ್ಲಿ ₹12.40 ಲಕ್ಷ ನಿವ್ವಳ ಲಾಭ ಗಳಿಸಿದೆ. ಸಂಘದ ಆರ್ಥಿಕ ಚಟುವಟಿಕೆ ಮತ್ತಷ್ಟು ಬಲಪಡಿಸುವ ಜತೆಗೆ ಸದಸ್ಯರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಗಂಗಣ್ಣ ತಳವಾರ, ನಿರ್ದೇಶಕ ಕಟ್ಟೆ ಸಣ್ಣ ದುರುಗಪ್ಪ, ಅಳ್ಳಿ ನಾಗರಾಜ, ಈರಪ್ಪ ಜೋಳಮಾರ, ಬಳೆ ಮಲ್ಲಿಕಾರ್ಜುನ, ಟಿ.ನಿರಂಜನಯ್ಯ, ಎಸ್.ಸಣ್ಣಪ್ಪ, ರಾಜೇಶ ಶೆರೆಗಾರ, ಕೆ.ಕೃಷ್ಣ, ಬಿ.ಎಂ.ವಿಶಾಲಾಕ್ಷಿ, ಕೆ.ನಾಗಮ್ಮ, ವಿ.ರಾಮಚಂದ್ರ ಸೇರಿದಂತೆ ಸಂಘದ ಸಿಬ್ಬಂದಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂಡುಬಿದಿರೆ ಆಳ್ವಾಸ್ ಮೆಡಿಕಲ್ ಕಾಲೇಜು ನಾಳೆ ಉದ್ಘಾಟನೆ
ಡೋಂಗಿ ಪರಿಸರವಾದಿ ಹೇಳಿಕೆಗೆ ಮುತ್ತಣ ಖಂಡನೆ