ಕನ್ನಡಪ್ರಭ ವಾರ್ತೆ ಬೆಂಗಳೂರು
ಸ್ವಯಂ ಘೋಷಣೆ ಆಸ್ತಿ ತೆರಿಗೆ ಪದ್ಧತಿಯಲ್ಲಿ ವಲಯ ವರ್ಗೀಕರಣವನ್ನು ತಪ್ಪಾಗಿ ಘೋಷಿಸಿಕೊಂಡ ಆಸ್ತಿ ಮಾಲೀಕರಿಗೆ ವಿಧಿಸುತ್ತಿದ್ದ ದುಪ್ಪಟ್ಟು ದಂಡ ಮನ್ನಾ ಮಾಡಿ, ವ್ಯತ್ಯಾಸದ ಮೊತ್ತ ಮತ್ತು ಆ ಮೊತ್ತಕ್ಕೆ ಶೇ.6.75ರಷ್ಟು ಬ್ಯಾಂಕ್ ಚಾಲ್ತಿ ಬಡ್ಡಿ ದರ ಸಂಗ್ರಹಿಸಲು ಬಿಬಿಎಂಪಿ ಆಯುಕ್ತರು ಆದೇಶಿಸಿದ್ದಾರೆ.
ಸ್ವಯಂ ಘೋಷಣೆ ಅಸ್ತಿ ತೆರಿಗೆ ಪದ್ಧತಿಯಲ್ಲಿ ವಲಯಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಆಸ್ತಿ ಮಾಲೀಕರು ತಪ್ಪು ಮಾಡಿದ್ದಾರೆ. ಈ ತಪ್ಪನ್ನು ಬಿಬಿಎಂಪಿ ಸರಿಯಾದ ಸಮಯಕ್ಕೆ ಮಾಲೀಕರಿಗೆ ತಿಳಿಸಿಲ್ಲ.
ಹೀಗಾಗಿ, ತೆರಿಗೆದಾರರಿಂದ ದುಪ್ಪಟ್ಟು ಆಸ್ತಿ ತೆರಿಗೆ ಹಣವನ್ನು ಸಂಗ್ರಹಿಸುವಂತಿಲ್ಲ. ವ್ಯತ್ಯಾಸದ ಮೊತ್ತ ಮತ್ತು ಅದಕ್ಕೆ ಬ್ಯಾಂಕ್ ಬಡ್ಡಿ ದರವನ್ನು ವಿಧಿಸಬಹುದು ಎಂದು ಕಳೆದ ಸೆಪ್ಟೆಂಬರ್‌ನಲ್ಲಿ ಸರ್ಕಾರ ಆದೇಶಿಸಿತ್ತು. ಈ ಆದೇಶವನ್ನು ಜಾರಿಗೆ ತರಲು ಬಿಬಿಎಂಪಿ ಇದೀಗ ಸುತ್ತೋಲೆ ಹೊರಡಿಸಿದೆ.
2016-17ನೇ ಸಾಲಿನಿಂದ ತನ್ನ ವರ್ಗಿಕರಣದಲ್ಲಿ ಆಸ್ತಿ ತೆರಿಗೆ ಪಾವತಿಸಿದ್ದರೆ, ದುಪ್ಪಟ್ಟು ದಂಡದ ಬದಲು ಬ್ಯಾಂಕ್ ಬಡ್ಡಿ ದರದಲ್ಲಿ ಪೂರ್ಣ ಅವಧಿಗೆ ವಿಧಿಸಬೇಕು ಎಂದು ಬಿಬಿಎಂಪಿ ಸುತ್ತೋಲೆಯಲ್ಲಿ ತಿಳಿಸಿದೆ.
ಸ್ವಯಂ ಘೋಷಣೆ ಆಸ್ತಿ ತೆರಿಗೆಯಲ್ಲಿ ವಲಯ ವರ್ಗೀಕರಣವನ್ನು 78,254 ಆಸ್ತಿಗಳಲ್ಲಿ ತಪ್ಪಾಗಿ ನಮೂದಿಸಲಾಗಿದೆ. ಈ ಪೈಕಿ 11,725 ನೋಟಿಸ್ ಜಾರಿ ಮಾಡಲಾಗಿದೆ. ಈ ಪೈಕಿ 7,891 ನೋಟಿಸ್‌ಗಳಿಗೆ ತೆರಿಗೆದಾರರು ಆಸ್ತಿ ತೆರಿಗೆಯನ್ನೂ ಪಾವತಿಸಿದ್ದಾರೆ.
ಇಂತಹವರಿಂದ ಹೆಚ್ಚುವರಿ ಪಾವತಿಸಿಕೊಂಡಿರುವ ಹಣವನ್ನು ಮುಂದಿನ ಆಸ್ತಿ ತೆರಿಗೆ ಸಾಲಿನಲ್ಲಿ ಹೊಂದಾಣಿಕೆ ಮಾಡಬೇಕು ಎಂದು ಎಲ್ಲ ವಲಯ ಆಯುಕ್ತರು ಹಾಗೂ ಕಂದಾಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ವಲಯ ವರ್ಗೀಕರಣ ವಿವರಗಳು ಆಸ್ತಿ ತೆರಿಗೆ ತಂತ್ರಾಂಶದಲ್ಲಿ ತಪ್ಪಾಗಿ ನಮೂದಿತವಾಗಿದ್ದರೆ, ಅಂತಹ ಪ್ರಕರಣಗಳ ನೋಟಿಸ್‌ಗಳನ್ನು ರದ್ದುಪಡಿಸಬೇಕು.
ವಲಯ ವರ್ಗೀಕರಣಕ್ಕಿಂತ ಹೆಚ್ಚಿನ ವರ್ಗವನ್ನು ಆಯ್ದುಕೊಂಡಿದ್ದರೆ ಅಂತಹ ಪ್ರಕರಣಗಳಲ್ಲಿ ಮರುಪಾವತಿಗೆ ಸರ್ಕಾರದ ಆದೇಶದಲ್ಲಿ ಸೂಚನೆಯಿಲ್ಲ. ಆ ಪ್ರಕರಣಗಳಲ್ಲಿ ಹೆಚ್ಚುವರಿ ಹಣವನ್ನು ಹೊಂದಾಣಿಕೆ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.