ಕುಷ್ಟಗಿ: 12ನೇ ಶತಮಾನ ಸಮಾಜ ಪರಿವರ್ತನೆಯ ಸುವರ್ಣಯುಗವಾಗಿದ್ದು, ಬಸವಾದಿ ಶರಣರು ಸಮಾಜದಲ್ಲಿ ಸಮಾನತೆ,ಸತ್ಯ ಮತ್ತು ಮಾನವೀಯ ಮೌಲ್ಯ ಪ್ರತಿಪಾದಿಸಿದ್ದಾರೆ ಎಂದು ಇಲಕಲ್ ಶ್ರೀವಿಜಯ ಮಹಾಂತೇಶ್ವರ ಮಠದ ಪೀಠಾಧಿಪತಿ ಡಾ. ಗುರುಮಹಾಂತ ಸ್ವಾಮಿಗಳು ಹೇಳಿದರು.
ಬಸವಾದಿ ಶರಣರು ವಚನಗಳ ರಚನೆಯ ಮೂಲಕ ಜಾತಿಯತೆ,ಮೂಢ ನಂಬಿಕೆ ತೊರೆದು ಯುಕ್ತಿ ಮತ್ತು ಸತ್ಯದ ಮಾರ್ಗದಲ್ಲಿ ಬದುಕುವಂತೆ ಜನರಿಗೆ ಬೋಧಿಸಿದರು. ಶರಣರ ವಚನಗಳು ಕೇವಲ ಧಾರ್ಮಿಕ ಉಪದೇಶಗಳಲ್ಲ, ಸಮಾಜ ಸುಧಾರಣೆಯ ಸಂದೇಶಗಳಾಗಿವೆ ಎಂದರು.
ಜನರು ಮೂಢನಂಬಿಕೆ ನಂಬದೆ ಉತ್ತಮ ಕಾರ್ಯ ಮಾಡಬೇಕು. ಧರ್ಮದ ಹಾದಿಯಲ್ಲಿ ನಡೆಯಬೇಕು ಎಂಬ ಸಂದೇಶ ನೀಡಿದ ಅವರು ಜಾತೀಯತೆ, ಅಸಮಾನತೆ ಹಾಗೂ ಭೇದಭಾವ ತೊಡೆದು ಹಾಕಿ ಸಮಾನತೆ ಮತ್ತು ಸಹೋದರತ್ವದ ಸಮಾಜ ನಿರ್ಮಾಣವೇ ಶರಣರ ಆಶಯವಾಗಿತ್ತು. ಎಲ್ಲರೂ ಒಂದೇ ಮಾನವಕುಲಕ್ಕೆ ಸೇರಿದವರು ಎಂಬ ಭಾವನೆ ಬೆಳೆಸಬೇಕು ಎಂದು ಅಭಿಪ್ರಾಯಪಟ್ಟರು.ಬಸವಾದಿ ಶರಣರು ಸಾರಿದ ಕಾಯಕ ತತ್ವ,ದಾಸೋಹ ಭಾವನೆ ಹಾಗೂ ಜಾತಿ ಭೇದ ವಿರೋಧಿ ಸಂದೇಶ ಇಂದಿನ ಸಮಾಜಕ್ಕೂ ಮಾರ್ಗದರ್ಶಕವಾಗಿವೆ.ಕಾಯಕವೇ ಕೈಲಾಸ ಎಂಬ ಸಂದೇಶದ ಮೂಲಕ ಪ್ರಾಮಾಣಿಕ ಶ್ರಮದ ಮಹತ್ವ ಸಾರಿದರು. ಸಮಾಜದಲ್ಲಿ ಮೂಢನಂಬಿಕೆಗಳಿಗೆ ಅವಕಾಶ ನೀಡದೇ ಜ್ಞಾನ, ಸತ್ಯ ಹಾಗೂ ಮಾನವೀಯ ಮೌಲ್ಯ ಬೆಳೆಸಬೇಕು ಎಂದು ಹೇಳಿದರು.
ಪುರಾಣ ಪ್ರವಚನ ಆಲಿಸುವುದರಿಂದ ಒಳ್ಳೆಯ ವಿಚಾರ ಮೂಡುತ್ತವೆ. ಭಗವಂತನ, ಶರಣರ, ಮಹಾತ್ಮರ ಜೀವನ ಚರಿತ್ರೆ ಕೇಳುವುದರಿಂದ ವ್ಯಕ್ತಿತ್ವ ಉನ್ನತಿಗೊಳ್ಳುತ್ತದೆ. ಮನದ ಮೈಲಿಗೆ ತೊಳೆಯಲು ಸುಜ್ಞಾನ ಬೇಕು ಮಹಾತ್ಮರ ಶರಣರ ನುಡಿಗಳಿಂದ ಸುಜ್ಞಾನ ದೊರಕುತ್ತದೆ ಸುಜ್ಞಾನದಿಂದ ಬದುಕು ಶ್ರೇಷ್ಟವಾಗುತ್ತದೆ ಎಂದು ತಿಳಿಸಿದರು.
ಪ್ರವಚನ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಅನ್ನಸಂತರ್ಪಣೆಗೈದವರಿಗೆ ಶ್ರೀಗಳಿಂದ ಸನ್ಮಾನಿಸಿ ಗೌರವಿಸಲಾಯಿತು.