ರಾಮನಗರ: ಆರೋಗ್ಯವೇ ಭಾಗ್ಯ ಎಂಬ ಮಾತು ಎಂದಿಗೂ ಅನ್ವಯಿಸುವಂತದ್ದು. ಅಧಿಕಾರ, ಸಂಪತ್ತು, ಹಣ ಕಳೆದುಕೊಂಡರೆ ಮತ್ತೆ ಗಳಿಸಬಹುದು, ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ ಎಂದು ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಹೇಳಿದರು.
ವಿಶ್ವ ಕಿಡ್ನಿ ದಿನಾಚರಣೆ ಅಂಗವಾಗಿ ಬೆಂಗಳೂರಿನ ಎನ್ ಯು ಆಸ್ಪತ್ರೆ ರೋಟರಿ ಸಿಲ್ಕ್ ಸಿಟಿ ರಾಮನಗರ, ಕ್ರೆಸೆಂಟ್ ಚೈಲ್ಡ್ ಕೇರ್ ಹಾಗೂ ಪಾಲಿಕ್ಲಿನಿಕ್ ಸಹಯೋಗದಲ್ಲಿ ಏರ್ಪಡಿಸಿದ್ದ ಸಾರ್ವಜನಿಕರಲ್ಲಿ ಕಿಡ್ನಿ ಆರೋಗ್ಯ ಕುರಿತು ಜಾಗೃತಿ ಮೂಡಿಸುವ ವಾಕ್‌ಥಾನ್ ಗೆ ಹಸಿರು ನಿಶಾನೆ ತೋರಿದ ಬಳಿಕ ಅವರು ಮಾತನಾಡಿದರು.ಗಂಭೀರ ಸಮಸ್ಯೆಗಳಿಗೆ ತುತ್ತಾಗಿ ಆಪತ್ತು ತಂದುಕೊಳ್ಳುವುದಕ್ಕಿಂತ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರಂಭದಲ್ಲೇ ತೊಂದರೆಗೆ ಚಿಕಿತ್ಸೆ ಪಡೆಯಬಹುದು ಎಂದು ಹೇಳಿದರು.
ಎನ್‌ಯು ಆಸ್ಪತ್ರೆ ಹಿರಿಯ ಯೂರಾಲಜಿಸ್ಟ್ ಡಾ.ಪಿ.ವಿನೋದ್ ಕುಮಾರ್ ಮಾತನಾಡಿ, ದೇಶದಲ್ಲಿ ಸುಮಾರು 20ರಿಂದ 25 ಕೋಟಿ ಜನ ಒಂದಲ್ಲಾ ಒಂದು ರೀತಿಯ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಿಡ್ನಿ ಆರೋಗ್ಯ ಅದೆಷ್ಟು ಮುಖ್ಯವೆಂದರೆ ಹೃದಯ ಹಾಗೂ ಮೆದುಳಿಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತೇವೆಯೋ ಅಷ್ಟೇ ಮುಖ್ಯ. ಆದ ಕಾರಣ ಕಿಡ್ನಿ ಸಮಸ್ಯೆಗಳನ್ನ ನಿರ್ಲಕ್ಷಿಸುವುದು ಅಪಾಯಕಾರಿ. ನಿಯಮಿತವಾಗಿ ಪರೀಕ್ಷಿಸಿಕೊಳ್ಳುವ ಮೂಲಕ ಅಪಾಯ ಎದುರಾಗುವುದನ್ನ ತಪ್ಪಿಸಬಹುದು ಎಂದು ಕಿವಿಮಾತು ಹೇಳಿದರು.ಡಾ ನಿತಿನ್ ನಾಯಕ್ ಮಾತನಾಡಿ, ನೀರು ಸೇವನೆ ಕಿಡ್ನಿ ಆರೋಗ್ಯಕ್ಕೆ ಸಹಕಾರಿ. ಕಿಡ್ನಿಗೆ ಸಂಬಂಧಿಸಿದ ಇಂದಿನ ಅನೇಕ ಸಮಸ್ಯೆಗಳಿಗೆ ಮೂಲ ಕಾರಣವೇ ಜೀವನಶೈಲಿ. ಹೀಗಾಗಿ ಆರೋಗ್ಯಕರ ಡಯಟ್ ಪಾಲಿಸುವುದು ತುಂಬಾನೇ ಮುಖ್ಯ. ಹಾಗೇ ಸಾಧ್ಯವಾದಷ್ಟು ನೀರನ್ನು ಹೆಚ್ಚು ಸೇವಿಸಿ, ಜಂಕ್ ಫುಡ್ ಸಂಪೂರ್ಣ ಕಡಿಮೆ ಮಾಡಿ. ಬೊಜ್ಜು ಬರದಂತೆ ಎಚ್ಚರವಹಿಸಿ. ಈ ಮೂಲಕ ಕಿಡ್ನಿ ಆರೋಗ್ಯವಾಗಿರುವಂತೆ ನೋಡಿಕೊಳ್ಳಬಹುದು ಸಲಹೆ ನೀಡಿದರು.
ನಗರಸಭಾಧ್ಯಕ್ಷ ಶೇಷಾದ್ರಿ ಮಾತನಾಡಿ, ವ್ಯಾಯಾಮದಿಂದ ಎಂತಹ ಕಾಯಿಲೆಯನ್ನು ಬೇಕಾದರು ದೂರ ಇಡಬಹುದು. ಪ್ರತಿನಿತ್ಯ ತಪ್ಪದೇ ವ್ಯಾಯಾಮ ಮಾಡಿ. ನನ್ನ ದೇಹ ತೂಕ ಹೆಚ್ಚಿದ್ದರು ಕೂಡಾ, ನಾನೂ ಆರೋಗ್ಯವಾಗಿದ್ದೇನೆ ಹಾಗೂ ತೂಕ ಇಳಿಸಲು ನಿತ್ಯ ವ್ಯಾಯಾಮ ಮಾಡುತ್ತೇನೆ. ಇಚ್ಛಾಶಕ್ತಿಯಿದ್ದರೆ ಎಂತಹ ಸಾಧನೆ ಕೂಡಾ ಸಾಧ್ಯ. ಆರೋಗ್ಯದ ವಿಷಯದಲ್ಲಿಯೂ ಈ ಬದ್ಧತೆ ಬೇಕು. ರೋಟರಿ ಜೊತೆ ಸೇರಿಕೊಂಡು ಎನ್ ಯು ಆಸ್ಪತ್ರೆ ಕೈಗೊಂಡಿರುವ ಈ ವಾಕ್ ಥಾನ್ ಶ್ಲಾಘನೀಯ. ಇಂತಹ ಕಾರ್ಯಕ್ರಮಗಳ ಮೂಲಕ ಜನಜಾಗೃತಿ ಮೂಡಿಸಬೇಕಿದೆ ಎಂದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಿಂದ ಆರಂಭವಾಗಿ ನಗರದ ಕೆಂಗಲ್ ಹನುಮಂತಯ್ಯ ವೃತ್ತದವರೆಗೆ ನಡೆದ ವಾಕ್ ಥಾನ್ ನಲ್ಲಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರು ಹೆಜ್ಜೆ ಹಾಕಿದರು.
ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಶ್ರೀಧರ್, ಕರ್ನಾಟಕ ಐಎಂಎ ಉಪಾಧ್ಯಕ್ಷ ಡಾ ಮಳವೇಗೌಡ, ರಾಮನಗರ ಐಎಂಎ ಅಧ್ಯಕ್ಷ ಡಾ ಸಂಪಂಗಿ ರಾಮಯ್ಯ, ರಾಮನಗರ ಐಎಂಎ ಕಾರ್ಯದರ್ಶಿ ಡಾ ಮಧುಸೂದನ್, ಕ್ರೆಸೆಂಟ್ ಚೈಲ್ಡ್ ಕೇರ್ ಮತ್ತು ಪಾಲಿಕ್ಲಿನಿಕ್ ಡಾ.ಮಹಮ್ಮದ್ ಸೈಯ್ಯದ್ ಅಹಮದ್, ಬಿಗ್ ಮಾರ್ಟ್ ರಾಮನಗರದ ಆರ್.ಪಿ. ಪ್ರದೀಪ್ ಉಪಸ್ಥಿತರಿದ್ದರು.12ಕೆಆರ್ ಎಂಎನ್ 1.ಜೆಪಿಜಿ
ರಾಮನಗರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ವಿಶ್ವ ಕಿಡ್ನಿ ದಿನಾಚರಣೆ ಅಂಗವಾಗಿ ಸಾರ್ವಜನಿಕರಲ್ಲಿ ಕಿಡ್ನಿ ಆರೋಗ್ಯ ಕುರಿತು ಜಾಗೃತಿ ಮೂಡಿಸುವ ಬೃಹತ್ ವಾಕ್ ಥಾನ್ ಗೆ ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಹಾಗೂ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹಸಿರು ನಿಶಾನೆ ತೋರಿಸಿದರು.