ಕನ್ನಡಪ್ರಭ ವಾರ್ತೆ ಸಕಲೇಶಪುರ
ಇತಿಹಾಸ ಪ್ರಸಿದ್ಧ ಮಂಜ್ರಾಬಾದ್ ಕೋಟೆ ನಿರ್ವಹಣೆಯ ಕೊರತೆಯಿಂದ ನಲುಗುತ್ತಿದ್ದು, ನಿರಂತರ ಮಳೆ ಹಾಗೂ ನಿರ್ವಹಣೆ ಕೊರತೆಯಿಂದಾಗಿ ಕೋಟೆಯ ಮೇಲ್ಭಾಗದಲ್ಲಿ ಗೋಡೆಯೊಂದು ಕುಸಿದಿದೆ.ಸುಮಾರು ಎರಡು ಶತಮಾನಗಳ ಹಿಂದೆ ೧೭೮೦ರ ಸಾಲಿನಲ್ಲಿ ಬ್ರಿಟೀಷರ ದಾಳಿ ಎದುರಿಸುವ ದೃಷ್ಠಿಯಿಂದ ತಾಲೂಕಿನ ದೋಣಿಗಾಲ್ ಗ್ರಾಮದ ಗುಡ್ಡದ ಮೇಲೆ ನಿರ್ಮಾಣವಾದ ರಾಜ್ಯದ ಏಕೈಕ ನಕ್ಷತ್ರಾಕಾರದ ಕೋಟೆ ಸದ್ಯ ಬಾರಿ ಪ್ರಮಾಣದ ಪ್ರವಾಸಿಗರ ಆಕರ್ಷಣಿಯ ಸ್ಥಳ ಆದರೆ, ಪುರತತ್ವ ಇಲಾಖೆಯ ಅಧೀನದಲ್ಲಿರುವ ಈ ಕೋಟೆ ನಿರ್ವಹಣೆಯ ಕೊರತೆಯಿಂದ ನಾಶವಾಗುತ್ತಿದೆ.
ಸಮಾರು ೨೫೨ ಮೆಟ್ಟಿಲುಗಳನ್ನು ಹತ್ತುವ ಮೂಲಕ ಕೋಟೆ ತಲುಪಲು ವ್ಯವಸ್ಥೆ ಇದ್ದು, ಅದ್ಭುತ ವಾಸ್ತುಶೈಲಿಯ ಈ ಕೋಟೆ ಈಗಾಗಲೇ ದುಸ್ಥಿತಿಗೆ ಈಡಾಗಿದೆ. ಮಳೆ ನೀರಿನಿಂದ ಇಡಿ ಕೋಟೆಯ ವೀಕ್ಷಣಗೋಪುರ, ಕುದರೆಲಾಯ ಸಿಬ್ಬಂದಿ ಕೊಠಡಿಗಳು ಸೋರುತ್ತಿದ್ದು ಅಲ್ಲಲ್ಲಿ ಬಿರುಕು ಮೂಡುವ ಮೂಲಕ ಯಾವಾಗ ಬೇಕಿದ್ದರೀ ಇಡೀ ಕೋಟೆ ಕುಸಿಯುವ ಸಾಧ್ಯತೆ ದಟ್ಟವಾಗಿದೆ. ಮುಂಜಾನೆ ೮ರಿಂದ ಸಂಜೆ ೫ ರವರಗೆ ಕೋಟೆ ವೀಕ್ಷಣೆಗೆ ಅವಕಾಶವಿದ್ದು ನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ, ಪ್ರವೇಶದ್ವಾರದಲ್ಲಿ ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿಯನ್ನು ನೇಮಿಸಿರುವುದನ್ನು ಹೊರತು ಪಡಿಸಿದರೆ ಕೋಟೆ ಪ್ರವೇಶಿಸಿದ ನಂತರ ಪ್ರವಾಸಿಗರ ನಿಯಂತ್ರಿಸಲು ಯಾವುದೆ ಸಿಬ್ಬಂದಿಯಿಲ್ಲದ ಕಾರಣ ಪ್ರವಾಸಿಗರ ಮನಸೋ ಇಚ್ಛೆ ಆಟೋಟದಿಂದ ಕೋಟೆಯ ಹಲವು ಸೂಕ್ಷ್ಮ ಪ್ರದೇಶಗಳು ಬಹುತೇಕ ನಾಶದ ಹಂತ ತಲುಪಿವೆ.ನಕ್ಷತ್ರಾಕಾರದ ಕೋಟೆಯ ಅಷ್ಟು ದಿಕ್ಕುಗಳಲ್ಲಿ ವೀಕ್ಷಣಾಗೋಪುರಗಳಿದ್ದು, ಈ ಗೋಪುರಗಳ ಮೇಲೆ ಪ್ರವಾಸಿಗರು ಹುಚ್ಚಾಟ ಮೆರೆಯುವುದರಿಂದಾಗಿ ಇವುಗಳಲ್ಲಿ ಈಗಾಗಲೇ ಮೂರು ವೀಕ್ಷಣಗೋಪುರಗಳು ಸಂಪೂರ್ಣ ಧರೆಶಾಹಿಯಾಗಿದ್ದರೆ ಉಳಿದ ಗೋಪುರಗಳು ಭಾಗಶಃ ಹಾನಿಗೊಂಡಿವೆ. ಕೋಟೆಯ ಮೇಲ್ಭಾಗದ ಗೋಡೆಯ ಮೇಲೆ ಜನರು ಸಂಚರಿಸುವುದರಿಂದ ಇಡೀ ಗೋಡೆ ಸಾಕಷ್ಟು ಸ್ಥಳಗಳಲ್ಲಿ ಕುಸಿದಿದ್ದು ದುರಸ್ತಿ ಅಸಾಧ್ಯ ಎಂಬ ಸ್ಥಿತಿ ತಲುಪಿದೆ. ಇದಲ್ಲದೆ ಕೋಟೆಯ ಒಳಭಾಗದಲ್ಲಿರುವ ನಕ್ಷತ್ರಕಾರದ ವೃತ್ತ ಅರ್ಧ ದಶಕದ ಹಿಂದೆ ಒಂದು ಭಾಗ ಕುಸಿದಿದ್ದರೆ, ಮತ್ತೊಂದು ಭಾಗ ಕಳೆದ ಎರಡು ದಿನಗಳ ಹಿಂದೆ ಕುಸಿದಿದೆ.
ಗಿಡಗಂಟಿಗಳು:ಸುಮಾರು ಎರಡು ಎಕರೆಗೂ ಅಧಿಕ ವಿಸ್ತೀರ್ಣದಲ್ಲಿರುವ ಕೋಟೆ ತುಂಬ ಗಿಡಗಂಟಿಗಳಿಂದ ತುಂಬಿ ಹೋಗಿದ್ದು, ಒಂಟಿಯಾಗಿ ಸಂಚರಿಸಲು ಭಯಪಡುವಂತ ವಾತಾವರಣ ನಿರ್ಮಾಣವಾಗಿದ್ದರೆ, ಕೋಟೆಯ ಮದ್ಯಭಾಗದಲ್ಲಿರುವ ಕುದುರೆ ನೀರು ಕುಡಿಯುವ ದೃಷ್ಟಿಯಿಂದ ನಿರ್ಮಿಸಿದ್ದ ಕಲ್ಯಾಣಿ ಸದ್ಯ ಇಳಿಯದಂತ ಸ್ಥಿತಿ ತಲುಪಿದೆ.ಕನಿಷ್ಟ ಮೂಲಸೌಕರ್ಯಗಳಿಲ್ಲ:
ಕೋಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ ೭೫ರ ಸಮೀಪದಲ್ಲಿ ಹಲವು ದಶಕಗಳ ಒತ್ತಾಯದಿಂದ ಕಳೆದ ನಾಲ್ಕುವರ್ಷಗಳ ಹಿಂದೆ ಶೌಚಗೃಹ ನಿರ್ಮಿಸಲಾಗಿದೆ. ಇಲ್ಲಿಂದ ಕೋಟೆ ತಲುಪಲು ಒಂದು ಕಿ.ಮೀ.ಗೂ ಅಧಿಕ ಅಂತರವಿದ್ದು ಕೋಟೆಯ ಮೇಲ್ಭಾಗದಲ್ಲಿ ಶೌಚಗೃಹವಿಲ್ಲದ ಕಾರಣ ಪ್ರವಾಸಿಗರು ಪರದಾಡುವಂತಾಗಿದೆ. ಅಲ್ಲದೆ ಇಡೀ ವಾತಾವರಣದ ಎಲ್ಲಿಯೂ ಪ್ರವಾಸಿಗರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಾಗಿದ್ದರೆ, ಕೋಟೆಯ ಪ್ರವೇಶದ್ವಾರ ಸಂಪೂರ್ಣ ಮಲಮೂತ್ರಗಳಿಂದ ತುಂಬಿ ಹೋಗಿದ್ದು ಪ್ರವಾಸಿಗರು ಎಚ್ಚರಿಕೆಯಿಂದ ಸಂಚರಿಸುವಂತೆ ಮಾಡಿದೆ. ವಾಹನಗಳ ನಿಲ್ದಾಣಕ್ಕೂ ಅವಕಾಶವಿಲ್ಲ:ರಾಷ್ಟ್ರೀಯ ಹೆದ್ದಾರಿ ೭೫ರ ಸಮೀಪ ವಾಹನಗಳನ್ನು ನಿಲುಗಡೆ ಮಾಡಿ ಪ್ರವಾಸಿಗರು ಕೋಟೆ ವೀಕ್ಷಣೆಗೆ ತೆರಳಬೇಕಿದೆ. ಆದರೆ, ಕೋಟೆಯ ಮೆಟ್ಟಿಲವರೆಗೂ ವಾಹನಗಳ ಸಂಚಾರಕ್ಕೆ ಅವಕಾಶವಿದ್ದರೂ ಇಲ್ಲಿ ವಾಹನಗಳ ನಿಲುಗಡೆಗೆ ಅವಕಾಶವಿಲ್ಲದ ಕಾರಣ ವೃದ್ಧರು, ಅಬಲರು ಕೋಟೆ ವೀಕ್ಷಣೆಗೆ ತೆರಳುವುದು ಸಾಧ್ಯವಿಲ್ಲದ ಕೆಲಸವಾಗಿದೆ.
ಕೆರೆ ಸ್ವಚ್ಛಗೊಳ್ಳಬೇಕಿದೆ:ಕೋಟೆಯ ಪ್ರವೇಶ ದ್ವಾರದಲ್ಲಿ ಸುಮಾರು ಎರಡು ಎಕರೆ ವಿಸ್ತಿರ್ಣದಲ್ಲಿ ಪುರತಾನ ಕೆರೆ ಇದೆ. ಆದರೆ, ಕೆರೆಯ ನಿರ್ವಹಣೆಯನ್ನು ಇಲಾಖೆ ಮರೆತಿರುವುದರಿಂದ ಕೆರೆ ಸಂಪೂರ್ಣ ಕಾಡಿನಿಂದ ಆವೃತವಾಗಿದ್ದು ಜನರ ಕಣ್ಣಿಗೆ ಕೆರೆ ಗೋಚರಿಸದಾಗಿದೆ. ಇದಲ್ಲದೆ ಕೋಟೆಯನ್ನು ಸುಲಭವಾಗಿ ಪ್ರವೇಶಿಸದಂತೆ ಕೋಟೆಯ ಸುತ್ತಲು ಸುಮಾರು ೩೦ ಅಡಿ ಆಳದ ೨೦ ಅಡಿ ಅಗಲದ ಕಂದಕ ನಿರ್ಮಾಣ ಮಾಡಲಾಗಿದೆ. ಆದರೆ, ಸದ್ಯ ಗಿಡಗಂಟಿಗಳು ಕಂದಕ ಇರುವನ್ನೇ ಮರೆಮಾಚಿವೆ.
ಅಭಿವೃದ್ಧಿಗೆ ಗ್ರಹಣ:ದಶಕದ ಹಿಂದೆ ರಾಜ್ಯ ಪುರಾತತ್ವ ಇಲಾಖೆಯ ಉಪನಿರ್ದೇಶಕರಾಗಿದ್ದ ಮಥಾಯಿ ಎಂಬ ಅಧಿಕಾರಿ ಮಂಜ್ರಾಬಾದ್ ಕೋಟೆ ಅಭಿವೃದ್ಧಿಗೆ ಪಣತೊಟ್ಟು ಹಾಸನ ಜಿಲ್ಲಾಧಿಕಾರಿಗಳ ಮನವೊಲಿಸಿ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಕೋಟೆಗೆ ಸೇರಲಿದೆ ಎಂಬ ಭೂಮಿಯ ಸರ್ವೆ ನಡೆಸುವ ಮೂಲಕ ಸುಮಾರು ೧೬ ಎಕರೆ ಪ್ರದೇಶವನ್ನು ಸಂಪೂರ್ಣ ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಿದ್ದರು. ಪ್ರವಾಸೋದ್ಯಮ ಹಾಗೂ ಪುರತತ್ವ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಹಾಸನ ಜಿಲ್ಲಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸುಮಾರು ೧೦ ಕೋಟಿ ರು.ಗಳ ವೆಚ್ಚದಲ್ಲಿ ಅಭಿವೃದ್ಧಿ ಯೋಜನೆ ಸಿದ್ಧಪಡಿಸಿದ್ದರು. ಇದರಲ್ಲಿ ದುಸ್ಥಿತಿಗೀಡಾಗಿರುವ ಕೋಟೆಯ ಮರುನಿರ್ಮಾಣ, ಕೋಟೆಯ ಸಮೀಪ ಹೋಟೆಲ್, ವಿಹಾರಧಾಮ, ಬಾಲವನ, ಕೋಟೆ ತಲುಪಲು ಎಸ್ಕಲೇಟರ್ ಅಳವಡಿಸುವುದು ಹೆದ್ದಾರಿಯಿಂದ ಕೋಟೆಯ ಮೆಟ್ಟಿಲವರೆಗೆ ಉತ್ತಮ ದರ್ಜೆ ರಸ್ತೆ ನಿರ್ಮಾಣ ಮಾಡುವುದು ಈ ಯೋಜನೆಯಲ್ಲಿ ಸೇರಿದ್ದು ಯೋಜನೆ ಮಂಜೂರಾತಿ ಪಡೆಯುವ ಹಂತಕ್ಕೂ ತಲುಪಿತ್ತು ಆದರೆ, ಈ ಅಧಿಕಾರಿ ನಿವೃತ್ತಿಗೊಂಡ ನಂತರ ಇಡಿ ಯೋಜನೆ ಕೇವಲ ಕಡತದಲ್ಲೆ ಉಳಿಯುವಂತಾಗಿದೆ.ಬೇಕಲ್ ಕೋಟೆ ಮಾದರಿ: ಕಾಸರಗೋಡು ಸಮೀಪ ಇರುವ ಬೇಕಲ್ ಕೋಟೆ ಸಹ ಮಂಜ್ರಾಬಾದ್ ಕೋಟೆಯನ್ನು ಹೋಲುತ್ತಿದ್ದು, ಇತ್ತೀಚೆಗೆ ಕೇರಳ ಸರ್ಕಾರ ಸಂಪೂರ್ಣ ನಾಶದ ಹಂತದಲ್ಲಿದ್ದ ಕೋಟೆಯನ್ನು ಮೂಲರೂಪದಲ್ಲಿರುವಂತೆ ಅಭಿವೃದ್ಧಿಗೊಳಿಸಿದೆ. ಇಂದು ಈ ಕೋಟೆ ಕೇರಳ ಪ್ರವಾಸೋದ್ಯಮದಲ್ಲಿ ತನ್ನದೇ ಆದ ಹೆಸರು ಪಡೆದಿದೆ. ಇದೇ ರೀತಿ ಮಂಜ್ರಾಬಾದ್ ಕೋಟೆಯನ್ನು ಅಭಿವೃದ್ಧಿಪಡಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
--------------------------------------------------------------*ಹೇಳಿಕೆಕೋಟೆ ನಿರ್ವಹಣೆಯ ಹೊಣೆ ಹೊತ್ತಿರುವ ರಾಜ್ಯ ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದ ಇತಿಹಾಸ ಪ್ರಸಿದ್ಧ ಕೋಟೆ ಅವನತಿಯತ್ತ ಸಾಗುತ್ತಿದ್ದು ತಕ್ಷಣವೇ ಕೋಟೆಯ ಅಧ್ಯಯನ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಸಿಮೆಂಟ್ ಮಂಜು, ಶಾಸಕ*ಹೇಳಿಕೆಕೋಟೆಯ ಸ್ಥಿತಿ ದಯನೀಯವಾಗಿದ್ದು, ಪ್ರವಾಸಿಗರ ಆಟಾಟೋಪಕ್ಕೆ ಕಡಿವಾಣ ಹಾಕದಿದ್ದರೆ ಕೋಟೆ ಮೂಲ ರೂಪವನ್ನು ಸದ್ಯದಲ್ಲೆ ಕಳೆದುಕೊಳ್ಳಲಿದೆ.
ಆರ್ ಅಣ್ಣಪ್ಪಸ್ವಾಮಿ, ಪ್ರಾಂಶುಪಾಲರು, ಸಕಲೇಶಪುರ========ಫೋಟೋ ಶೀರ್ಷಿಕೆ: ಎಸ್ಕೆಪಿಪಿ೧ ಮಂಜ್ರಾಬಾದ್ ಕೋಟೆಯ ಬಾಹ್ಯ ನೋಟ.
೨ ಕುಸಿದಿರುವ ಕೋಟೆಯ ಒಂದು ಭಾಗ.೩ ಗಿಡಗಂಟಿಗಳು ಆವರಿಸಿರುವುದು.
೪ ವೀಕ್ಷಣಗೋಪುರದ ದುಸ್ಥಿತಿ.