ಅರ್ಧಕ್ಕೆ ಕೆಲಸ ನಿಲ್ಲಿಸಿ ಗುತ್ತಿಗೆದಾರ ನಾಪತ್ತೆ

KannadaprabhaNewsNetwork |  
Published : Aug 04, 2025, 11:45 PM IST
4ಎಚ್ಎಸ್ಎನ್3 : ಬೇಲೂರು ತಾಲೂಕು ಬಿಕ್ಕೋಡು  ಹೋಬಳಿ ಕೇಂದ್ರದ ಶನೀಶ್ವರ ದೇಗುಲ ಬಳಿ  ಜಿಲ್ಲಾ ಹೆದ್ದಾರಿ ರಸ್ತೆ ಗುಂಡಿಮಯವಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಬಿಕ್ಕೋಡು  ಗುಂಡಿಮಯ ರಸ್ತೆಯಲ್ಲಿ ವಾಹನ ಸವಾರರ ಪರದಾಟ. | Kannada Prabha

ಸಾರಾಂಶ

ಬೇಲೂರು-ಕೊಡ್ಲಿಪೇಟೆ ಜಿಲ್ಲಾ ಹೆದ್ದಾರಿ ರಸ್ತೆಯಲ್ಲಿ ಬರುವ ಬಿಕ್ಕೋಡು ಹೋಬಳಿ ಕೇಂದ್ರದ ರಸ್ತೆ ಗುಂಡಿಬಿದ್ದು ಕೆಸರುಗದ್ದೆಯಾಗಿ ವಾಹನ ಸವಾರರು ಸಂಚರಿಸಲು ಪರದಾಡಿ ಪಿಡಬ್ಲ್ಯೂಡಿ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ. ರಸ್ತೆ ಅಗೆದು ಪಕ್ಕದಲ್ಲಿದ್ದ ಮರಗಳನ್ನು ತೆರವುಗೊಳಿಸಿ ಕೆಲಸಕ್ಕೆ ಎಳ್ಳುನೀರು ಬಿಟ್ಟು ಗುತ್ತಿಗೆದಾರ ನಾಪತ್ತೆಯಾಗಿದ್ದಾರೆ. ಕಾಮಗಾರಿ ಆರಂಭದಲ್ಲೇ ಸ್ಥಗಿತಗೊಂಡ ಕಾರಣ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಸಂಪೂರ್ಣ ಗುಂಡಿಮಯವಾಗಿ ಜನರು ನಡೆದಾಡಲು ಮತ್ತು ವಾಹನ ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ಬೇಲೂರು-ಕೊಡ್ಲಿಪೇಟೆ ಜಿಲ್ಲಾ ಹೆದ್ದಾರಿ ರಸ್ತೆಯಲ್ಲಿ ಬರುವ ಬಿಕ್ಕೋಡು ಹೋಬಳಿ ಕೇಂದ್ರದ ರಸ್ತೆ ಗುಂಡಿಬಿದ್ದು ಕೆಸರುಗದ್ದೆಯಾಗಿ ವಾಹನ ಸವಾರರು ಸಂಚರಿಸಲು ಪರದಾಡಿ ಪಿಡಬ್ಲ್ಯೂಡಿ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.ತಾಲೂಕು ಬಿಕ್ಕೋಡು ಹೋಬಳಿ ಕೇಂದ್ರದ ಶನೀಶ್ವರ ದೇಗುಲ ಬಳಿ ಬೇಲೂರು-ಕೊಡ್ಲಿಪೇಟೆ ಜಿಲ್ಲಾ ಹೆದ್ದಾರಿ ರಸ್ತೆಯ ಡಾಂಬರೀಕರಣದ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ರಸ್ತೆ ಅಗೆದು ಪಕ್ಕದಲ್ಲಿದ್ದ ಮರಗಳನ್ನು ತೆರವುಗೊಳಿಸಿ ಕೆಲಸಕ್ಕೆ ಎಳ್ಳುನೀರು ಬಿಟ್ಟು ಗುತ್ತಿಗೆದಾರ ನಾಪತ್ತೆಯಾಗಿದ್ದಾರೆ. ಕಾಮಗಾರಿ ಆರಂಭದಲ್ಲೇ ಸ್ಥಗಿತಗೊಂಡ ಕಾರಣ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಸಂಪೂರ್ಣ ಗುಂಡಿಮಯವಾಗಿ ಜನರು ನಡೆದಾಡಲು ಮತ್ತು ವಾಹನ ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ. 75 ಲಕ್ಷ ರು. ವೆಚ್ಚದಲ್ಲಿ ಬಿಕ್ಕೋಡು ಮದಘಟ್ಟ ರಸ್ತೆಯ ಶನೀಶ್ಚರ ದೇಗುಲ ಬಳಿಯಿಂದ 500 ಮೀಟರ್ ರಸ್ತೆಯನ್ನು ದುರಸ್ತಿಗೊಳಿಸಿ ಡಾಂಬರ್ ಹಾಕಲು ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಕರೆಯಲಾಗಿತ್ತು. ಕಳೆದ ವರ್ಷ ಗುತ್ತಿಗೆದಾರರೊಬ್ಬರು ಟೆಂಡರ್ ಪಡೆದು ಕಾಮಗಾರಿ ಆರಂಭಿಸಿ ರಸ್ತೆಯ ಇಕ್ಕೆಲಗಳಲ್ಲಿದ್ದ ಬೃಹತ್ ಮರಗಳನ್ನು ತೆರವುಗೊಳಿಸಿದ್ದರು. ನಂತರ ಜಲ್ಲಿ ಹಾಗೂ ಸಿಮೆಂಟ್ ಹಾಕಲು ಐನೂರು ಮೀಟರ್ ರಸ್ತೆ ಅಗೆದಿದ್ದರು. ಆದರೆ ನಂತರದಲ್ಲಿ ಕಾಮಗಾರಿಯನ್ನು ಅರ್ಧಕ್ಕೆ ಬಿಟ್ಟು ಕಣ್ಮರೆಯಾದರು. ಕಳೆದ ಒಂದು ವರ್ಷದಿಂದ ಈ ರಸ್ತೆಯು ಡಾಂಬರು ಕಾಣದೆ ನೆನೆಗುದಿಗೆ ಬಿದ್ದಿದೆ. ಕಳೆದ ಮೂರು ತಿಂಗಳಿನಿಂದ ಮಳೆರಾಯನ ಆರ್ಭಟ ಹೆಚ್ಚಾಗಿದ್ದು ಅರೆ ಮಲೆನಾಡು ಪ್ರದೇಶಕ್ಕೆ ಸೇರಿದ ಈ ರಸ್ತೆಯು ಈಗ ಸಂಪೂರ್ಣವಾಗಿ ಹಾಳಾಗಿದೆ. ಹೆದ್ದಾರಿ ರಸ್ತೆಯಲ್ಲಿ ಸಕಲೇಶಪುರ ಧರ್ಮಸ್ಥಳ ಸುಬ್ರಹ್ಮಣ್ಯ ಹಾಗೂ ಪ್ರವಾಸಿ ಕೇಂದ್ರ ಬೇಲೂರು ಹಳೇಬೀಡಿಗೆ ಪ್ರವಾಸಿಗರು ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಆದರೆ ಕೆಸರು ಗದ್ದೆಯಾಗಿರುವ. ಈ ರಸ್ತೆಯಲ್ಲಿ ಸಂಚರಿಸಲು ಕಷ್ಟವಾಗಿದ್ದು ದಿನನಿತ್ಯ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ.ಈ ಬಗ್ಗೆ ಕೆಡಿಪಿ ಸದಸ್ಯ ಚೇತನ್ ಬಿಕ್ಕೋಡು ಮಾತನಾಡಿ, ಬೇಲೂರು ಕೊಡ್ಲಿಪೇಟೆ ಜಿಲ್ಲಾ ಹೆದ್ದಾರಿ ರಸ್ತೆಯ ಬಿಕ್ಕೋಡು ಮದಗಟ್ಟ ರಸ್ತೆಯ 500 ಮೀಟರ್ ದುರಸ್ತಿಗೆ 75 ಲಕ್ಷಕ್ಕೆ ಕಳೆದ ವರ್ಷ ಟೆಂಡರ್ ಕರೆಯಲಾಗಿತ್ತು. ಕಾಮಗಾರಿ ಆರಂಭಿಸಿದ ಗುತ್ತಿಗೆದಾರ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪಿಡಬ್ಲ್ಯೂಡಿ ಎಂಜಿನಿಯರಿಗೆ ಪತ್ರ ಬರೆದಿದ್ದು ಅವರು ಕೂಡ ಗುತ್ತಿಗೆದಾರನಿಗೆ ನೋಟಿಸ್ ನೀಡಿರುತ್ತಾರೆ. ಆದರೆ ಈವರೆಗೆ ಸಮರ್ಪಕ ಉತ್ತರ ದೊರೆತಿಲ್ಲ. ಈಗಾಗಲೇ ಸುರಿಯುತ್ತಿರುವ ಭಾರಿ ಮಳೆಯಿಂದ ರಸ್ತೆಯು ಹೀನಾಯ ಸ್ಥಿತಿ ತಲುಪಿದೆ. ಈಗಲಾದರೂ ಎಂಜಿನಿಯರ್ ಎಚ್ಚೆತ್ತು ಮರು ಟೆಂಡರ್ ಕರೆದು ಹಳೆಯ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ