ಕಾರ್ಕಳ: ಕರ್ನಾಟಕದ ಸಚಿವ ಪ್ರಿಯಾಂಕ ಖರ್ಗೆ ಅವರು ರಾಜ್ಯದಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ಹಾಗೂ ಬೈಠಕ್‌ಗಳನ್ನು ನಿಷೇಧಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಿರುವ ಆರೋಪ ಹಿನ್ನೆಲೆ, ಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರ ಹಿತಕ್ಕಾಗಿ ಶತಮಾನದಿಂದ ಕಾರ್ಯನಿರ್ವಹಿಸುತ್ತಿರುವ ಸಂಘವನ್ನು ಬ್ಯಾನ್ ಮಾಡುವ ಸಾಹಸಕ್ಕೆ ಸರ್ಕಾರ ಕೈ ಹಾಕಲಿ. ಇಂಥ ಧೂರ್ತ ಪ್ರಯತ್ನಗಳು ಹಿಂದೆಯೂ ವಿಫಲವಾಗಿವೆ ಎಂದು ಹೇಳಿದ್ದಾರೆ.
ಜಾತ್ಯತೀತತೆಯ ಹೆಸರಿನಲ್ಲಿ ಸಮಾಜ ವಿಭಜನೆ ನಡೆಸಿದ ಕಾಂಗ್ರೆಸ್‌ಗೆ ಆರ್‌ಎಸ್‌ಎಸ್ ಸಿಂಹಸ್ವಪ್ನವಾಗಿದೆ. ಸಂವಿಧಾನ ವಿರೋಧಿ ಕ್ರಮಗಳಿಂದಲೂ ಸಂಘವನ್ನು ಕುಗ್ಗಿಸಲು ಯಾರಿಗೂ ಸಾಧ್ಯವಾಗಿಲ್ಲ. ಸಂಘದ ಪ್ರಾರ್ಥನೆ ನಮ್ಮ ಉಸಿರು. ಎಷ್ಟೇ ದಬ್ಬಾಳಿಕೆ ಬಂದರೂ ನಾವು ತಗ್ಗುವುದಿಲ್ಲ ಎಂದು ಸುನಿಲ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.