ಕರ್ನಾಟಕವನ್ನು ತಾಲಿಬಾನ್‌ ಸರ್ಕಾರ ಮಾಡುವ ಹುನ್ನಾರ: ಆರ್‌.ಅಶೋಕ್‌ ಆರೋಪ

KannadaprabhaNewsNetwork | Published : Jun 13, 2024 12:46 AM

ಸಾರಾಂಶ

ಈ ತಾಲಿಬಾನ್‌ ರಾಜ್ಯ ಸರ್ಕಾರವನ್ನು ಬಗ್ಗು ಬಡಿಯುತ್ತೇವೆ. ಅ‍ವರಿಗೆ ತಕ್ಕ ಪಾಠ ಕಲಿಸುತ್ತೇವೆ. ಈ ಬಗ್ಗೆ ಜೂ.13ರಂದು ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಲಿದ್ದೇವೆ ಎಂದು ಆರ್‌. ಅಶೋಕ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋಮು ಸೌಹಾರ್ದತೆ ಹಾಳು ಮಾಡುತ್ತಿದೆ. ಇಡೀ ಕರ್ನಾಟಕವನ್ನು ಕಾಂಗ್ರೆಸ್‌ನವರು ತಾಲಿಬಾನ್‌ ಮಾಡಲು ಹೊರಟಿದ್ದಾರೆ ಎಂದು ವಿಧಾನಸಭಾ ವಿಪಕ್ಷ ನಾಯಕ ಆರ್‌.ಅಶೋಕ್‌ ಆರೋಪಿಸಿದ್ದಾರೆ.

ಮಂಗಳೂರಿಗೆ ಬುಧವಾರ ಭೇಟಿ ನೀಡಿದ ವೇಳೆ ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇದಕ್ಕೂ ಮೊದಲು ಆರ್‌. ಅಶೋಕ್‌ ಅವರು ಪ್ರಧಾನಿ ನರೇಂದ್ರ ಮೋದಿ 3.0 ಪ್ರಮಾಣವಚನ ಸ್ವೀಕಾರ ವೇಳೆ ಬೋಳಿಯಾರ್‌ನಲ್ಲಿ ವಿಜಯೋತ್ಸವ ಸಂದರ್ಭ ನಡೆದ ಮಾರಣಾಂತಿಕ ಹಲ್ಲೆಯಲ್ಲಿ ಗಂಭೀರ ಗಾಯಗೊಂಡ ಬಿಜೆಪಿಯ ಮೂವರು ಕಾರ್ಯಕರ್ತರನ್ನು ಆಸ್ಪತ್ರೆಯಲ್ಲಿ ಮಾತನಾಡಿಸಿದರು. ಈ ತಾಲಿಬಾನ್‌ ರಾಜ್ಯ ಸರ್ಕಾರವನ್ನು ಬಗ್ಗು ಬಡಿಯುತ್ತೇವೆ. ಅ‍ವರಿಗೆ ತಕ್ಕ ಪಾಠ ಕಲಿಸುತ್ತೇವೆ. ಈ ಬಗ್ಗೆ ಜೂ.13ರಂದು ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಲಿದ್ದೇವೆ. ಮುಂದಿನ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪಿಸಲಾಗುವುದು ಎಂದು ಅವರು ಹೇಳಿದರು.

ಭಾರತ ಪರ ಮಾತ್ರ ಘೋಷಣೆ: ಬಿಜೆಪಿ ವಿಜಯೋತ್ಸವ ವೇಳೆ ಕಾರ್ಯಕರ್ತರು ‘ಭಾರತ್‌ ಮಾತಾಕೀ ಜೈ’ ಎಂದು ಘೋಷಣೆ ಕೂಗಿದ್ದಾರೆ. ಈ ಕುರಿತು ಸ್ಥಳೀಯ ಮಸೀದಿಯಲ್ಲಿ ದಾಖಲಾದ ಸಿಸಿ ಕ್ಯಾಮರಾ ತುಣುಕನ್ನು ನಾವು ನೋಡಿದ್ದೇನೆ. ಇದರ ಹೊರತು ಬೇರೇನೂ ಘೋಷಣೆ ಕೂಗಿಲ್ಲ. ಭಾರತ್‌ ಮಾತಾ ಕೀ ಜೈ ಎನ್ನುವುದು ತಪ್ಪಾ? ಹೀಗೆ ಘೋಷಣೆ ಕೂಗಿದವರ ಮೇಲೆಯೇ ಮರುದಿನ ದೂರು ನೀಡಲಾಗಿದೆ. ಪ್ರತಿ ದೂರನ್ನು ವಾಪಸ್ ಪಡೆಯುವಂತೆ ಅವರು ಆಗ್ರಹಿಸಿದರು.

ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಪೊಲೀಸ್‌ ಕಮಿಷನರರು, ವಿಜಯೋತ್ಸವ ವೇಳೆ ಬಿಜೆಪಿ ಕಾರ್ಯಕರ್ತರು, ಪಾಕಿಸ್ತಾನ ಕುನ್ನಿಗಳು ಎಂದು ಹೇಳಿದ್ದಾರೆ ಎಂದಿದ್ದಾರೆ. ಹಾಗಾದರೆ ಹಾಗೆ ಹೇಳಿದ ಬಗೆಗಿನ ಸಿಸಿ ಕ್ಯಾಮರಾ ತುಣುಕನ್ನು ಬಿಡುಗಡೆಗೊಳಿಸುವಂತೆ ಪೊಲೀಸ್‌ ಕಮಿಷನರ್‌ಗೆ ಸೂಚಿಸಿದ್ದೇನೆ ಎಂದು ಆರ್‌.ಅಶೋಕ್‌ ಹೇಳಿದರು.

ಬೆಂಗಳೂರಿನ ಯಲಹಂಕ, ವಿಧಾನಸೌಧದಲ್ಲಿ ಮಾತ್ರ ಪಾಕಿಸ್ತಾನ ಜಿಂದಾಬಾದ್‌ ಕೂಗುತ್ತಾರೆ. ಅಂತಹವರ ವಿರುದ್ಧ ಕೇಸು ದಾಖಲಾಗುವುದಿಲ್ಲ. ಈಗ ಸ್ಪೀಕರ್‌ ಖಾದರ್‌ ಕ್ಷೇತ್ರದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆದಿದೆ. ಗಾಯಾಳುಗಳಿದ್ದ ಆಸ್ಪತ್ರೆಗೆ ಕಾರ್ಯಕ್ರಮಕ್ಕೆ ಆಗಮಿಸಿದ ಆರೋಗ್ಯ ಸಚಿವರು ಹಾಗೂ ಸ್ಪೀಕರ್‌ರು ಗಾಯಾಳುಗಳನ್ನು ಕನಿಷ್ಠ ಮಾನವೀಯತೆಗೂ ಭೇಟಿಯಾಗಿಲ್ಲ. ಈಗ ಅಮಾಯಕರ ಐವರ ಮೇಲೆ ಪೊಲೀಸರು ಕೇಸು ಯಾರದೋ ಒತ್ತಡದ ಮೇಲೆ ದಾಖಲಿಸಿದ್ದಾರೆ. ದ.ಕ.ದಲ್ಲಿ ಐವರು ಶಾಸಕರ ಮೇಲೂ ಸರ್ಕಾರ ಕೇಸು ದಾಖಲಿಸಿದೆ. ಈ ಕೇಸುಗಳನ್ನು ಕೂಡಲೇ ವಾಪಸ್‌ ಪಡೆಯಬೇಕು. ಈ ಘಟನೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಪೂರ್ತಿ ಆಸ್ಪತ್ರೆ ವೆಚ್ಚವನ್ನು ಜಿಲ್ಲಾಡಳಿತ ಭರಿಸಬೇಕು ಎಂದವರು ಆಗ್ರಹಿಸಿದರು.

ಕರ್ನಾಟಕದಲ್ಲಿ ಯಾರು ಗೃಹ ಸಚಿವರು ಎಂದು ಹುಡುಕುವ ಪರಿಸ್ಥಿತಿ ತಲೆದೋರಿದೆ. ಸಿದ್ದರಾಮಯ್ಯ, ಡಿಕೆಶಿಯೇ ಅಥವಾ ಪರಮೇಶ್ವರ್‌ ಅವರೇ ಅಥವಾ ಎಲ್ಲ ಕಾಂಗ್ರೆಸ್‌ ಶಾಸಕರು ಗೃಹ ಸಚಿವರೇ ಎಂಬುದು ಅರ್ಥವಾಗುತ್ತಿಲ್ಲ ಎಂದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಗೂಂಡಾಗಳಿಗೆ ಹಬ್ಬವಾದಂತಾಗಿದೆ. ಈ ಸರ್ಕಾರ ಗೂಂಡಾಗಳ ಕೈಯಲ್ಲಿದೆ. ಇಲ್ಲಿ ಸರ್ಕಾರವೇ ಇಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಪುಡಿ ರೌಡಿಗಳು ಜಾಸ್ತಿಯಾಗಿದ್ದಾರೆ. ಕಾಂಗ್ರೆಸ್‌ನಲ್ಲೂ ರೌಡಿಸಂ ಮಾಡಿ ಬಂದವರೇ ಜಾಸ್ತಿ ಇದ್ದಾರೆ ಎಂದವರು ಆರೋಪಿಸಿದರು.

ಗಾಯಾಳುಗಳಿಗೆ ಪರಿಹಾರ ನೀಡಿ: ನಾನು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಮಾತನಾಡಿಸಿದ್ದೇನೆ. ಅವರಿಂದ ಘಟನೆಯ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಅಲ್ಲದೆ ಗಾಯಾಳುಗಳಿಗೆ ಪಕ್ಷದಿಂದ ನೆರವು ನೀಡುತ್ತೇವೆ. ಯಾವುದೇ ಸಂದರ್ಭದಲ್ಲೂ ಪಕ್ಷ ಕಾರ್ಯಕರ್ತರ ಪರವಾಗಿ ನಿಲ್ಲುತ್ತದೆ. ಸರ್ಕಾರ ಗಾಯಾಳುಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಅಶೋಕ್‌ ಆಗ್ರಹಿಸಿದರು.

ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ, ಶಾಸಕರಾದ ವೇದವ್ಯಾಸ್‌ ಕಾಮತ್‌, ಡಾ.ಭರತ್‌ ಶೆಟ್ಟಿ, ಹರೀಶ್ ಪೂಂಜಾ, ರಾಜೇಶ್‌ ನಾಯ್ಕ್‌, ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮುಖಂಡರಾದ ನಿತಿನ್‌ ಕುಮಾರ್‌, ಪ್ರೇಮಾನಂದ ಶೆಟ್ಟಿ, ಕಿಶೋರ್‌ ಬೊಟ್ಯಾಡಿ, ಪೂಜಾ ಪೈ, ಸಂಜಯ ಪ್ರಭು, ಸತೀಶ್‌ ಆರ್ವಾರ್‌, ನಂದನ್‌ ಮಲ್ಯ, ರವೀಂದ್ರ ಶೆಟ್ಟಿ ಉಳಿದೊಟ್ಟು, ತಿಲಕ್‌ರಾಜ್‌ ಕೃಷ್ಣಾಪುರ ಮತ್ತಿತರರಿದ್ದರು.

Share this article