ಚಿಂತಾಮಣಿಯಲ್ಲಿ ವಕ್ಫ್‌ ಸಂಘರ್ಷ : ಹೊಲ ಉಳುತ್ತಿದ್ದ ದಲಿತ ರೈತರ ಟ್ರ್ಯಾಕ್ಟರ್‌ ಜಪ್ತಿ!

KannadaprabhaNewsNetwork |  
Published : Nov 16, 2024, 12:35 AM ISTUpdated : Nov 16, 2024, 09:22 AM IST
ರಾಜ್ಯ  | Kannada Prabha

ಸಾರಾಂಶ

ರಾಜ್ಯಮಟ್ಟದಲ್ಲಿ ಸದ್ದು ಮಾಡುತ್ತಿರುವ ವಕ್ಫ್ ಆಸ್ತಿ ವಿವಾದ ಇದೀಗ ಚಿಂತಾಮಣಿಯಲ್ಲೂ ಗದ್ದಲಕ್ಕೆ ಕಾರಣವಾಗಿದೆ.

 ಚಿಂತಾಮಣಿ (ಚಿಕ್ಕಬಳ್ಳಾಪುರ) : ರಾಜ್ಯಮಟ್ಟದಲ್ಲಿ ಸದ್ದು ಮಾಡುತ್ತಿರುವ ವಕ್ಫ್ ಆಸ್ತಿ ವಿವಾದ ಇದೀಗ ಚಿಂತಾಮಣಿಯಲ್ಲೂ ಗದ್ದಲಕ್ಕೆ ಕಾರಣವಾಗಿದೆ. ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ಉಳುಮೆ ವಿಚಾರದಲ್ಲಿ ಮುಸ್ಲಿಂ ಮುಖಂಡರು ಮತ್ತು ರೈತರ ನಡುವೆ ವಾಗ್ವಾದ ನಡೆದಿದ್ದು, ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿತ್ತು. ಈ ಸಂಬಂಧ ವಕ್ಫ್‌ ಮಂಡಳಿಯವರು ನೀಡಿದ ದೂರಿನಂತೆ ಎಫ್‌ಐಆರ್‌ ದಾಖಲಾಗಿದ್ದು, ರೈತರ ಟ್ರ್ಯಾಕ್ಟರ್‌ವೊಂದನ್ನು ವಶಕ್ಕೆ ಪಡೆಯಲಾಗಿದೆ.

ಆಗಿದ್ದೇನು?: ತಿಮ್ಮಸಂದ್ರ ಗ್ರಾಮದ ಸರ್ವೇ ನಂಬರ್ 13/1, 13/3 ಮತ್ತು 20ರ 10 ಆಸ್ತಿಗೆ ಸಂಬಂಧಿಸಿ ವಕ್ಫ್‌ ಮತ್ತು ರೈತರ ನಡುವೆ ಹಿಂದಿನಿಂದಲೂ ತಿಕ್ಕಾಟ ನಡೆದುಕೊಂಡು ಬಂದಿದೆ. ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದಾಗಿರುವ ಹಿನ್ನೆಲೆಯಲ್ಲಿ ಇದರ ವಿರುದ್ಧ ರೈತರು 2014ರಲ್ಲಿ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಮೆಟ್ಟಿಲೇರಿದ್ದು, ತೀರ್ಪು ವಕ್ಫ್‌ ಮಂಡಳಿ ಪರವಾಗಿ ಬಂದಿತ್ತು. ಇದನ್ನು ಪ್ರಶ್ನಿಸಿ ರೈತರು ಹೈಕೋರ್ಟ್‌ ಮೆಟ್ಟಿಲೇರಿದ್ದು, ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ.

ಇತ್ತೀಚೆಗೆ ಜಾಮಿಯಾ ಮಸೀದಿ ಸಮಿತಿ ಈ ಜಮೀನನ್ನು ಸರ್ವೇ ಮಾಡಿಸಿ ಸುತ್ತಲೂ ಮುಳ್ಳು ತಂತಿ ಬೇಲಿ ಹಾಕಿದೆ. ಆದರೆ 70 ವರ್ಷಗಳಿಂದ ನಾವು ಈ ಜಮೀನಲ್ಲಿ ಉಳುಮೆ ಮಾಡಿಕೊಂಡು ಜೀವನ ಮಾಡುತ್ತಿದ್ದೇವೆ. ಆದರೆ ಈಗ ವಕ್ಫ್ ಬೋರ್ಡ್‌ನವರು ನಮ್ಮ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಮುಳ್ಳು ತಂತಿ ಬೇಲಿ ಹಾಕಿಸಿಕೊಂಡು ನಮಗೆ ತೊಂದರೆ ನೀಡುತ್ತಿದ್ದಾರೆಂಬುದು ತಿಮ್ಮಸಂದ್ರ ಗ್ರಾಮದ ಬಡ ದಲಿತ ಕುಟುಂಬದವರ ಆರೋಪ.

ರಾಜ್ಯಾದ್ಯಂತ ವಕ್ಫ್‌ ಆಸ್ತಿಗೆ ಸಂಬಂಧಿಸಿ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಇದೀಗ ಏಕಾಏಕಿ ಜಮೀನಿಗೆ ಹಾಕಿದ ಬೇಲಿ ಕಿತ್ತು ಹಾಕಿದ ರೈತರು, ಟ್ರ‍್ಯಾಕ್ಟರ್ ಮೂಲಕ ಉಳುಮೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಸ್ಥಳಕ್ಕೆ ಜಾಮಿಯಾ ಮಸೀದಿ ಸಮಿತಿ ಸದಸ್ಯರು ಆಗಮಿಸಿ ಆಕ್ಷೇಪ ತೆಗೆದಿದ್ದಾರೆ. ಇದರಿಂದ ಎರಡೂ ಗುಂಪುಗಳ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸುದ್ದಿ ತಿಳಿದು ಚಿಂತಾಮಣಿ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್‌ ಶಿವರಾಜ್ ಮತ್ತು ಸಿಬ್ಬಂದಿ ದಲಿತರು ಹಾಗೂ ಜಾಮಿಯಾ ಮಸೀದಿ ಸಮಿತಿ ಸದಸ್ಯರನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಜಾಮಿಯಾ ಮಸೀದಿ ಸಮಿತಿ ಕಾರ್ಯದರ್ಶಿ ಮಹಮ್ಮದ್ ಇನಾಯತ್ ಅವರು ಅಕ್ರಮ ಪ್ರವೇಶದ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಟ್ರ್ಯಾಕ್ಟರ್‌ ವಶಕ್ಕೆ ಪಡೆದಿದ್ದಾರೆ. ಸದ್ಯ ಪ್ರಕರಣ ಹೈಕೋರ್ಟ್‌ನಲ್ಲಿರುವ ಕಾರಣ ಎರಡೂ ಕಡೆಯವರು ಯಥಾಸ್ಥಿತಿ ಕಾಪಾಡುವಂತೆ ತಹಸೀಲ್ದಾರ್‌ ಸುದರ್ಶನ್‌ ಸೂಚಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ