ವಕ್ಫ್‌ ದೇಶಕ್ಕಂಟಿದ ಕ್ಯಾನ್ಸರ್‌ ಇದ್ದಂತೆ: ಬಸನಗೌಡ ಪಾಟೀಲ್ ಯತ್ನಾಳ

KannadaprabhaNewsNetwork |  
Published : Jan 05, 2025, 01:31 AM IST
ಕಂಪ್ಲಿಯಲ್ಲಿ ನಡೆದ ಜಾಗೃತಿ ಸಮಾವೇಶದಲ್ಲಿ  ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದರು  | Kannada Prabha

ಸಾರಾಂಶ

ವಕ್ಫ್ ಮಂಡಳಿ‌ ದೇಶಕ್ಕೆ ಅಂಟಿಕೊಂಡಿರುವ ಕ್ಯಾನ್ಸರ್‌ ಇದ್ದಂತೆ. ಅದನ್ನು ದೇಶದಿಂದ ತೊಲಗಿಸಬೇಕು.

ಕಂಪ್ಲಿ: ವಕ್ಫ್ ಮಂಡಳಿ‌ ದೇಶಕ್ಕೆ ಅಂಟಿಕೊಂಡಿರುವ ಕ್ಯಾನ್ಸರ್‌ ಇದ್ದಂತೆ. ಅದನ್ನು ದೇಶದಿಂದ ತೊಲಗಿಸಬೇಕು ಎಂದು ಬಿಜೆಪಿ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಪಟ್ಟಣದ ಶಾರದಾ ಶಾಲೆ ಆವರಣದಲ್ಲಿ ಶನಿವಾರ ಕಂಪ್ಲಿಯ ನಾಗರಿಕ ಹಿತ ರಕ್ಷಣಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಕ್ಫ್ ಹಠಾವೋ ದೇಶ ಬಚಾವೋ ಜನ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ವಕ್ಫ್ ನಿಂದ ಆಗುತ್ತಿರುವ ಅನ್ಯಾಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಅದನ್ನು ದೇಶದಿಂದ ತೊಲಗಿಸಬೇಕೆಂದು ಆಗ್ರಹಿಸಿ ನಡೆಸಿದ ಮೊದಲ‌ ಹಂತದ ಹೋರಾಟದ ಯಶಸ್ಸಿನ ಬಳಿಕ ಕಂಪ್ಲಿಯಲ್ಲಿ ಎರಡನೇ ಹಂತದ ಹೋರಾಟ ಹಮ್ಮಿಕೊಂಡಿದ್ದೇವೆ. ದೇಶದಲ್ಲಿ ಮೊದಲ ಸ್ಥಾನದಲ್ಲಿ ಭಾರತೀಯ ಸೇನೆಯ ಆಸ್ತಿ. ಎರಡನೇ ಸ್ಥಾನದಲ್ಲಿ ರೈಲ್ವೆ ಆಸ್ತಿ, ಬಿಟ್ಟರೆ ಮೂರನೇ ಅತಿದೊಡ್ಡ ಸ್ಥಾನದಲ್ಲಿರುವುದು ವಕ್ಫ್‌ ಆಸ್ತಿಯಾಗಿದೆ. ಭಾರತವನ್ನು ಜಾತಿ ಆಧಾರದಲ್ಲಿ ಒಡೆಯಲಾಗುತ್ತಿದ್ದು, ನಾವೆಲ್ಲ ಹಿಂದೂಗಳು ಜಾತಿ ಬೇಧ ಬಿಟ್ಟು ಒಗ್ಗಟ್ಟಾಗಬೇಕು. ಗಾಂಧೀಜಿಯವರಿಗೆ ಮಕ್ಕಳಿರಲಿಲ್ಲ. ಜಿನ್ನಾರನ್ನು ಪಾಕಿಸ್ತಾನ ಪ್ರಧಾನಿಯನ್ನಾಗಿ, ಭಾರತದಲ್ಲಿ ನೆಹರು ಅವರನ್ನು ಪ್ರಧಾನಿ ಮಾಡಿದ್ರು.

ಅಂಬೇಡ್ಕರ್ ಅಂದ್ರೆ ಬರೀ ದಲಿತರಿಗೆ, ಹಿಂದುಳಿದವರಿಗೆ ಮೀಸಲಾತಿ ನೀಡಿದವರು. ಹಿಂದೂ ವಿರೋಧಿ ಎಂದು ಮಾತನಾಡುತ್ತಾರೆಯೇ ಹೊರತು ಅವರ ಬಗ್ಗೆ ಯಾರಿಗೂ ಸರಿಯಾಗಿ ಗೊತ್ತಿಲ್ಲ. ಅಂಬೇಡ್ಕರ್ ಅವರಿಗೆ ದ್ರೋಹ ಬಗೆದವರು ಕಾಂಗ್ರೆಸ್ಸಿಗರು. ಅದಕ್ಕೆ ಕಾಂಗ್ರೆಸ್ ಎನ್ನುವುದು ಉರಿಯುತ್ತಿರುವ ಮನೆಯಾಗಿದೆ. ಜಾತಿ ಆಧಾರದಲ್ಲಿ ದೇಶ ಒಡೆಯೋದಾದ್ರೆ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಹೇಳಿದರು.

ಮುಸ್ಲಿಮರು ಯಾರನ್ನೂ ಭಾಯಿ ಭಾಯಿ ಎಂದು ಒಪ್ಪಿಕೊಳ್ಳಲ್ಲ. ನೀವು ಮಾತ್ರ ಭಾಯಿ ಭಾಯಿ ಎನ್ನುತ್ತೀರಾ? ಕಾಂಗ್ರೆಸ್ ಸರ್ಕಾರಕ್ಕೆ ಮತ ಹಾಕಿದ ಲಿಂಗಾಯತರು, ದಲಿತರು ಭಾಯಿ ಭಾಯಿ ಅಲ್ಲ ಕೇವಲ‌ ಜಮೀರ್ ಭಾಯಿ ಭಾಯಿ ಆಗಿದ್ದಾರೆ. ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಸಾಬ್ರು ಆಗ್ತಿನಿ ಅಂತಾರೆ. ಸಂಗೊಳ್ಳಿ ರಾಯಣ್ಣ ಆಗಲ್ಲ ಅಂತಾರೆ. ನನಗೆ ಮುಂದಿನ ಜನ್ಮ ಅನ್ನೋದು ಇದ್ದರೆ ನಾನು ದಲಿತನಾಗಲಿ, ಲಿಂಗಾಯತನಾಗಲಿ, ವಾಲ್ಮೀಕಿಯಾಗಲಿ ಅಥವಾ ಯಾವ ಜಾತಿಯವನೇ ಆಗಿರಲಿ ಹಿಂದೂ ಆಗಿಯೇ ಹುಟ್ಟುತ್ತೇನೆ ಹೊರತು, ತಪ್ಪಿಯೂ ಮುಸ್ಲಿಂ ಆಗಲ್ಲ ಎಂದರು.

ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಪಕ್ಕ ಮುಸ್ಲಿಮರೇ ಕೂಡ್ತಾರೆ. ನಾನು ಬಂದರೆ ಕೋಮು ಗಲಭೆ ಆಗುತ್ತೆ ಅಂತ ಹೇಳಿ ಪ್ರೆಸ್ ಮೀಟ್ ಮಾಡಿದ ಶಾಸಕರು, ನಿಮ್ಮದೇ ವಾಲ್ಮೀಕಿ ಹಣ ಹೊಡೆದವರ ಬಗ್ಗೆ ಯಾವತ್ತಾದ್ರೂ ಧ್ವನಿ ಎತ್ತಿದ್ದೀರಾ ಎಂದು ಪ್ರಶ್ನಿಸಿದರು.

ನಾವು ಬಂದಿರುವುದು ವಕ್ಫ್ ವಿರೋಧಿ ಕಾರ್ಯಕ್ರಮ ಉದ್ಘಾಟನೆಗೆ. ನಮ್ಮ ಗುಂಪು ಭಿನ್ನಮತೀಯರ ಗುಂಪಲ್ಲ. ಹಿಂದೂಗಳ ರಕ್ಷಣೆಗೆ ನಿಂತಿರುವ ನಿಷ್ಠಾವಂತ ಗುಂಪು ನಮ್ಮದು ಎಂದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ