ರೈತರ ಜಮೀನಿಗೆ ವಕ್ಫ್ ಹೆಸರು: ಜಿಲ್ಲಾ ಬಿಜೆಪಿ ಪ್ರತಿಭಟನೆ

KannadaprabhaNewsNetwork | Published : Nov 6, 2024 12:39 AM

ಸಾರಾಂಶ

ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಪೂರ್ವಜರಿಂದ ಬಂದ ಜಮೀನುಗಳನ್ನು ಅನುಭವಿಸುತ್ತಿದ್ದ ರೈತರಿಗೆ ವಕ್ಫ್ ಮಂಡಳಿಯು ವಕ್ಪ್‌ ಆಸ್ತಿ ಎಂದು ನೋಟಿಸ್ ನೀಡುತ್ತಿರುವುದನ್ನು ಖಂಡಿಸಿ ಮಂಗಳವಾರ ನಗರದಲ್ಲಿ ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಪೂರ್ವಜರಿಂದ ಬಂದ ಜಮೀನುಗಳನ್ನು ಅನುಭವಿಸುತ್ತಿದ್ದ ರೈತರಿಗೆ ವಕ್ಫ್ ಆಸ್ತಿ ಎಂದು ನೋಟಿಸ್ ನೀಡುತ್ತಿರುವುದನ್ನು ಖಂಡಿಸಿ ಮಂಗಳವಾರ ನಗರದಲ್ಲಿ ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಪ್ರತಿಭಟನಾ ಮೆರವಣಿಗೆ ಹೊರಟು, ಭುವನೇಶ್ವರಿ ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ, ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನದ ಆವರಣ ತಲುಪಿ, ಮೆರವಣಿಯುದ್ದಕ್ಕೂ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹಮದ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಜಿಲ್ಲಾಡಳಿತ ಭವನದ ಆವರಣದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದ ನಂತರ, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಅವರಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನಕುಮಾರ್, ಮುಖಂಡರಾದ ನಿಜಗುಣರಾಜು, ಎಂ.ರಾಮಚಂದ್ರು, ನೂರೊಂದುಶೆಟ್ಟಿ, ಜಿಲ್ಲಾ ಉಸ್ತುವಾರಿ ಭರತೇಶ್ ಕಾಂತಿ, ಸಾಮರಸ್ಯದ ನಾಡಾಗಿದ್ದ ರಾಜ್ಯವನ್ನು ಕಾಂಗ್ರೆಸ್ ಸರ್ಕಾರ ವಕ್ಫ್ ಮಂಡಳಿಯ ಮೂಲಕ ಅತ್ಯಂತ ಆತಂಕದ ಸ್ಥಿತಿಗೆ ತಳ್ಳುತ್ತಿದೆ ಎಂದು ಆರೋಪಿಸಿದರು, ಕೇಂದ್ರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕವನ್ನು ಮಂಡಿಸಿದೆ. ವಕ್ಫ್ ಬೋರ್ಡ್ ತನ್ನ ಕರಾಳ ಕೈಚಳಕವನ್ನು ಮಾಡುವ ಮೂಲಕ ಇಡೀ ದೇಶದಲ್ಲಿ ಸಾರ್ವಜನಿಕ ಆಸ್ತಿಯನ್ನು ಕಬಳಿಸುವ ಹುನ್ನಾರಕ್ಕೆ ಕೈಹಾಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಹಾಗೂ ಸಚಿವ ಜಮೀರ್ ಅಹಮದ್ ನೇರವಾಗಿ ಇದಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದರು.ರಾಜ್ಯದ ವಿಜಯಪುರ ಜಿಲ್ಲೆ ಹೊನ್ನಾವರದ ರೈತರ ೧.೫೦೦ ಎಕರೆ ಜಮೀನು ವಕ್ಫ್ ಆಸ್ತಿಯೆಂದು ಘೋಷಿಸಿ ತಹಸೀಲ್ದಾರ್‌ರಿಂದ ಪುಷ್ಟೀಕರಿಸಿ ನೋಟಿಸ್ ನೀಡಲಾಗಿದೆ. ಬೆಂಗಳೂರಿನ ವಿಧಾನಸೌಧವೂ ಸೇರಿದಂತೆ ಹಲವಾರು ಪ್ರಮುಖ ಆಸ್ತಿಗಳು ವಕ್ಫ್‌ಗೆ ಸೇರಿದ್ದು ಎಂದು ಮುಸ್ಲಿಂ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ೧೬೪೯ ಆಸ್ತಿಗಳ ಹಕ್ಕಿಗಾಗಿ ವಕ್ಫ್ ಪ್ರತಿಪಾದಿಸುತ್ತಿದೆ. ಸವಣೂರು ತಾಲೂಕು ಕಡಕೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮಂತ ದೇವಸ್ಥಾನದ ಅತಿಕ್ರಮಣಕ್ಕೆ ವಕ್ಫ್ ಬೋರ್ಡ್ ಮುಂದಾಗಿದೆ.

ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣ ಪಂಚಾಯಿತಿ ಕಾರ್ಯಾಲಯವೂ ವಕ್ಫ್ ಆಸ್ತಿ ಎಂದು ಹಕ್ಕು ಮಂಡಿಸಿದೆ. ಸರಕಾರಿ ಅಧೀನದಲ್ಲಿರುವ ಆಸ್ತಿಗಳನ್ನೇ ತನ್ನದೆಂದು ವಕ್ಫ್ ಬೋರ್ಡ್ ಹೇಳುತ್ತಿದೆ. ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಚಿಕ್ಕಮ್ಮ ಚಿಕ್ಕದೇವಿ ದೇಗುಲಕ್ಕೆ ಸೇರಿದ ೬ ಗುಂಟೆ ಜಮೀನು ವಕ್ಫ್ ಆಸ್ತಿ ಎಂದು ನಮೂದಾಗಿದೆ. ೨೦೦೦ ವರ್ಷ ಇತಿಹಾಸವಿರುವ ಸೋಮನಾಥೇಶ್ವರ ದೇವಾಲಯವೂ ವಕ್ಫ್ ಆಸ್ತಿ ಎಂಬ ಹಕ್ಕು ಪ್ರತಿಪಾದನೆ ವಕ್ಫ್ ಮಂಡಳಿಯಿಂದ ಬರುತ್ತಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಪೂರ್ವಜರಿಂದ ಬಂದ ಜಮೀನುಗಳನ್ನು ಆನುಭವಿಸುತ್ತಿದ್ದ ರೈತರಿಗೂ ತಹಸೀಲ್ದಾರ್‌ನಿಂದ ನೋಟಿಸ್ ನೀಡಲಾಗಿದೆ. ಈಗ ಬಿಜೆಪಿಯ ಒತ್ತಾಯದಿಂದ ಹಿಂಪಡೆಯಲಾಗಿದೆ.ಈ ಜಿಲ್ಲೆಯಲ್ಲೂ ಛತ್ರದ ಹೊಸೂರಿನ ಬಸವರಾಜು ಅವರಿಗೆ ಸೇರಿದ ೫ ಎಕರೆ ಜಮೀನು ವಕ್ಫ್‌ಗೆ ಸೇರಿದ್ದು ಎಂದು ನೋಟೀಸ್ ನೀಡಲಾಗಿದೆ. ಸರ್ಕಾರ ವಿವೇಚನೆಯಿಲ್ಲದೆ ಕೈಗೊಳ್ಳುತ್ತಿರುವ ನಿರ್ಧಾರಗಳಿಂದಾಗಿ ರಾಜ್ಯದ ಅನೇಕ ಆಸ್ತಿಗಳ ವ್ಯಾಜ್ಯ ಬೀದಿಗೆ ಬರುತ್ತಿದೆ. ಈಗಾಗಲೇ ಕಡಕೋಳದಲ್ಲಿ ಎರಡು ಕೋಮುಗಳ ನಡುವೆ ಸಂಘರ್ಷ ಪ್ರಾರಂಭವಾಗಿದೆ. ಇದು ಇಡೀ ರಾಜ್ಯವನ್ನು ವ್ಯಾಪಿಸುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಿಗಳ ಸಭೆ ನಡೆಸಿ ವರ್ಗಾವಣೆ ಪತ್ರದಲ್ಲಿ ವಕ್ಫ್ ಆಸ್ತಿ ಎಂಬುದಾಗಿ ನಮೂದು ಮಾಡದಂತೆ ತಾತ್ಕಾಲಿಕವಾಗಿ ತಡೆ ಹಿಡಿದಿರುವುದು ಕೇವಲ ಚುನಾವಣೆಯ ತಂತ್ರಗಾರಿಕೆ ಎಂದರು.ಜಮೀರ್ ಅಹಮ್ಮದ್ ಅವರನ್ನು ಸಚಿವ ಸ್ಥಾನದಿಂದ ಕೂಡಲೇ ಉಚ್ಛಾಟಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು ಹಾಗೂ ಸ್ಪಷ್ಟನೆ ನೀಡಬೇಕು. ಇನ್ನು ಮುಂದೆ ಯಾವುದೇ ವಕ್ಫ್ ಅದಾಲತ್ ನಡೆಸದಂತೆ ಸರ್ಕಾರಿ ಆದೇಶ ಹೊರಡಿಸಬೇಕು ಹಾಗೂ ಇದಕ್ಕೆ ಸಂಬಂಧಿಸಿದ ಗೆಜೆಟ್ ನೋಟಿಫಿಕೇಶನ್ ಅನ್ನು ಹಿಂಪಡೆಯಬೇಕು. ತಕ್ಷಣ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳದಿದ್ದರೆ ಬಿಜೆಪಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಮಹದೇವಸ್ವಾಮಿ, ಆರ್.ಸುಂದರ್, ನಗರಸಭಾ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ಮಮತಾ, ಜಿಲ್ಲಾಧ್ಯಕ್ಷೆ ಕಮಲಮ್ಮ, ಗೀತಾ, ಜನದನಿ ವೆಂಕಟೇಶ್, ಮಂಗಲ ಶಿವಕುಮಾರ್, ಎ.ಆರ್.ಬಾಬು, ವೇಣುಗೋಪಾಲ್, ಸೂರ್ಯ, ಚಂದ್ರಶೇಖರ್, ಶಿವರಾಜ್, ವಿರಾಟ್ ಶಿವು, ಶಾಂತಮೂರ್ತಿ, ನಟರಾಜ್, ವೀರಭದ್ರಸ್ವಾಮಿ, ಮಲ್ಲೇಶ್, ಬಿ.ಎನ್. ಸುರೇಶ್, ಕೆ.ಆರ್. ಲೋಕೇಶ್, ನಾಗೇಂದ್ರ, ಬಾಲಸುಬ್ರಹ್ಮಣ್ಯಂ, ಮೂರ್ತಿ, ಮಂಜುನಾಥ್, ರಂಗಸ್ವಾಮಿ, ಗೋಪಾಲಕೃಷ್ಣ, ಆರ್. ವಿ.ಮಹದೇವಸ್ವಾಮಿ, ದೊರೆಸ್ವಾಮಿ, ಕಾಡಹಳ್ಳಿ ಕುಮಾರ್, ವಿರೇಂದ್ರ, ಮಂಜು ಭಾಗವಹಿಸಿದ್ದರು.

Share this article