ಕನ್ನಡಪ್ರಭ ವಾರ್ತೆ ಕೊಪ್ಪಳ
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಉಪ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ವಕ್ಫ್ ವಿವಾದ ಹುಟ್ಟು ಹಾಕಿದ್ದಾರೆ. ತಮ್ಮ ಸರ್ಕಾರ ಇದ್ದಾಗ ನೋಟಿಸ್ ಜಾರಿಯಾಗಿದ್ದರೂ ತುಟಿ ಪಿಟಕ್ ಅನ್ನದ ಬಿಜೆಪಿ ನಾಯಕರು ಈಗ ಎದ್ದು ಕುಳಿತಿದ್ದಾರೆ. ಉಪ ಚುನಾವಣೆ ಬಂದಿರುವುದರಿಂದಲೇ ವಕ್ಫ್ ವಿಷಯವನ್ನು ಬಿಜೆಪಿ ನಾಯಕರು ಕೈಗೆತ್ತಿಕೊಂಡಿದ್ದಾರೆ ಎಂದರು.
ವಕ್ಫ್ ಆಸ್ತಿಯ ಕುರಿತು ಸಮಸ್ಯೆಯಾಗಿರುವುದು ಈಗಲ್ಲ ಎನ್ನುವುದು ಗೊತ್ತಿದ್ದರು ಸಹ ಬಿಜೆಪಿ ನಾಯಕರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಆದರೂ ನಮ್ಮ ಸರ್ಕಾರ ವಕ್ಫ್ ಆಸ್ತಿಯ ವಿವಾದವನ್ನು ಬಗೆಹರಿಸುವುದಕ್ಕೆ ಬದ್ಧವಾಗಿದೆ. ರೈತರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವೇ ಇಲ್ಲ. ರೈತರ ಪಹಣಿಯಲ್ಲಿ ವಕ್ಫ್ ಎನ್ನುವ ಹೆಸರು ಬಂದಾಕ್ಷಣ ಭಯಬೇಡ. ಇದನ್ನು ಈಗಾಗಲೇ ಸರಿ ಮಾಡುವ ಕಾರ್ಯವನ್ನು ರಾಜ್ಯ ಸರ್ಕಾರ ಪ್ರಾರಂಭಿಸಿದೆ, ಮುಖ್ಯಮಂತ್ರಿಗಳು, ಸಂಬಂಧಪಟ್ಟ ಸಚಿವರು ಸಹ ಖುದ್ದು ಈ ಕುರಿತು ಉತ್ತರ ನೀಡಿದ್ದಾರೆ ಎಂದರು.ರೈತರ ಪಹಣಿಯಲ್ಲಿ ವಕ್ಫ್ ಎನ್ನುವ ಹೆಸರು ಬಂದಿದ್ದನ್ನು ತೆಗೆಯುವ ಕುರಿತು ಬರುವ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಅಲ್ಲಿಯವರೆಗೂ ರೈತರು ತಾಳ್ಮೆಯಿಂದ ಇರಬೇಕು ಎಂದರು.
ಒಳ ಮೀಸಲಾತಿಯ ಕುರಿತು ರಾಜ್ಯ ಸರ್ಕಾರ ಈಗಾಗಲೇ ಸ್ಪಷ್ಟ ನಿಲುವು ತೆಗೆದುಕೊಂಡಿದೆ. ಈಗಿರುವ ಸದಾಶಿವ ಆಯೋಗದ ವರದಿಯನ್ನು ಬಿಜೆಪಿ ಸರ್ಕಾರವೇ ತಿರಸ್ಕಾರ ಮಾಡಿದೆ. ಹೀಗಾಗಿಯೇ ನಿಖರ ಅಂಕಿ-ಅಂಶಗಳ ಸಂಗ್ರಹಣೆ ಅಗತ್ಯವಾಗಿದ್ದು, ಅದರ ಜಾರಿಗೆ ಬದ್ಧವಾಗಿರುವುದಾಗಿ ಹೇಳಿದರು.
ಯಾವ ಗ್ಯಾರಂಟಿಗಳು ಸಹ ಸ್ಥಗಿತವಾಗುವುದಿಲ್ಲ, ಈಗಾಗಲೇ ಖುದ್ದು ಸಿಎಂ ಅವರೇ ಸ್ವಷ್ಟಪಡಿಸಿದ್ದಾರೆ. ಉಪಮುಖ್ಯಮಂತ್ರಿಗಳು ಹಾಗೆ ಹೇಳಿಯೇ ಇರಲಿಲ್ಲ, ಮಾಧ್ಯಮದಲ್ಲಿ ತಿರುಚಿ ಬಂದಿದೆ. ಅದನ್ನು ಡಿಸಿಎಂ ಸ್ಪಷ್ಟಪಡಿಸಿದ್ದಾರೆ ಎಂದರು.
ತಾಯಿ ಭುವನೇಶ್ವರಿ ದೇವಿಯ ಮೂರ್ತಿ ನಿರ್ಮಾಣ ಹೊಣೆಯನ್ನು ದೆಹಲಿ ಮೂಲದವರಿಗೆ ಕೊಟ್ಟಿರುವುದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ, ಸೂಕ್ತವಾಗಿರುವುದನ್ನು ಪರಿಗಣಿಸಿಯೇ ನೀಡಲಾಗಿದೆ. ನವೆಂಬರ್ ತಿಂಗಳಲ್ಲಿಯೇ ಬರಬೇಕಾಗಿತ್ತು. ಅದಿನ್ನು ಪೂರ್ಣಗೊಂಡಿಲ್ಲ, ಹೀಗಾಗಿ, ಒಂದಷ್ಟು ಸಮಯಬೇಕಾಗುತ್ತದೆ ಎಂದರು.