ಹುಬ್ಬಳ್ಳಿ:
ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇರುವೆಡೆ ವಕ್ಫ್ ಮೂಲಕ ರೈತರ ಆಸ್ತಿ ಕಬಳಿಸಲು ಸಂಚು ನಡೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಇರದಿದ್ದರೆ ವಕ್ಫ್ ಬೋರ್ಡ್ ಮೂಲಕ ಆಸ್ತಿ ಕಬಳಿಸಿ ತಮ್ಮ ತಮ್ಮ ಹೆಸರಿಗೆ ಮಾಡಿಕೊಳ್ಳುವ ತರಾತುರಿಯಲ್ಲಿದ್ದಾರೆ. ಆಸ್ತಿ ಕಬಳಿಸಲು ಆಯಾ ಕಾಂಗ್ರೆಸ್ ಸರ್ಕಾರಗಳೂ ಸಾಥ್ ನೀಡುತ್ತಿರುವಂತಿದೆ. ರೈತರ, ಹಿಂದೂಗಳ, ಬಡ ಮುಸ್ಲಿಮರ ಮತ್ತು ದೇವಸ್ಥಾನಗಳ ಆಸ್ತಿ ವಶಪಡಿಸಿಕೊಳ್ಳಲು ಅದೇನು ಇವರಪ್ಪಂದೇ? ಎಂದು ಜೋಶಿ ಕಿಡಿ ಕಾರಿದರು.
ಅಪರಿಮಿತ ಅಧಿಕಾರ:2013ರಲ್ಲಿ ವಕ್ಫ್‌ಗೆ ಅಪರಿಮಿತವಾದಂತಹ ಅಧಿಕಾರ ಕೊಟ್ಟಿದ್ದಾರೆ. ರೈತರ, ದೇವಸ್ಥಾನಗಳ ಆಸ್ತಿ ವಕ್ಫ್‌ಗೆ ಕೊಡಲು ಇವರ‍್ಯಾರು? ಈ ಬಗ್ಗೆ ತನಿಖೆ ನಡೆಸಬೇಕಿದೆ. 40-50 ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರ ಜಮೀನನ್ನು ವಕ್ಫ್‌ಗೆ ಕೊಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದರು.
ವಕ್ಫ್ ವಿಜಯಪುರದಲ್ಲಿ ರೈತರ ಆಸ್ತಿ ತನ್ನದೆನ್ನುತ್ತಿದೆ. ಅಳ್ನಾವರದಲ್ಲಿ ಪೊಲೀಸ್ ಠಾಣೆ, ಉಪ್ಪಿನಬೆಟಗೇರಿ ಹೀಗೆ ಹಲವೆಡೆ ಹಿಂದೂಗಳ, ರೈತರ, ದೇವಸ್ಥಾನಗಳ ಅಷ್ಟೇ ಅಲ್ಲ ಬಡ ಮುಸ್ಲಿಮರ ಆಸ್ತಿಯನ್ನೂ ತನ್ನದೆನ್ನುತ್ತಿದೆ. ಇದು ರಾಜ್ಯ ಸರ್ಕಾರ ಯಾವ ಮಟ್ಟದಲ್ಲಿ ತುಷ್ಟೀಕರಣದಲ್ಲಿ ತೊಡಗಿದೆ ಎಂಬುದನ್ನು ತೋರಿಸುತ್ತಿದೆ ಎಂದು ಜೋಶಿ ಸರ್ಕಾರದ ವಿರುದ್ಧ ಹರಿಹಾಯ್ದರು.ಅಲ್ಲಾ ಹೆಸರಲ್ಲಿ ಬೋಗಸ್:
ವಕ್ಫ್ ಆಸ್ತಿ ಕಬಳಿಸಲು ಅಲ್ಲಾನನ್ನು ಮುಂದಿಡುತ್ತಿದೆ. ಆದರೆ, ಅಲ್ಲಾ ಆಸ್ತಿ ಕಬಳಿಸಿ ಎಂದಿಲ್ಲ. ಅಲ್ಲಾನ ಹೆಸರಲ್ಲಿ ಎಲ್ಲಾ ಬೋಗಸ್ ಮಾಡುತ್ತಿದ್ದಾರೆ. ದೇಶದಲ್ಲಿ ಇಂತಹ ಅವಾಂತರ ತಡೆಯಲು ಕೇಂದ್ರ ಸರ್ಕಾರ ವಕ್ಫ್ ಕಾಯ್ದೆ ತಿದ್ದುಪಡಿಗೆ ಮುಂದಾದರೆ ಇದನ್ನೇಕೆ ಕಾಂಗ್ರೆಸ್ ಬೆಂಬಲಿಸುತ್ತಿಲ್ಲ? ಎಂದು ಪ್ರಶ್ನಿಸಿದ ಜೋಶಿ, ರಾಜ್ಯ ಸರ್ಕಾರ ಕೂಡಲೇ ನೋಟಿಸ್ ನೀಡದಂತೆ ವಕ್ಫ್‌ಗೆ ಆದೇಶ ನೀಡಬೇಕು ಮತ್ತು ಕೇಂದ್ರ ಜಾರಿ ತರಲು ಉದ್ದೇಶಿಸಿರುವ ವಕ್ಫ್ ಕಾಯ್ದೆ ತಿದ್ದುಪಡಿಯನ್ನು ಬೆಂಬಲಿಸಬೇಕು ಎಂದು ಜೋಶಿ ಒತ್ತಾಯಿಸಿದರು.ಕಾಂಗ್ರೆಸ್‌ನಿಂದ ಹಣದ ಹೊಳೆ:
ವಿಧಾನಸಭೆ ಉಪ ಚುನಾವಣೆಯಲ್ಲಿ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಹಣದ ಹೊಳೆಯನ್ನೇ ಹರಿಸುತ್ತಿದೆ. ಆದಾಗ್ಯೂ ಎನ್‌ಡಿಎ ನೇತೃತ್ವದ ಅಭ್ಯರ್ಥಿಗಳು ಮೂರೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.ಕಾಂಗ್ರೆಸ್‌ನವರು ಬಹಳ ಭ್ರಮನಿರಸರಾಗಿ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸರ್ಕಾರ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಸರ್ಕಾರಿ ಮಷಿನರಿ ಉಪಯೋಗಿಸಿಕೊಂಡು ದುಡ್ಡು ಹಂಚುತ್ತಿದ್ದಾರೆ. ಆದರೆ, ಇದನ್ನೆಲ್ಲ ಮೀರಿ ಎನ್‌ಡಿಎ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದರು.
ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ಎಲ್ಲೆಡೆಯೂ ಕಾಂಗ್ರೆಸ್ ಮಂತ್ರಿ ಮಂಡಲವೇ ಬೀಡು ಬಿಟ್ಟಿದೆ. ಇದರಿಂದಲೇ ಗೊತ್ತಾಗುತ್ತದೆ, ಸೋಲುವ ಭಯದಲ್ಲಿ ಏನೇನು ತಂತ್ರ ಹೆಣೆದಿದ್ದಾರೆ. ಅದೆಷ್ಟು ಹಣ ಚೆಲ್ಲುತ್ತಿದ್ದಾರೆಂದು ಎಂದು ಜೋಶಿ ವ್ಯಂಗ್ಯವಾಡಿದರು.ಮುಖ್ಯಮಂತ್ರಿ ಬದಲಾವಣೆ:
ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಹೇಳಿಕೆಗೆ ಉತ್ತರಿಸಿ, ಈ ಚುನಾವಣೆಯಿಂದ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದನ್ನು ಹೇಳಲು ಆಗುವುದಿಲ್ಲ. ಆದರೆ, ಸಿದ್ದರಾಮಯ್ಯ ಬದಲಾವಣೆಯ ತೀರ್ಮಾನವಾದಂತಿದೆ. ಕಾಂಗ್ರೆಸ್ ಹೈಕಮಾಂಡ್ ಹಿಡಿದಿದೆಯೆಂದು ಸಿದ್ದರಾಮಯ್ಯ ಇಂದಿಗೂ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದಾರೆ ಎಂದರು.ಲೋಕಾಯುಕ್ತವಲ್ಲ ಕಾಂಗ್ರೆಸ್‌ಯುಕ್ತ:
ಮುಡಾದಲ್ಲಿ ಬಹುದೊಡ್ಡ ಹಗರಣವಾಗಿದೆ. ಇಷ್ಟಾದರೂ ಒಬ್ಬರನ್ನು ಬಂಧಿಸಿಲ್ಲ. ಇದನ್ನೆಲ್ಲ ಗಮನಿಸಿದರೆ ಲೋಕಾಯುಕ್ತ ರಾಜ್ಯ ಸರ್ಕಾರಕ್ಕೆ ಪೂರ್ತಿಯಾಗಿ ಶರಣಾಗಿದೆ. ಲೋಕಾಯುಕ್ತವಲ್ಲ, ಇದು ಕಾಂಗ್ರೆಸ್ ಯುಕ್ತದಂತಾಗಿದೆ. ಲೋಕಾಯುಕ್ತ ನ್ಯಾಯಾಧೀಶರು ಸರಿ ಇರಬಹುದು. ಆದರೆ, ಅಧಿಕಾರಿಗಳನ್ನು ನಿಯೋಜನೆ ಮಾಡಿದವರು ಇವರೆ. ಹೀಗಾಗಿ ಮುಖ್ಯಮಂತ್ರಿ ಕುಟುಂಬಕ್ಕೆ ಸಂಪೂರ್ಣವಾಗಿ ಅನುಕೂಲ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದರು.