ಕೊಡವಾಮೆ ಬೆಳವಣಿಗೆಗೆ ಸಮಯ, ಸೇವೆಯನ್ನು ಮೀಸಲಿಡಿ: ಮಚ್ಚಮಾಡ ವಿಜಯ್

KannadaprabhaNewsNetwork | Published : Oct 29, 2024 1:05 AM

ಸಾರಾಂಶ

ಚಂಗ್ರಾಂದಿ ಪತ್ತಾಲೋದಿ ಕಾರ್ಯಕ್ರಮದ 9ನೇ ದಿನದ ಸಮಾರಂಭ ನಡೆಯಿತು. ವಿವಿಧ ಕೊಡವ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಮ್ಮ ಜನಾಂಗದ ಆಚಾರ ವಿಚಾರ ಸಂಸ್ಕೃತಿಯ ಬೆಳವಣಿಗೆ ಹಾಗೂ ಸಂರಕ್ಷಣೆಗೆ ಜನಾಂಗದ ಪ್ರತಿಯೊಬ್ಬರು ಸಮಯ, ಸೇವೆ ಹಾಗೂ ಆರ್ಥಿಕ ನೆರವನ್ನು ಮೀಸಲಿಡಬೇಕು ಎಂದು ಶ್ರೀಮಂಗಲ ಕೊಡವ ಸಮಾಜದ ಕಾರ್ಯದರ್ಶಿ ಮಚ್ಚಮಾಡ ವಿಜಯ್ ಹೇಳಿದರು.

ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆಯುತ್ತಿರುವ ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮದ 9ನೇ ದಿನದ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ದೇವರಿಗೆ ಭಂಡಾರ ಹಾಕುವಂತೆ ಕೊಡವಾಮೆಗೆ ನಮ್ಮ ಕೊಡುಗೆ ನೀಡಬೇಕು ಎಂದರು.

ಮತ್ತೋರ್ವ ಮುಖ್ಯ ಅತಿಥಿ ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು ಮಾತನಾಡಿ ಕೊಡವ ಸಮಾಜಗಳು ಮದುವೆ ಮಾಡುವ ಕಲ್ಯಾಣ ಮಂಟಪ ಎನ್ನುವ ಅಪವಾದವನ್ನು ಟಿ. ಶೆಟ್ಟಿಗೇರಿ ಕೊಡವ ಸಮಾಜ ಪತ್ತಾಲೋದಿ ಕಾರ್ಯಕ್ರಮ ಮಾಡುವ ಮೂಲಕ ದೂರಸರಿಸಿದೆ. ಯಾವುದೇ ಸರ್ಕಾರಗಳು ಕೊಡವರಿಗೆ ಯಾವುದೇ ಕೊಡುಗೆ ನೀಡಿದರೂ ಕೊಡವರ ಆಂತರಿಕ ಶಕ್ತಿಯಾದ ನೆಲ್ಲಕ್ಕಿ ನಡುಬಾಡೆ, ಮಂದ್, ಐನ್ ಮನೆ ಕೈಮಡಗಳನ್ನು ರಕ್ಷಿಸಿ ಅದರ ಆಚರಣೆಯನ್ನು ಸರಿಯಾಗಿ ಮಾಡಿದಾಗ ಜನಾಂಗಕ್ಕೆ ಒಳಿತಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಟಿ. ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೈಬುಲಿರ ಹರೀಶ್ ಅಪ್ಪಯ್ಯ ಅವರು ಎಂಟು ವರ್ಷಗಳ ಹಿಂದೆ ಆರಂಭಿಸಿದ ಈ ಕಾರ್ಯಕ್ರಮ ಯಶಸ್ಸಿನ ಹಾದಿಯಲ್ಲಿ ಜನಾಂಗದ ಸಹಕಾರ ದಿಂದ ನಡೆಯುತ್ತಿದೆ. ನಾವು ಪತ್ತಲೋದಿ ಕಾರ್ಯಕ್ರಮಕ್ಕೆ ಪೀಠಿಕೆ ಹಾಕಿದ್ದೇವೆ. ಇದನ್ನು ಸೂರ್ಯ ಚಂದ್ರ ಇರುವವರೆಗೆ ನಡೆಸಿಕೊಂಡು ಹೋಗುವ ಜವಾಬ್ದಾರಿ ಜನಾಂಗದ ಪ್ರತಿಯೊಬ್ಬರದಾಗಿದೆ. ಬಾಯಿಯಲ್ಲಿ ಕೊಡವಾಮೆ ಬಗ್ಗೆ ಮಾತನಾಡಬಹುದು ಅವುಗಳನ್ನು ಆಚರಣೆ ಹಾಗೂ ಅನುಷ್ಠಾನಕ್ಕೆ ತರಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಶ್ರೀಮಂಗಲ ಕೊಡವ ಸಮಾಜ ಪೊಮ್ಮಕ್ಕಡ ಕೂಟದಿಂದ ವಿವಿಧ ಕೊಡವ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.

ವೇದಿಕೆಯಲ್ಲಿ ನೆಲ್ಲೀರ ನೀನಾ ಪೂಣಚ್ಚ, ಕಳ್ಳಿಚಂಡ ದೀನಾ ಉತ್ತಪ್ಪ ವೇದಿಕೆಯಲ್ಲಿ ಹಾಜರಿದ್ದರು.

ಚೆಟ್ಟಂಡ ಲತಾ ಚರ್ಮಣ ಪ್ರಾರ್ಥಿಸಿದರು. ಬಾದುಮಂಡ ವಿಷ್ಣು ಕಾರ್ಯಪ್ಪ ಸ್ವಾಗತಿಸಿ ಉಪಾಧ್ಯಕ್ಷ ಮಚ್ಚಮಾಡ ಸುಮಂತ್ ವಂದಿಸಿದರು. ನಿರ್ದೇಶಕರಾದ ಚಂಗುಲಂಡ ಅಶ್ವಿನಿ ಸತೀಶ್, ಮುಕ್ಕಾಟಿರ ಸಂದೀಪ್, ಕರ್ನಂಡ ರೂಪ ದೇವಯ್ಯ, ಚಂಗುಲಂಡ ಸತೀಶ್, ಕೋಟ್ರಮಾಡ ಸುಮಂತ್ ಮಾದಪ್ಪ ಕಾರ್ಯಕ್ರಮ ನಿರ್ವಹಿಸಿದರು.

Share this article