ವಕ್ಫ್ ಆಸ್ತಿ ಕಬಳಿಕೆ ಹುನ್ನಾರ, ಕ್ರಮಕ್ಕೆ ಆಗ್ರಹ

KannadaprabhaNewsNetwork |  
Published : Jan 10, 2024, 01:45 AM IST
09ಕೆಪಿಆರ್ಸಿಆರ್04: ಮನ್ಸೂರ್ ಬೇಗ್ | Kannada Prabha

ಸಾರಾಂಶ

ಜಹಿರಾಬಾದ್ ಕಾಲನಿಯ ಈರಣ್ಣ ವೃತ್ತದಲ್ಲಿರುವ ವಕ್ಫ್ ಸೇರಿದ ದರ್ಗಾ ಮತ್ತು ಮಸೀದಿ ಆಸ್ತಿಯನ್ನು ಹಿಂದಿನ ವಕ್ಫ್ ಅಧಿಕಾರಿ ಜತೆ ಕೆಲವರು ದುರ್ಬಳಕೆ ಮಾಡಿಕೊಳ್ಳಲು ಹುನ್ನಾರ ನಡೆದಿದೆ.

ರಾಯಚೂರು: ನಗರದ ಜಹಿರಾಬಾದ್ ಕಾಲನಿಯ ಈರಣ್ಣ ವೃತ್ತದಲ್ಲಿರುವ ವಕ್ಫ್ ಸೇರಿದ ದರ್ಗಾ ಮತ್ತು ಮಸೀದಿ ಆಸ್ತಿಯನ್ನು ಹಿಂದಿನ ವಕ್ಫ್ ಅಧಿಕಾರಿ ಜತೆ ಕೆಲವರು ದುರ್ಬಳಕೆ ಮಾಡಿಕೊಳ್ಳಲು ಹುನ್ನಾರ ನಡೆಸಿದ್ದು, ಕೂಡಲೇ ಇವರ ವಿರುದ್ಧ ಕ್ರಮಜರುಗಿಸಬೇಕು ಎಂದು ದರ್ಗಾ-ಎ-ಮಸ್ಜಿದ್ ನೂರ್ ಷಾ ಆಸ್ತಿ ಉಳಿಸಿ ಹೋರಾಟ ಸಮಿತಿ ಸಂಚಾಲಕ ಮನ್ಸೂರ್ ಬೇಗ್ ಆಗ್ರಹಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿ ವಕ್ಫ್ ಆಸ್ತಿಯು 1 ಎಕರೆ 11 ಗುಂಟೆ (55,539 ಚದರಡಿ) ಇರುವುದಾಗಿ ಮೂಲ ದಾಖಲೆಗಳಲ್ಲಿದೆ. ಆದರೆ, ಹಿಂದಿನ ವಕ್ಫ್ ಅಧಿಕಾರಿ ಸೈಯದ್ ಉಮರ್ ಅಹ್ಮದ್, ಮಹ್ಮದ್ ಅಲಿ ಮೌಲಾ ಅಲಿ ಇವರು ಸೇರಿಕೊಂಡು ಕೇವಲ 9 ಸಾವಿರ ಚದರಡಿಗೆ ಮಾತ್ರ ಇ ಖಾತಾ ಮಾಡಿಸಲು ನಗರಸಭೆಗೆ 201ರ ಡಿ.27ರಂದು ಅರ್ಜಿ ಸಲ್ಲಿಸಿದ್ದಾರೆ. ಹಾಗಾದರೆ ಅಲ್ಲಿರುವ ಉಳಿದ ಜಾಗ ಯಾರಿಗೆ ಸಂಬಂಧಿಸಿದ್ದು ಎಂದು ಪ್ರಶ್ನಿಸಿದರು.

ಉಳಿದ ಜಾಗ ತಮ್ಮ ಹೆಸರಿಗೆ ಮಾಡಿಕೊಳ್ಳಲು ಹುನ್ನಾರ ನಡೆಸಿದ್ದು, ಇದಕ್ಕೆ ವಕ್ಫ್ ಅಧಿಕಾರಿ ಬೆಂಬಲ ನೀಡಿರುವುದು ಬೇಲಿಯೇ ಎದ್ದು ಹೊಲ ಮೇದಂತೆ ಆಗಿದೆ. ಮಹ್ಮದ್ ಅಲಿ ಮೌಲಾ ಅಲಿ ಎಂಬುವವರು ಮೊದಲು ಸರ್ಕಾರಿ ಹುದ್ದೆಯಲ್ಲಿದ್ದು, ಸ್ವಯಂ ನಿವೃತ್ತಿ ಪಡೆದಿದ್ದಾರೆ. ಈತ ದರ್ಗಾದಲ್ಲಿ ತನ್ನ ಸಂಬಂಧಿಕರನ್ನು ಕೆಲಸಕ್ಕೆ ಸೇರಿಸಿ ಆಸ್ತಿ ಕಬಳಿಸುವ ಹುನ್ನಾರ ನಡೆಸಿದ್ದಾನೆ. ಇ-ಖಾತಾಗೆ ಸಲ್ಲಿಸಿದ ಅರ್ಜಿ ಆಧಾರದಡಿ ಇಡೀ ಆಸ್ತಿಯ ಮರುಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಸಂಬಂಧಿಸಿದವರಿಗೆ ದೂರು ಸಲ್ಲಿಸಿದ್ದರೂ ಸಹ ಯಾವುದೇ ರೀತಿಯ ಕ್ರಮವಾಗುತ್ತಿಲ್ಲ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ವಕ್ಫ್ ಆಸ್ತಿ ರಕ್ಷಣೆಗೆ ಮುಂದಾಗಬೇಕು. ಇಲ್ಲದೇ ಇದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಚಾಲಕರಾದ ಗುಲಾಂ ರಸೂಲ್, ಖಾಜಾ ಕರೀಂ, ಮಾಸೂಮ್, ಮುಜೀಬ್, ಮಹ್ಮದ್ ಭಾಯ್ ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ