ಯುದ್ಧ ಮಧ್ಯಪ್ರಾಚ್ಯದಲ್ಲಿ, ಬಿಸಿ ಇಲ್ಲಿ!

KannadaprabhaNewsNetwork |  
Published : Mar 14, 2026, 02:00 AM IST
ಮಾವಿನಹಣ್ಣು | Kannada Prabha

ಸಾರಾಂಶ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ರಾಜ್ಯದಲ್ಲಿ ವಾಣಿಜ್ಯ ಸಿಲಿಂಡರ್‌ ಕೊರತೆ ಎದುರಾಗಿದ್ದು, ಹೋಟೆಲ್‌ಗಳು, ದೇವಾಲಯಗಳು ಕಟ್ಟಿಗೆ ಒಲೆಯ ಮೊರೆ ಹೋಗಿವೆ. ಆಟೋ ಗ್ಯಾಸ್‌ ಸಿಗದೆ ಆಟೋ ಚಾಲಕರು ಪರದಾಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ರಾಜ್ಯದಲ್ಲಿ ವಾಣಿಜ್ಯ ಸಿಲಿಂಡರ್‌ ಕೊರತೆ ಎದುರಾಗಿದ್ದು, ಹೋಟೆಲ್‌ಗಳು, ದೇವಾಲಯಗಳು ಕಟ್ಟಿಗೆ ಒಲೆಯ ಮೊರೆ ಹೋಗಿವೆ. ಆಟೋ ಗ್ಯಾಸ್‌ ಸಿಗದೆ ಆಟೋ ಚಾಲಕರು ಪರದಾಡುವಂತಾಗಿದೆ. ಮಾವು, ಏಲಕ್ಕಿ ರಫ್ತಿಗೂ ತೊಂದರೆ ಎದುರಾಗಿದೆ. ಪ್ರೊಪೈನ್‌ ಗ್ಯಾಸ್‌ ಇಲ್ಲದೆ ಟೈಲ್ಸ್‌ ಫ್ಯಾಕ್ಟರಿ ಬಂದ್‌ ಆಗುವ ಸಂಕಷ್ಟ ಎದುರಾಗಿದೆ. ಈ ಮಧ್ಯೆ, ಯುದ್ಧದ ಬಿಸಿ ಸಾಮಾನ್ಯ ಗ್ರಾಹಕರಿಗೂ ತಟ್ಟಿದ್ದು, ಇಳಕಲ್‌, ರಾಯಚೂರು, ಕಾರವಾರ ಸೇರಿ ಹಲವೆಡೆ ಅಡುಗೆ ಅನಿಲಕ್ಕಾಗಿ ಗ್ಯಾಸ್‌ ಏಜೆನ್ಸಿಗಳ ಮುಂದೆ ಗ್ರಾಹಕರು ‘ಕ್ಯೂ’ ನಿಲ್ಲುತ್ತಿದ್ದಾರೆ.

+++

ಮಾವು ರಫ್ತಿಗೆ ಯುದ್ಧದ ಕರಿ ನೆರಳುಒಂದು ದಶಕದಿಂದ ಗಲ್ಫ್‌ ದೇಶಗಳಲ್ಲಿ ಉತ್ತಮ ಬೇಡಿಕೆ ಸೃಷ್ಟಿಸಿದ್ದ ಧಾರವಾಡ ಅಫೋಸ್‌ ಎಂದೇ ಹೆಸರಾಗಿರುವ ಅಲ್ಫಾನ್ಸೋ ಮಾವಿನ ರಫ್ತಿಗೆ ಯುದ್ಧ ಕರಿ ನೆರಳು ಚೆಲ್ಲಿದೆ.

ಮುಂದಿನ 15 ದಿನಗಳಲ್ಲಿ ಮಾವಿನ ಋತು ಪ್ರಾರಂಭವಾಗಲಿದ್ದು, ಉತ್ತಮ ಗುಣಮಟ್ಟದ ಅಲ್ಫಾನ್ಸೋ ಮಾವನ್ನು ಏಪ್ರಿಲ್‌ ಮೊದಲ ವಾರದಿಂದ ಅಬುಧಾಬಿ, ಇರಾನ್‌, ಯುಎಇ, ಕುವೈತ್‌, ಕತಾರ್‌ ಮತ್ತು ಇರಾಕ್‌ಗೆ ರಪ್ತು ಮಾಡಲು ರೈತರು ಸಿದ್ಧತೆ ನಡೆಸಿದ್ದರು. ಆದರೆ, ಯುದ್ಧದಿಂದಾಗಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ಧಾರವಾಡ, ಬೆಳಗಾವಿ ಮತ್ತು ಹಾವೇರಿಯ ಕೆಲವು ಭಾಗಗಳಲ್ಲಿ ಗುಣಮಟ್ಟದ ಅಲ್ಫಾನ್ಸೋ ತಳಿ ಬೆಳೆಯುತ್ತಿದ್ದು, ಸ್ಥಳೀಯ ಮಾರುಕಟ್ಟೆ ಮಾತ್ರವಲ್ಲದೆ ದೇಶ ಹಾಗೂ ವಿದೇಶಕ್ಕೂ ರಫ್ತಾಗುತ್ತದೆ. ಈ ಪೈಕಿ 10 ವರ್ಷಗಳಿಂದ ಧಾರವಾಡದ ಹಲವು ಮಾವಿನ ತೋಟಗಳಿಂದ ಗಲ್ಫ್‌ ದೇಶ ಮತ್ತು ಯುರೋಪಿಯನ್ ದೇಶಗಳಿಗೂ ಮಾವಿನ ಹಣ್ಣು ರಫ್ತಾಗುತ್ತಿದೆ.

----

ಪ್ರೊಪೈನ್‌ ಗ್ಯಾಸ್‌ ಇಲ್ಲದೆ

ಟೈಲ್ಸ್‌ ಫ್ಯಾಕ್ಟರಿ ಬಂದ್‌

ಕೊಲ್ಲಿ ಯುದ್ಧದ ಎಫೆಕ್ಟ್‌ ಸಿಲಿಂಡರ್‌, ಕಚ್ಚಾ ತೈಲದ ಬಳಿಕ ಇದೀಗ ಟೈಲ್ಸ್‌ ಉದ್ಯಮದ ಮೇಲೂ ಬಿದ್ದಿದೆ. ಹೀಗಾಗಿ ಟೈಲ್ಸ್‌ ಫ್ಯಾಕ್ಟರಿಗಳು ಒಂದೊಂದಾಗಿ ಬಂದ್‌ ಆಗುತ್ತಿದ್ದು, ಕಟ್ಟಡ ಕೆಲಸಗಳಿಗೆ ಕುತ್ತು ಬರುತ್ತಿದೆ. ಭಾರತದಲ್ಲಿ 1,800ಕ್ಕೂ ಅಧಿಕ ಟೈಲ್ಸ್‌ ಫ್ಯಾಕ್ಟರಿಗಳಿದ್ದರೆ ಇದರಲ್ಲಿ ಬರೋಬ್ಬರಿ 1,000ಕ್ಕೂ ಅಧಿಕ ಫ್ಯಾಕ್ಟರಿಗಳು ಇರುವುದು ಗುಜರಾತ್‌ನ ಮೊರಬಿ ಜಿಲ್ಲೆಯಲ್ಲಿ. ಈ ಪ್ರದೇಶದಿಂದಲೇ ಬಹುತೇಕ ರಾಜ್ಯಗಳಿಗೆ ಸರಬರಾಜು ಆಗುತ್ತದೆ. ರಾಜಸ್ಥಾನ, ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ವಿವಿಧೆಡೆ ಫ್ಯಾಕ್ಟರಿಗಳಿದ್ದರೂ ಹೆಚ್ಚು ಫ್ಯಾಕ್ಟರಿ ಹೊಂದಿರುವುದು ಮೊರಬಿ.

ಟೈಲ್ಸ್‌ ತಯಾರಿಕೆಗೆ ಪ್ರಮುಖವಾಗಿ ಬೇಕಿರುವ ಪ್ರೊಪೈನ್‌ ಗ್ಯಾಸ್‌ ಮಧ್ಯ ಪ್ರಾಚ್ಯ ದೇಶಗಳಿಂದ ಬರುತ್ತದೆ. ಇದೀಗ ಅಲ್ಲಿ ಯುದ್ಧ ನಡೆಯುತ್ತಿರುವ ಪರಿಣಾಮ ಪೂರೈಕೆ ಸ್ಥಗಿತವಾಗಿದೆ. ಸಂಗ್ರಹಿಸಿ ಇಟ್ಟುಕೊಂಡಿದ್ದ ಗ್ಯಾಸ್‌ ಖಾಲಿಯಾಗಿದ್ದು ಅರ್ಧಕ್ಕೂ ಹೆಚ್ಚು ಫ್ಯಾಕ್ಟರಿಗಳು ಬಾಗಿಲು ಮುಚ್ಚಿದರೆ, ಬೆರೆಳಣಿಕೆಯಷ್ಟು ಮಾತ್ರ ಉತ್ಪಾದನೆ ಮಾಡುತ್ತಿವೆ. ಇನ್ನೊಂದು ವಾರ ಕಳೆದರೆ ಅವೂ ಸಹ ಬಾಗಿಲು ಮುಚ್ಚಲಿವೆ.

----

ಏಲಕ್ಕಿ ರಫ್ತಿಗೂ ಹೊಡೆತ

ಕೊಡಗು, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರಮುಖವಾಗಿ ಹಸಿರು ಏಲಕ್ಕಿ ಬೆಳೆಯಲಾಗುತ್ತದೆ. ಕೊಡಗಿನ ''''''''ಕೂರ್ಗ್ ಗ್ರೀನ್ ಏಲಕ್ಕಿ'''''''' ಅದರ ವಿಶಿಷ್ಟ ಸುವಾಸನೆ ಮತ್ತು ರುಚಿಗೆ ಹೆಸರುವಾಸಿಯಾಗಿದ್ದು, ಸಾಂಬಾರ ಪದಾರ್ಥಗಳಿಗೆ ಬಳಕೆಯಾಗುತ್ತದೆ. ಸೌದಿ ಅರೇಬಿಯಾ ಮತ್ತು ಇತರ ಗಲ್ಫ್ ದೇಶಗಳಲ್ಲಿ ಭಾರತದ ಉತ್ತಮ ಗುಣಮಟ್ಟದ ಏಲಕ್ಕಿಗೆ ಹೆಚ್ಚಿನ ಬೇಡಿಕೆ ಇದೆ. ಈಗ ನಡೆಯುತ್ತಿರುವ ಯುದ್ಧ ಏಲಕ್ಕಿ ರಫ್ತಿಗೆ ತೊಂದರೆಯಾಗಿದ್ದು, ಬೆಳೆಗಾರರು ಆತಂಕ ಎದುರಿಸುವಂತಾಗಿದೆ.

---

ಮೆಣಸಿನಕಾಯಿ ರಫ್ತಿಗೂ ಸಮಸ್ಯೆ

ಇರಾನ್ ಹಾಗೂ ಇಸ್ರೇಲ್ ಯುದ್ಧದಿಂದಾಗಿ ಗಲ್ಪ್ ರಾಷ್ಟ್ರಗಳಿಗೆ ವಿಶ್ವಪ್ರಸಿದ್ಧ ಬ್ಯಾಡಗಿ ಸೇರಿದಂತೆ ವಿವಿಧೆಡೆ ಬೆಳೆಯುವ ಮೆಣಸಿನಕಾಯಿ ರಪ್ತು ಸಂಪೂರ್ಣವಾಗಿ ನಿಂತು ಹೋಗಿದೆ. ಬೇರೆ ದೇಶಗಳಿಗೆ ಮೆಣಸಿನಕಾಯಿ ರಪ್ತು ಬಾಡಿಗೆ ಕೂಡ ಹೆಚ್ಚಳವಾಗಿದೆ. ಕಳೆದ 15 ದಿನಗಳಿಂದ ರಫ್ತು ನಿಂತು ಹೋಗಿದೆ. ಕೆಲವೆಡೆ ಸರಕುಗಳು ಬಂದರಿನಲ್ಲಿ ಜಾಮ್ ಆಗಿ ನಿಂತಿವೆ.

---

ದೇವಾಲಯಗಳ ಪ್ರಸಾದ

ತಯಾರಿಕೆಗೆ ಒಲೆ ಬಳಕೆ

ಗ್ಯಾಸ್‌ ಕೊರತೆಯಿಂದಾಗಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಗ್ಯಾಸ್‌ಗೆ ಪರ್ಯಾಯವಾಗಿ ಸೌದೆ ಒಲೆಯಲ್ಲಿ ಪ್ರಸಾದ ತಯಾರಿಸಲಾಗುತ್ತಿದೆ. ಈಗಾಗಲೇ ಒಂದು ತಿಂಗಳಿಗೆ ಆಗುವಷ್ಟು ಸಿಲಿಂಡರ್ ಲಭ್ಯವಿದ್ದರೂ, ಮುನ್ನೆಚ್ಚರಿಕೆ ಕ್ರಮವಾಗಿ ಸೌದೆ ಒಲೆಯಲ್ಲಿ ಪ್ರಸಾದ ತಯಾರಿಸಲಾಗುತ್ತಿದೆ. ವಿಜಯನಗರ ಜಿಲ್ಲೆ ಕೊಟ್ಟೂರು ಶ್ರೀಗುರು ಕೊಟ್ಟೂರೇಶ್ವರ ದೇವಸ್ಥಾನದ ಹಿರೇಮಠದಲ್ಲಿಯೂ ಪ್ರಸಾದ ತಯಾರಿಕೆಗೆ ಕಟ್ಟಿಗೆ ಬಳಸಲಾಗುತ್ತಿದೆ. ಶುಕ್ರವಾರ, ಇಲ್ಲಿ ಅಂದಾಜು 700ಕ್ಕೂ ಹೆಚ್ಚು ಭಕ್ತರು, ವಿದ್ಯಾರ್ಥಿಗಳು ಪ್ರಸಾದ (ಪಲಾವು) ಸೇವಿಸಿದರು. ಪ್ರಸಾದ ಸೇವೆ ಮುಂದುವರಿಯಲಿದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಹಾಸನ ಜಿಲ್ಲೆ ಬೇಲೂರಿನ ಚನ್ನಕೇಶವ ಸ್ವಾಮಿ ದೇಗುಲದಲ್ಲೂ ಸಿಲಿಂಡರ್ ಸಮಸ್ಯೆ ಎದುರಾಗಿದ್ದು, ಮಧ್ಯಾಹ್ನದ ಊಟ ನಿಲ್ಲಿಸಲಾಗಿದೆ. ಹೀಗಾಗಿ, ಭಕ್ತರು ಪ್ರಸಾದವಿಲ್ಲದೆ ನಿರಾಸೆಯಿಂದ ಹಿಂದಿರುಗುವಂತಾಗಿದೆ.

ಕೊಪ್ಪಳ, ಕಲಬುರಗಿಗಳಲ್ಲಿ ಹೋಟೆಲ್‌ ಮಾಲಿಕರು ಸಹ ಗ್ಯಾಸ್‌ ಬದಲಿಗೆ ಕಟ್ಟಿಗೆ ಒಲೆಯ ಮೊರೆ ಹೋಗುತ್ತಿದ್ದಾರೆ.

----

ಚನ್ನಪಟ್ಟಣ ಬೊಂಬೆಗೆ

ತಟ್ಟಿದ ಯುದ್ಧದ ಗುದ್ದು

ಯುದ್ಧದ ಬಿಸಿ ವಿಶ್ವವಿಖ್ಯಾತ ಚನ್ನಪಟ್ಟಣದ ಗೊಂಬೆಗಳಿಗೂ ತಟ್ಟಿದ್ದು, ವಿದೇಶಕ್ಕೆ ರಫ್ತಾಗುತ್ತಿದ್ದ ಚನ್ನಪಟ್ಟಣದ ಬೊಂಬೆಗಳಿಗೆ ಬೇಡಿಕೆ ಕುಸಿತ ಕಂಡಿದೆ. ಚನ್ನಪಟ್ಟಣದ ಬೊಂಬೆಗಳು ಅಮೆರಿಕ, ಕೊಲ್ಲಿ ರಾಷ್ಟ್ರಗಳು ಸೇರಿದಂತೆ ಹಲವು ದೇಶಗಳಿಗೆ ರಫ್ತಾಗುತ್ತವೆ. ಚನ್ನಪಟ್ಟಣದ ಕ್ರಾಫ್ಟ್ ಪಾರ್ಕ್‌ನಲ್ಲಿ ತಯಾರಾಗುವ ಶೇ.30ರಷ್ಟು ಮರದ ಗೊಂಬೆಗಳು, ಆಟಿಕೆಗಳು ಹಾಗೂ ಇನ್ನಿತರ ಅಲಂಕಾರಿಕ ಕಲಾಕೃತಿಗಳು ವಿದೇಶಕ್ಕೆ ರಫ್ತಾಗುತ್ತವೆ. ಯುದ್ಧದ ಪರಿಣಾಮ ಬೊಂಬೆಗಳ ವಿದೇಶಿ ಬೇಡಿಕೆ ಕಡಿಮೆಯಾಗಿದ್ದು, ತಯಾರಾದ ಬೊಂಬೆಗಳು ಕಾರ್ಖಾನೆಯಲ್ಲಿಯೇ ಉಳಿಯುವಂತಾಗಿದೆ.

ಏಪ್ರಿಲ್ ಹಾಗೂ ಮೇ ತಿಂಗಳಿಗೆ ಬರಬೇಕಿದ್ದ ವಿದೇಶಿ ಆರ್ಡರ್‌ಗಳು ಬಂದಿಲ್ಲ. ಈಸ್ಟರ್, ದಸರಾ, ಕ್ರಿಸ್ಮಸ್ ಹಬ್ಬಗಳಿಗೆ ವಿದೇಶದಿಂದ ಗ್ರಾಹಕರು ತಮಗೆ ಬೇಕಾಗುವ ಗೊಂಬೆಗಳು ಹಾಗೂ ಮರದ ಆಕೃತಿಗಳನ್ನ ಇಷ್ಟೊತ್ತಿಗೆ ಆರ್ಡರ್ ಮಾಡುತ್ತಿದ್ದರು. ಆದರೆ, ಯುದ್ಧ ಆತಂಕದ ಹಿನ್ನೆಲೆಯಲ್ಲಿ ಆರ್ಡರ್ ವಿಳಂಬ ಆಗಿದೆ. ಈಗಾಗಲೇ ಆರ್ಡರ್ ಮಾಡಿರುವ ಗ್ರಾಹಕರು ತಮ್ಮ ಆರ್ಡರ್ ನ್ನು ತಡೆಹಿಡಿಯುವಂತೆ ತಿಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

---

ಅಡುಗೆ ಅನಿಲಕ್ಕಾಗಿ ‘ಕ್ಯೂ’

ತುಮಕೂರು ಜಿಲ್ಲೆ ಪಾವಗಡ, ಕಾರವಾರ, ಇಳಕಲ್‌, ರಾಯಚೂರು, ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ ಗ್ಯಾಸ್‌ ಕೊರತೆ ಉಂಟಾಗಲಿದೆ ಎಂಬ ಅಪ್ರಪ್ರಚಾರ ನಂಬಿ ಗ್ರಾಹಕರು ಇಲ್ಲಿನ ಗ್ಯಾಸ್ ವಿತರಕರ ಕಚೇರಿಗಳ ಎದುರು ಸಾಲು ಗಟ್ಟಿ ನಿಲ್ಲುತ್ತಿದ್ದಾರೆ. ಆಟೋ ಚಾಲಕರು ಕೂಡ ಆಟೋ ಗ್ಯಾಸ್‌ಗಾಗಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಈ ಹಿಂದೆ ಪೋನ್ ಮೂಲಕ ಬುಕ್ ಮಾಡಿ ಖರೀದಿಸುತ್ತಿದ್ದ ಗ್ರಾಹಕರು, ಕಳೆದ ಎರಡು-ಮೂರು ದಿನಗಳಿಂದ ಪಟ್ಟಣದ ಗ್ಯಾಸ್ ವಿತರಕರ ಅಂಗಡಿಗಳ ಮುಂದೆ ಬೆಳಗ್ಗೆಯಿಂದಲೇ ನಿಂತು ಬುಕಿಂಗ್ ಮಾಡಿಕೊಳ್ಳುತ್ತಿದ್ದಾರೆ.

ಕೋಲಾರದಲ್ಲಿ ಆಟೋ ಚಾಲಕರು ಐದಾರು ಗಂಟೆ ಕ್ಯೂನಲ್ಲಿ ನಿಂತು ಗ್ಯಾಸ್ ಹಾಕಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಂಕ್‌ ಮಾಲಿಕರು ಏಕಾಏಕಿ ಕೇಜಿಗೆ ₹5 ಹೆಚ್ಚಳ ಮಾಡಿದ್ದಾರೆ. ಕೆಜಿಗೆ ₹55ಕ್ಕೆ ಸಿಗುತ್ತಿದ್ದ ಆಟೋ ಗ್ಯಾಸ್, ಈಗ ₹60 ಆಗಿದೆ ಎಂದು ಆಟೋ ಚಾಲಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರಿಯ ರಂಗಭೂಮಿ ಕಲಾವಿದ ರಮೇಶಗೌಡ ಪಾಟೀಲ್ ಇನ್ನಿಲ್ಲ
ಸೋಮವಾರದಿಂದಲೇ ತಂಬಾಕುಖರೀದಿ: ಕೇಂದ್ರ ಸರ್ಕಾರ ಭರವಸೆ