ಸಭೆಯಿಂದ ದಿಢೀರ್ ನಿರ್ಗಮಿಸಿದ ಅಧ್ಯಕ್ಷರು, ಕಾಂಗ್ರೆಸ್ ಸದಸ್ಯರು, ಬಿಜೆಪಿ- ಜೆಡಿಎಸ್ ಸದಸ್ಯರಿಂದ ಧರಣಿ, ಸದಸ್ಯರ ಸಾಲಿನಲ್ಲಿ ಕುಳಿತ ಉಪಾಧ್ಯಕ್ಷ ಅಮೃತೇಶ್
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಗೊಂದಲದ ಗೂಡಾಗಿರುವ ಚಿಕ್ಕಮಗಳೂರು ನಗರಸಭೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರ ನಡುವೆ ಗದ್ದಲ, ಸದಸ್ಯರ ವಾಕ್ ಸಮರ ನಡೆಯಿತು. ಸಭೆಯ ಸಂದರ್ಭದಲ್ಲಿ ಅಧ್ಯಕ್ಷರೊಂದಿಗೆ ಕುಳಿತು ಕೊಳ್ಳಬೇಕಾಗಿದ್ದ ಉಪಾಧ್ಯಕ್ಷ ಅಮೃತೇಶ್ ಅವರು, ಇತರೆ ಸದಸ್ಯರ ಸಾಲಿನಲ್ಲಿ ಕುಳಿತುಕೊಳ್ಳುವ ಜತೆಗೆ ಅಧ್ಯಕ್ಷರ ನಡೆ ವಿರೋಧಿಸಿ ಸದಸ್ಯರು ನಡೆಸಿದ ಧರಣಿಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ರೂಲಿಂಗ್ ಕೊಡದೆ ಅಧ್ಯಕ್ಷರು ದಿಢೀರ್ ಸಭೆಯಿಂದ ಹೊರಗೆ ನಡೆದರು, ಅಧಿಕೃತ ಪ್ರತಿಪಕ್ಷವಾದ ಕಾಂಗ್ರೆಸ್ ಸದಸ್ಯರು ಅಧ್ಯಕ್ಷರನ್ನು ಹಿಂಬಾಲಿಸುವ ಮೂಲಕ ಇಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಗೊಂದಲಕ್ಕೆ ಕಾರಣರಾದರು. ಆಡಳಿತ ಪಕ್ಷವಾಗಿರುವ ಬಿಜೆಪಿ ಸದಸ್ಯರು, ತಮ್ಮದೆ ಪಕ್ಷದಿಂದ ಆಯ್ಕೆಯಾದ ನಗರಸಭಾಧ್ಯಕ್ಷ ವರಸಿದ್ದಿ ವೇಣು ಗೋಪಾಲ್ ನಡೆಯನ್ನು ವಿರೋಧಿಸಿ ಸಭಾಂಗಣದಲ್ಲಿ ಧರಣಿ ಕುಳಿತರು, ಇವರಿಗೆ ಜೆಡಿಎಸ್ ಸದಸ್ಯರು ಬೆಂಬಲ ನೀಡುವ ಜತೆಗೆ ಅಧ್ಯಕ್ಷರು, ಶಾಸಕರ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆ ಹಾಕಿದರು. ಪೂರ್ವ ನಿಗಧಿಯಂತೆ ಬೆಳಿಗ್ಗೆ 11.30 ಕ್ಕೆ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗಬೇಕಾಗಿತ್ತು. ಆದರೆ, ಸುಮಾರು 20 ನಿಮಿಷಗಳ ಕಾಲ ತಡವಾಗಿ ಅಂದರೆ, ಶಾಸಕ ಎಚ್.ಡಿ. ತಮ್ಮಯ್ಯ ಬಂದ ನಂತರ ಸಭೆ ಆರಂಭವಾಯಿತು. ಹಿಂದಿನ ಸಭೆಯ ನಡವಳಿ ಓದಿ ದಾಖಲು ಮಾಡುವ ಸಂದರ್ಭದಲ್ಲಿ ನಗರಸಭೆ ಸದಸ್ಯ ಟಿ. ರಾಜಶೇಖರ್ ಮಾತನಾಡಿ, ಪ್ಲೆಕ್ಸ್ ಹಾಕಲು ನಗರಸಭೆ ಸಾರ್ವಜನಿಕರ ಹಣ ಬಳಕೆ ಮಾಡಿಕೊಳ್ಳುತ್ತಿದೆ. ವರಮಾನಗಿಂತ ಖರ್ಚು ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ರೀತಿ ಖರ್ಚಿಗೆ ಕಡಿವಾಣ ಹಾಕಬೇಕೆಂದು ಸಲಹೆ ನೀಡಿದರು.ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಕಳೆದ ಸಭೆಯಲ್ಲಿ ಉದ್ದಿಮೆ ಪರವಾನಗಿ ಬಗ್ಗೆ ಚರ್ಚೆ ನಡೆಸಿ ಪರವಾನಗಿ ಶುಲ್ಕ ಕಡಿತಗೊಳಿಸುವಂತೆ ತಿಳಿಸಲಾಗಿತ್ತು. ಆದರೆ, ಈವರೆಗೆ ಜಾರಿಗೆ ಬಂದಿಲ್ಲ, ಉದ್ದಿಮೆ ಪರವಾನಗಿ ಶುಲ್ಕವನ್ನು ಈ ಹಿಂದೆ ಎಷ್ಟಿತ್ತೋ, ಅದರ ಮೇಲೆ ಶೇ. 10 ರಿಂದ ಶೇ. 15 ರಷ್ಟು ಮಾತ್ರ ಏರಿಕೆ ಮಾಡಬೇಕು. ಇಲ್ಲದೆ ಹೋದರೆ ಯಾರೂ ಕೂಡ ಲೈಸನ್ಸ್ ಪಡೆಯಲು ನಗರಸಭೆಗೆ ಬರುವುದಿಲ್ಲ ಎಂದು ಹೇಳಿದರು. ಟಿ. ರಾಜಶೇಖರ್ ಮಾತನಾಡಿ, ಅಮೃತ್ ಯೋಜನೆ ನಗರಸಭೆಗೆ ಹಸ್ತಾಂತರವಾಗಿದ್ದರೂ ಇತ್ತೀಚೆಗೆ ನೀರು ಸರಬರಾಜಿ ನಲ್ಲಿ ವ್ಯತ್ಯಯ ಉಂಟಾಗಿತ್ತು ಎಂದು ಹೇಳುತ್ತಿದ್ದಂತೆ, ಶಾಸಕ ತಮ್ಮಯ್ಯ ಮಧ್ಯ ಪ್ರವೇಶಿಸಿ ಹೊಸ ಕಾಮಗಾರಿಯನ್ನು ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸದೆ ಹಸ್ತಾಂತರಕ್ಕೆ ಒಪ್ಪಿಕೊಂಡಿರುವ ಅಂದಿನ ಸಹಾಯಕ ಕಾರ್ಯಪಾಲಕರ ವಿರುದ್ಧ ಕ್ರಮ ಆಗಬೇಕು ಎಂದು ಹೇಳಿದರು. ಆಗಾಗ ಮೋಟಾರ್‌ಗಳು ಹಾಳಾಗುತ್ತಿವೆ. ಇವುಗಳ ದುರಸ್ತಿಗೆ ನಗರಸಭೆ ಹಣ ವೆಚ್ಚ ಮಾಡಲಾಗುತ್ತಿದೆ. ಯಗಚಿ ಯಲ್ಲಿರುವ ಜಾಕ್‌ವೆಲ್ ಕುಸಿದು ಬಿದ್ದರೆ ಚಿಕ್ಕಮಗಳೂರು ನಗರಕ್ಕೆ ತಿಂಗಳುಗಟ್ಟಲೆ ನೀರು ಸಿಗೋದಿಲ್ಲ, ಇದರ ಬಗ್ಗೆ ಕೂಡಲೇ ಗಮನ ಹರಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಕುಡಿವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಇತ್ತೀಚೆಗೆ ಸಭೆ ನಡೆಸಿದ್ದರು. ಯಗಚಿಯಲ್ಲಿ ಹೊಸದಾಗಿ ಜಾಕ್‌ವೆಲ್ ಅಳವಡಿಕೆಗೆ ಡಿಪಿಆರ್ ತಯಾರಿಸಲು ಅಧಿಕಾರಿ ಗಳಿಗೆ ಸೂಚನೆ ನೀಡಲಾಗಿದೆ ಎಂದರು.ದಿಢೀರ್ ರದ್ದಾದ ಸಭೆ:ಕಳೆದ ಆಗಸ್ಟ್ ಮಾಹೆಯಿಂದ ನವೆಂಬರ್ ವರೆಗಿನ ಜಮಾ- ಖರ್ಚಿಗೆ ಅನುಮೋದನೆ ಪಡೆಯುವ ವಿಷಯ ಚರ್ಚೆಗೆ ಬರುತ್ತಿದ್ದಂತೆ ನಾಲ್ಕು ತಿಂಗಳ ಜಮಾ- ಖರ್ಚಿಗೆ ದಿಢೀರ್ ಒಪ್ಪಿಗೆ ಸೂಚಿಸಲು ಸಾಧ್ಯವಿಲ್ಲ. ಪ್ರತಿ ತಿಂಗಳು ಸಾಮಾನ್ಯ ಸಭೆ ನಡೆಸಿದ್ದರೆ, ಆಯಾಯ ಸಭೆಯಲ್ಲಿ ಒಪ್ಪಿಗೆ ನೀಡಬಹುದಾಗಿತ್ತು ಎಂದು ಸದಸ್ಯ ಟಿ. ರಾಜಶೇಖರ್ ಹೇಳುತ್ತಿದ್ದಂತೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಹಾಗಾದರೆ ಇದಕ್ಕೆ ತಮ್ಮ ಒಪ್ಪಿಗೆ ಇಲ್ಲ ಎಂದು ಸಭೆಯ ನಡಾವಳಿ ಯಲ್ಲಿ ದಾಖಲಿಸಿಕೊಳ್ಳಲಾಗುವುದು ಎಂದು ಹೇಳಿದರು. ಆಗ ಜೆಡಿಎಸ್‌ನ ಎ.ಸಿ. ಕುಮಾರ್ ಮಾತನಾಡಿ, ಇದಕ್ಕೆ ತಮ್ಮ ವಿರೋಧವೂ ಇದೆ ಎನ್ನುತ್ತಿದ್ದಂತೆ, ಅಧ್ಯಕ್ಷರು ಮಧ್ಯ ಪ್ರವೇಶಿಸಿ ಕೈ ಎತ್ತುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಿ ಎಂದರು. ಬಿಜೆಪಿ ಹಾಗೂ ಜೆಡಿಎಸ್‌ನ 17 ಮಂದಿ ಸದಸ್ಯರು ಕೈ ಎತ್ತುವ ಮೂಲಕ ಜಮಾ-ಖರ್ಚಿಗೆ ಅನುಮೋದನೆ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಅನುಮೋದನೆ ಪಡೆಯಲು ತಮ್ಮ ಸಹ ಮತ ಇದೆ ಎಂದು ಕಾಂಗ್ರೆಸ್ ಸದಸ್ಯರ ಜತೆಗೆ ಶಾಸಕ ಎಚ್.ಡಿ. ತಮ್ಮಯ್ಯ, ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರು ಅಧ್ಯಕ್ಷ ಪೀಠದಿಂದ ಎದ್ದು ನಿಂತು ಬೆಂಬಲ ಸೂಚಿಸಿದರು. ಈ ಸಂಖ್ಯೆ 16 ಇತ್ತು. ಸಂಖ್ಯಾ ಬಲದಲ್ಲಿ ತಮಗೆ ಗೆಲುವಾಗಿದೆ ಎಂದು ಬಿಜೆಪಿ ಸದಸ್ಯರು ಸಮರ್ಥಿಸುತ್ತಿದ್ದಂತೆ, ಅಧ್ಯಕ್ಷರಿಗೆ ತಮ್ಮ ಒಂದು ಮತದ ಜತೆಗೆ ವಿವೇಚನೆಯ ಮತ್ತೊಂದು ಮತ ಇರುತ್ತದೆ ಅದ್ದರಿಂದ ಜಮಾ- ಖರ್ಚಿಗೆ ಅನುಮೋದನೆ ಸಿಕ್ಕಿದಂತಾ ಯಿತ್ತೆಂದು ಶಾಸಕ ತಮ್ಮಯ್ಯ ಹೇಳಿ ಸಭೆಯಿಂದ ಹೊರಗೆ ನಡೆದರು. ಆಗ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಸದಸ್ಯರು ಸಹ ಸಭಾಂಗಣದಿಂದ ಹೊರಗೆ ಹೋಗುತ್ತಿದ್ದಂತೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸ್ಥಳದಲ್ಲಿಯೇ ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಸದಸ್ಯಎ.ಸಿ. ಕುಮಾರ್, ಕಳ್ಳರ ರೀತಿ ಸಭೆಯಿಂದ ಹೊರಗೆ ಹೋಗಿದ್ದಾರೆ. ಸಭೆಯಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ತಮ್ಮ ಬೆಂಬಲ ಇಲ್ಲ. ಇಂದಿನ ಸಭೆಯಲ್ಲಿ ತೆಗೆದುಕೊಂಡಿರುವ ನಿಲುವಿನ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಲಾಗುವುದು ಎಂದು ಹೇಳಿದರು. ಕೆಲ ಸಮಯ ಧರಣಿ ನಡೆಸಿದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ನಂತರ ಪ್ರತಿಭಟನೆಯನ್ನು ಮೊಟಕುಗೊಳಿಸಿದರು.
20 ಕೆಸಿಕೆಎಂ 4ಚಿಕ್ಕಮಗಳೂರು ನಗರಸಭೆಯ ಸಾಮಾನ್ಯಸಭೆಯನ್ನು ಅಧ್ಯಕ್ಷರು ದಿಢೀರ್ ಮೊಟಕುಗೊಳಿಸಿ ಹೊರಗೆ ಹೋಗಿರುವುದನ್ನು ಖಂಡಿಸಿ ಬಿಜೆಪಿ ಹಾಗೂ ಜೆಡಿಎಸ್ ನಗರಸಭಾ ಸದಸ್ಯರು ಧರಣಿ ನಡೆಸಿದರು