
ಕನ್ನಡಪ್ರಭ ವಾರ್ತೆ, ತುಮಕೂರು
ಮಂಗಳವಾರ ನಗರದಲ್ಲಿ ಸಮೃದ್ಧಿ ಬೀದಿಬದಿ ವ್ಯಾಪಾರಿಗಳ ಸಂಘದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಕಷ್ಟದಲ್ಲಿರುವ ಬೀದಿ ಬದಿ ವ್ಯಾಪಾರಿಗಳ ಹೋರಾಟಕ್ಕೆ ಕನ್ನಡ ಸೇನೆ ಹಾಗೂ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ತಮ್ಮ ವ್ಯಾಪಾರ ಕಳೆದುಕೊಂಡಿರುವ ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ಜಾಗದ ವ್ಯವಸ್ಥೆ ಮಾಡದಿದ್ದರೆ ಬರುವ ಸೋಮವಾರ ನಗರಪಾಲಿಕೆ ಕಚೇರಿ ಎದುರು ತಮಟೆ ಚಳವಳಿ ನಡೆಸಲಾಗುವುದು. ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಪಾದಯಾತ್ರೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ನೀಡಲಾಗುವುದು ಎಂದರು.
ನಗರದ ವಿವಿಧ ರಸ್ತೆಗಳ ಫುಟ್‌ಪಾತ್‌ಗಳಲ್ಲಿ ಪಾದಚಾರಿಗಳ ಓಡಾಟಕ್ಕೆ ತೊಂದರೆ ಆಗದಂತೆ ಹಲವಾರು ವರ್ಷಗಳಿಂದ ಸಣ್ಣ ಪ್ರಮಾಣದ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ನಗರಪಾಲಿಕೆಯಿಂದ ಪರವಾನಗಿ, ಗುರುತಿನ ಚೀಟಿ ಪಡೆದಿದ್ದರು. ಬ್ಯಾಂಕ್ ಹಾಗೂ ಖಾಸಗಿಯವರಲ್ಲಿ ಸಾಲ ಪಡೆದು ವ್ಯವಹಾರ ಮಾಡಿಕೊಂಡಿದ್ದರು. ಇರದಲ್ಲೇ ತಮ್ಮ ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಈಗ ಏಕಾಏಕಿ ಫುಟ್‌ಪಾತ್ ವ್ಯಾಪಾರಿಗಳ ಅಂಗಡಿಗಳನ್ನು ಎತ್ತಂಗಡಿ ಮಾಡಿದ್ದು ಅವರು ಬದುಕು ಬೀದಿಗೆ ಬಂದು ಆತಂಕಕ್ಕೀಡಾಗಿದ್ದಾರೆ. ಕಾನೂನು ಪಾಲನೆ ಜೊತೆಗೆ ಮಾನವೀಯತೆಯನ್ನೂ ಅಧಿಕಾರಿಗಳು ಮೆರೆಯಬೇಕು. ಇವರ ವ್ಯಾಪಾರಕ್ಕೆ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಿ ಬದುಕಿಗೆ ಪುನರ್ ವ್ಯವಸ್ಥೆ ಕಲ್ಪಿಸಬೇಕು ಎಂದು ಡಾ. ಧನಿಯಾಕುಮಾರ್ ಹೇಳಿದರು.ಸಾಮಾನ್ಯವಾಗಿ ಅಧಿಕಾರಿಗಳು ಬಡವರ ಮೇಲೆ ಕಾನೂನಿನ ಅಧಿಕಾರ ಚಲಾಯಿಸುತ್ತಾರೆ. ಅನೇಕ ಶ್ರೀಮಂತರು ರಾಜಗಾಲುವೆ, ಫುಟ್‌ಪಾತ್ ಒತ್ತುವರಿ ಮಾಡಿ ಕಟ್ಟಡ ಕಟ್ಟಿದ್ದಾರೆ. ಪ್ರೆಮುಖ ರಸ್ತೆಗಳಲ್ಲಿ ವಾಣಿಜ್ಯ ಮಳಿಗೆಗಳಲ್ಲಿ ಪಾರ್ಕಿಂಗ್ ಜಾಗ ಬಿಡದೆ ನಿಯಮ ಉಲ್ಲಂಘಿಸಿದ್ದಾರೆ. ಅಂತಹವರ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದೇ ಬೀದಿ ಬದಿ ವ್ಯಾಪಾರಿಗಳ ವಿರುದ್ಧ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ ಎಂದರು.