)
- ಭದ್ರಾ ಮೇಲ್ದಂಡೆಗೆ 3 ಟಿಎಂಸಿ ನೀರು ಹರಿಸುವ ಆದೇಶ ಹಿಂಪಡೆಯಲು ತಾಕೀತು - - -
ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಾಯೋಗಿಕ ಚಾಲನೆಗೆ 3 ಟಿಎಂಸಿ ನೀರು ಬಿಡುವ ರೈತವಿರೋಧಿ ಆದೇಶವನ್ನು ರಾಜ್ಯ ಸರ್ಕಾರ ತಕ್ಷಣ ಹಿಂಪಡೆಯದಿದ್ದರೆ, ಗಾಂಧಿ ದಾರಿಯ ಹೋರಾಟ ನಡೆಸಿಕೊಂಡು ಬಂದ ರೈತರು ಮುಂದೆ ಭಗತ್ ಸಿಂಗ್ ರೀತಿಯ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಭಾರತೀಯ ರೈತ ಒಕ್ಕೂಟವು ಎಚ್ಚರಿಸಿದೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಗುರುವಾರ ಭಾರತೀಯ ರೈತ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ರೈತರು, ಮುಖಂಡರು, ಭದ್ರಾ ಡ್ಯಾಂನಿಂದ ಭದ್ರಾ ಮೇಲ್ದಂಡೆಗೆ ನೀರು ಕೊಡುವ ಸರ್ಕಾರದ ಆದೇಶವು ಅಚ್ಚುಕಟ್ಟು ರೈತರಿಗೆ ಮರಣಶಾಸನವಾಗಿದೆ. ಸರ್ಕಾರ ಇನ್ನೆರಡು ದಿನಗಳಲ್ಲೇ ತನ್ನ ಆದೇಶ ಹಿಂಪಡೆಯದಿದ್ದರೆ ದಾವಣಗೆರೆ ಅಚ್ಚುಕಟ್ಟು ರೈತರು ತೀವ್ರ ಸ್ವರೂಪದ ಹೋರಾಟ ನಡೆಸುವುದು ನಿಶ್ಚಿತ ಎಂದರು.ಭಾರತೀಯ ರೈತ ಒಕ್ಕೂಟದ ಗೌರವಾಧ್ಯಕ್ಷ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಮಾತನಾಡಿ, ಚಿತ್ರದುರ್ಗ ಜಿಲ್ಲೆ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ರಾಜ್ಯ ಸರ್ಕಾರವು ಭದ್ರಾ ಮೇಲ್ದಂಡೆಗೆ 3 ಟಿಎಂಸಿ ನೀರು ಹರಿಸಲು ಆದೇಶಿಸಿದ್ದು, ಹೀಗೆ ಆದೇಶ ಹೊರಡಿಸುವುದರ ಹಿಂದೆ ರಾಜಕೀಯವಿದೆ. ನೀರಿನ ವಿಚಾರದಲ್ಲಿ ರಾಜಕಾರಣ ಸಲ್ಲದು. ರೈತರು ಉಗ್ರ ಹೋರಾಟ ನಡೆಸಲು ಸರ್ಕಾರವೇ ಅವಕಾಶ ಮಾಡಿಕೊಟ್ಟು, ವೇದಿಕೆ ಮಾಡಿಕೊಡುತ್ತಿರುವುದು ಕೆಟ್ಟ ಸಂಸ್ಕೃತಿಯಾಗಿದೆ ಎಂದು ಎಚ್ಚರಿಸಿದರು.
ಭಾರತೀಯ ರೈತ ಒಕ್ಕೂಟದ ಮುಖಂಡ ಬೆಳವನೂರು ಬಿ.ನಾಗೇಶ್ವರ ರಾವ್ ಮಾತನಾಡಿ, ಭದ್ರಾ ಮೇಲ್ದಂಡೆಗೆ ಸದ್ಯ ನೀರು ಹರಿಸುವುದು ಬೇಡ. ತುಂಗಾ ನದಿಯಿಂದ ನೀರು ಎತ್ತಿಕೊಟ್ಟರೆ ನಮಗೆ ಅಭ್ಯಂತರವಿಲ್ಲ. ಭದ್ರಾ ಅಚ್ಚುಕಟ್ಟು ಕಾಲುವೆ ವ್ಯಾಪ್ತಿಯ ಅಕ್ರಮ ಪಂಪ್‌ಸೆಟ್‌ಗಳ ಸಂಖ್ಯೆ ಹೆಚ್ಚಾಗಿದೆ. ಇದನ್ನು ತಡೆಯುವಲ್ಲಿ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲಾ ಆಡಳಿತಗಳು ವಿಫಲವಾಗಿವೆ. ಅಧಿಕಾರಿಗಳು ಬರೀ ಲೇಔಟ್ ಅನುಮೋದನೆ, ನವೀಕರಣಕ್ಕೆ ಸೀಮಿತವಾಗುತ್ತಿದ್ದಾರೆ. ಭದ್ರಾ ಅಚ್ಚುಕಟ್ಟು ಪ್ರದೇಶದ ಸಂಸದರು, ಶಾಸಕರು ಅಕ್ರಮ ಪಂಪ್ ಸೆಟ್‌ಗಳ ತೆರವಿಗೆ ಸಂಬಂಧಿಸಿದ ಸುಪ್ರೀಂ ಮತ್ತು ಹೈಕೋರ್ಟ್ ಆದೇಶ ಪಾಲಿಸದಿದ್ದರೆ, ಆ ಎಲ್ಲರ ವಿರುದ್ಧ ರೈತರು ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
- - -
ದಾವಣಗೆರೆ ಸರ್ಕ್ಯೂಟ್ ಹೌಸ್‌ನಲ್ಲಿ ಗುರುವಾರ ಭಾರತೀಯ ರೈತ ಒಕ್ಕೂಟದ ಧುರೀಣ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ನೇತೃತ್ವದಲ್ಲಿ ಭದ್ರಾ ಅಚ್ಚುಕಟ್ಟು ರೈತರ ಸಭೆ ನಡೆಯಿತು.