ಬೈಲಹೊಂಗಲ ಜಿಲ್ಲೆಯಾಗದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

KannadaprabhaNewsNetwork |  
Published : Oct 02, 2024, 01:18 AM IST
ಬೈಲಹೊಂಗಲ ಏಕೆ ಜಿಲ್ಲೆಯಾಗಬೇಕೆಂಬ ದಾಖಲೆಗಳ ಕಿರು ಹೊತ್ತಿಗೆಯ ಮನವಿಯನ್ನು ತಹಸೀಲ್ದಾರಗೆ ಸಲ್ಲಿಸಲಾಯಿತು. ಪ್ರಭುನೀಲಕಂಠ ಸ್ವಾಮೀಜಿ, ಶಾಸಕ ಮಹಾಂತೇಶ ಕೌಜಲಗಿ, ಶಿವರಂಜನ ಬೋಳನ್ನವರ ಇತರರು ಇದ್ದರು. | Kannada Prabha

ಸಾರಾಂಶ

ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯನ್ನು ವಿಭಜಿಸುವುದಾದರೆ ಉಪವಿಭಾಗ ಕೇಂದ್ರವಾದ ಬೈಲಹೊಂಗಲ ಜಿಲ್ಲೆ ಮಾಡಲೇಬೇಕು. ಒಂದು ವೇಳೆ ಅನ್ಯಾಯವಾದರೆ ಜನತೆಯೊಂದಿಗೆ ಸೇರಿ ಉಗ್ರ ಹೋರಾಟಕ್ಕಿಳಿಯುವುದಾಗಿ ಶಾಸಕ ಮಹಾಂತೇಶ ಕೌಜಲಗಿ ಸರ್ಕಾರಕ್ಕೆ ಖಡಕ್‌ ಸಂದೇಶ ರವಾನಿಸಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯನ್ನು ವಿಭಜಿಸುವುದಾದರೆ ಉಪವಿಭಾಗ ಕೇಂದ್ರವಾದ ಬೈಲಹೊಂಗಲ ಜಿಲ್ಲೆ ಮಾಡಲೇಬೇಕು. ಒಂದು ವೇಳೆ ಅನ್ಯಾಯವಾದರೆ ಜನತೆಯೊಂದಿಗೆ ಸೇರಿ ಉಗ್ರ ಹೋರಾಟಕ್ಕಿಳಿಯುವುದಾಗಿ ಶಾಸಕ ಮಹಾಂತೇಶ ಕೌಜಲಗಿ ಸರ್ಕಾರಕ್ಕೆ ಖಡಕ್‌ ಸಂದೇಶ ರವಾನಿಸಿದರು.

ಪಟ್ಟಣದ ಮೂರುಸಾವಿರ ಶಾಖಾಮಠದಲ್ಲಿ ಜಿಲ್ಲಾ ಹೋರಾಟ ಸಮಿತಿ ಮಂಗಳವಾರ ಹಮ್ಮಿಕೊಂಡ ಸಭೆಯಲ್ಲಿ ಪಾಲ್ಗೊಂಡು ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿ, ಬೈಲಹೊಂಗಲನ್ನೇಕೆ ಜಿಲ್ಲೆಯನ್ನಾಗಿ ಮಾಡಬೇಕೆಂಬ ದಾಖಲೆಗಳ ಕಿರುಹೊತ್ತಿಗೆಯೊಂದಿಗೆ ಈ ಭಾಗದ ಮುಖಂಡರ ನಿಯೋಗದಲ್ಲಿ ತೆರಳಿ ಮನವಿ ಸಲ್ಲಿಸಲು ಮುಖ್ಯಮಂತ್ರಿಗಳ ಸಮಯ ನಿಗದಿಪಡಿಸಲಾಗುವುದು. ನಿಯೋಗದಲ್ಲಿ ರಾಮದುರ್ಗ, ಕಿತ್ತೂರು ಹಾಗೂ ಇತರ ಕ್ಷೇತ್ರಗಳ ಶಾಸಕರು ಪಾಲ್ಗೊಳ್ಳಲಿದ್ದಾರೆ.

ಈಗಾಗಲೇ ಮುಖ್ಯಮಂತ್ರಿಗಳು ಜಿಲ್ಲಾವಿಭಜನೆ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಈಚೆಗೆ ಬೆಳಗಾವಿಗೆ ಬಂದಾಗ ತಿಳಿಸಿದ್ದಾರೆ. ಒಂದು ವೇಳೆ ಜಿಲ್ಲೆ ವಿಭಜನೆ ವಿಷಯ ಬಂದರೆ ಹೋರಾಟಗಾರರ ನಾಡು ಬೈಲಹೊಂಗಲ ಜಿಲ್ಲೆಯಾಗಲು ಎಲ್ಲ ಅರ್ಹತೆ ಇರುವ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಹೋರಾಟ ಸಮಿತಿ ಮುಖಂಡ ಶಿವರಂಜನ ಬೋಳನ್ನವರ ಮಾತನಾಡಿ, ಮೊದಲಿನಿಂದಲೂ ಗಡಿಭಾಗ ಬೆಳಗಾವಿ ಅಖಂಡವಾಗಿರಬೇಕು ಎಂಬ ವಾದ ನಮ್ಮದಾಗಿದ್ದು, ಹಿಂದೆ ಜೆ.ಎಚ್. ಪಟೇಲ್‌ರು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಹೋರಾಟಕ್ಕೆ ಮಣಿದು ಜಿಲ್ಲಾವಿಭಜನೆ ಕೈಬಿಟ್ಟು ಅಂದಿನ ಸಭಾಪತಿ ದಿ.ಚಂದ್ರಶೇಖರ ಮಾಮನಿ ಮೂಲಕ ಪತ್ರ ರವಾನಿಸಿದ್ದನ್ನು ಇಂದಿನ ಸರ್ಕಾರ ನೆನಪಿಸಿಕೊಳ್ಳಬೇಕು. ರಾಜಕೀಯ ಪ್ರಭಾವಕ್ಕೆ ಮಣಿಯಬಾರದೆಂದು ಎಚ್ಚರಿಕೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಪ್ರಭುನೀಲಕಂಠ ಸ್ವಾಮೀಜಿ ಮಾತನಾಡಿ, ಎಲ್ಲರೂ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಹೋರಾಡೋಣ. ಉಪವಿಭಾಗದ ಮಠಾಧೀಶರನ್ನು ಸಂಪರ್ಕಿಸಿ ಮುಖ್ಯಮಂತ್ರಿಗಳನ್ನು ಭೇಟಿಯಾಗೋಣ ಎಂದು ಹೇಳಿದರು.

ಬಿಜೆಪಿ ಮುಖಂಡ ವಿಜಯ ಮೆಟಗುಡ್ಡ ಮಾತನಾಡಿ, ಬ್ರಿಟಿಷರ ಕಾಲದಿಂದಲೂ ಭೌಗೋಳಿಕವಾಗಿ ಕೇಂದ್ರ ಸ್ಥಾನದಲ್ಲಿರುವ ಬೈಲಹೊಂಗಲ ಜಿಲ್ಲಾ ಕೇಂದ್ರವಾಗಲು ಅರ್ಹತೆ ಹೊಂದಿದೆ ಎಂಬುದನ್ನು ಸರ್ಕಾರ ಅರಿಯಬೇಕೆಂದರು.

ವಕೀಲ ಎಫ್.ಎಸ್. ಸಿದ್ದನಗೌಡರ, ಮಹೇಶ ಬೆಲ್ಲದ, ವಕೀಲರ ಸಂಘದ ಅಧ್ಯಕ್ಷ ಎಂ.ಆರ್. ಮೆಳವಂಕಿ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಪುರಸಭೆ ಉಪಾಧ್ಯಕ್ಷ ಬುಡ್ಡೆಸಾಬ ಶಿರಸಂಗಿ, ಮುಖಂಡರಾದ ಬಿ.ಎಂ.ಚಿಕ್ಕನಗೌಡರ, ಸಿ.ಆರ್. ಪಾಟೀಲ, ಮಲ್ಲಿಕಾರ್ಜುನ ಹುಂಬಿ, ಮಹಾಂತೇಶ ತುರಮರಿ, ಈಶ್ವರ ಹೋಟಿ, ಮಾತನಾಡಿ, ರಾಜಕಾರಣ ಬದಿಗಿಟ್ಟು ಪಕ್ಷಾತೀತವಾಗಿ ಹೋರಾಟ ಮಾಡೋಣ ಎಂದರು.

ಮಹಾಂತಯ್ಯ ಶಾಸ್ತ್ರೀ ಆರಾದ್ರಿಮಠ, ಬಿಜೆಪಿ ಮಂಡಳ ಅಧ್ಯಕ್ಷ ಸುಭಾಶ ತುರಮರಿ, ಪುರಸಭೆ ಸದಸ್ಯರಾದ ಬಸವರಾಜ ಜನ್ಮಟ್ಟಿ, ಅರ್ಜುನ ಕಲಕುಟಕರ ಮುಖಂಡರಾದ ಮಡಿವಾಳಪ್ಪ ಹೋಟಿ, ಮಹಾಂತೇಶ ಅಕ್ಕಿ, ವಿಜಯ ಪತ್ತಾರ, ಮಹೇಶ ಹರಕುಣಿ, ಉಮೇಶ ಬೊಳತ್ತಿನ, ಶ್ರೀಕಾಂತ ಶಿರಹಟ್ಟಿ, ಶ್ರೀಕಾಂತ ಸುಂಕದ, ಶ್ರಿಶೈಲ ಯಡಳ್ಳಿ, ಬಿ.ಬಿ, ಗಣಾಚಾರಿ, ಪ್ರಮೋದಕುಮಾರ ವಕ್ಕುಂದಮಠ, ಮೋಹನ ಪಾಟೀಲ, ಬಾಬು ಸಂಗೊಳ್ಳಿ ವಕೀಲರಾದ ಅದೃಶ್ಯ ಸಿದ್ರಾಮಣಿ, ವಿ.ಜಿ. ಕಟದಾಳ, ಎಸ್.ವಿ. ಸಿದ್ದಮನಿ, ದುಂಡೇಶ ಗರಗದ, ನಾರಾಯಣ ನಲವಡೆ, ಸಂತೋಷ ಹಡಪದ, ಸುಭಾಷ ಬಾಗೇವಾಡಿ, ಗುಂಡಪ್ಪ ಸನದಿ, ಶ್ರೀಕಾಂತ ಮಾಳಕ್ಕನವರ, ಈರಪ್ಪ ಹರಕುಣಿ, ಗಂಗಪ್ಪ ಗುಗ್ಗರಿ ಹಾಗೂ ನೂರಾರು ಜನರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ